ಸಾರಾಂಶ
ಶಿವಾನಂದ ಅಂಗಡಿಅಣ್ಣಿಗೇರಿ: ''''''''ನಂಬಿಕೆಟ್ಟವರಿಲ್ಲವೋ ಮಣ್ಣನ್ನು'''''''' ಎಂಬ ಚಿತ್ರಗೀತೆಯೊಂದನ್ನು ನೀವು ಕೇಳಿರುತ್ತೀರಿ, ಈ ಸಾಲುಗಳನ್ನು ಸಾಕಾರಗೊಳಿಸುವಂತೆ ಇಲ್ಲೊಬ್ಬ ರೈತ ಬರೀ ನಾಲ್ಕು ಎಕರೆ ಹೊಲದಲ್ಲಿ ಈರುಳ್ಳಿ ಬೆಳೆದು ಲಕ್ಷೋಪಲಕ್ಷ ರು.ಗಳನ್ನು ಲಾಭ ಮಾಡಿಕೊಂಡಿದ್ದಾನೆ.ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಈರಣ್ಣ ಸೊಲಬಣ್ಣವರ ಎಂಬ ರೈತ ಈ ಸಾಧನೆ ಮಾಡಿದ್ದು, ಕೃಷಿಯಲ್ಲಿ ಪದೇ ಪದೇ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕಿದ ಲಕ್ಷಾಂತರ ರೈತರಿಗೆ ಪ್ರೇರಣೆಯಾಗಿದ್ದಾರೆ.ಈರಣ್ಣ ಅವರು ಚಿಕ್ಕ ಹಿಡುವಳಿದಾರರಾಗಿದ್ದು, 2 ಎಕರೆ ಮಾತ್ರ ಜಮೀನು ಹೊಂದಿದ್ದಾರೆ. ಪ್ರತಿ ವರ್ಷ 4 ಎಕರೆಗೆ ₹80 ಸಾವಿರ ಲೆಕ್ಕದಲ್ಲಿ ₹2 ಲಕ್ಷದಲ್ಲಿ ಅಡ್ನೂರಿನ 20 ಎಕರೆ ಹೊಲವನ್ನು ಲಾವಣಿ ಮಾಡುತ್ತಾರೆ. ಈ ಪೈಕಿ 4 ಎಕರೆ ಹೊಲದಲ್ಲಿ ಈರುಳ್ಳಿ ಬೆಳೆದಿದ್ದು, ಬಂಪರ್ ಬೆಳೆ ತೆಗೆದಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿಯೇ 350 ಪ್ಯಾಕೆಟ್ ಈರುಳ್ಳಿ ಮಾರಾಟ ಮಾಡಿದ್ದು, ಕ್ವಿಂಟಲ್‌ಗೆ ₹3200ದಿಂದ ₹4 ಸಾವಿರ ವರೆಗೂ ಮಾರಾಟ ಮಾಡಿದ್ದಾರೆ. 200 ಕ್ವಿಂಟಲ್ ಈರುಳ್ಳಿ ಮಾರಿದ್ದು, ಇದರಿಂದ ₹5.50 ಲಕ್ಷ ವರೆಗೂ ಹಣ ಬಂದಿದೆ.ಬೇಸಿಗೆಯಲ್ಲಿ ನೇಗಿಲು ಹೊಡೆದಿದ್ದು, ಎರಡು ಸಲ ದಿಂಡಿನ ಕುಂಟೆ, ಒಮ್ಮೆ ರೂಟರ್ ಹೊಡೆದಿದ್ದಾರೆ. ಬಿತ್ತನೆ ಬೀಜ ಸೇರಿದಂತೆ ಗೊಬ್ಬರ, ಕಳೆ ತೆಗೆಯುವ ಆಳಿನ ಕೂಲಿ ಹೀಗೆ ನಾಲ್ಕು ಎಕರೆ ಹೊಲಕ್ಕೆ ಎರಡು ಲಕ್ಷ ರು.ವರೆಗೂ ಖರ್ಚು ಮಾಡಿದ್ದು, ಅವರಿಗೆ ₹3.50 ಲಕ್ಷ ಲಾಭವಾಗಿದೆ.
ಗದುಗಿನ ಈರುಳ್ಳಿ ವ್ಯಾಪಾರಸ್ಥ ಕಾಶೀನಾಥ ಹಂಜಿಗಿ ಎಂಬವರು ಇವರ ಈರುಳ್ಳಿಯನ್ನು ಎರಡ್ಮೂರು ಬಾರಿ ಖರೀದಿಸಿದ್ದಾರೆ. ಬಿಎ, ಬಿಇಡಿ ಪದವೀಧರಾಗಿರುವ ಈರಣ್ಣ ಅವರು ಪ್ರೌಢಶಾಲಾ ಶಿಕ್ಷಕರಾಗಬೇಕಾಗಿತ್ತು. ಆದರೆ ದಾಖಲೆಯ ದರಕ್ಕೆ ಲಾವಣಿ ಹೊಲ ಮಾಡಿ ಕೃಷಿಯಲ್ಲಿ ಲಾಭ ಮಾಡಿಕೊಳ್ಳುತ್ತ ನಾಡಿನ ಲಕ್ಷಾಂತರ ರೈತರಿಗೆ ಕೃಷಿ ಮೇಷ್ಟ್ರ ಎನಿಸಿಕೊಂಡಿದ್ದಾರೆ.ಈರಣ್ಣನವರ ಕೃಷಿ ಸಾಧನೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂಗಾರಿಗೆ 8 ಎಕರೆ ಹೆಸರು ಕಾಳು, 4 ಎಕರೆ ಉದ್ದು ಬೆಳೆದಿದ್ದಾರೆ. 2 ಎಕರೆ ಬಳ್ಳಿ ಶೇಂಗಾ ಬೆಳೆದಿದ್ದಾರೆ. ಎಕರೆಗೆ 5 ಕ್ವಿಂಟಲ್ ವರೆಗೆ ಹೆಸರುಕಾಳು ಬೆಳೆದಿದ್ದಾರೆ. ಕಳೆದ ವರ್ಷ 16 ಎಕರೆ ಹೊಲದಲ್ಲಿ ಹೆಸರು ಕಾಳು ಬೆಳೆದಿದ್ದು, ಎಕರೆಗೆ 8 ಕ್ವಿಂಟಲ್‌ನಂತೆ 148 ಕ್ವಿಂಟಲ್ ಹೆಸರು ಕಾಳು ಬೆಳೆದಿದ್ದಾರೆ. 2022ರಲ್ಲಿ 10 ಎಕರೆ ಹೊಲದಲ್ಲಿ ಕಡ್ಲೆ ಬೆಳೆದಿದ್ದ ಇವರು ಎಕರೆಗೆ 10 ಚೀಲದಂತೆ 120 ಚೀಲ ಕಡ್ಲೆ ಬೆಳೆದು ಭೇಷ್ ಎನಿಸಿಕೊಂಡಿದ್ದಾರೆ. ಕೃಷಿ ಜತೆ ಜತೆಗೆ ಹೈನುಗಾರಿಕೆಯನ್ನು ಮಾಡುತ್ತಿರುವ ಇವರು ಆಕಳು, ಎಮ್ಮೆ ಸೇರಿ 30 ರಾಸುಗಳನ್ನು ಸಾಕಿದ್ದಾರೆ. ಪ್ರತಿ ವರ್ಷ 50ರಿಂದ 60 ಟ್ರಿಪ್ ಸಗಣಿ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಟ್ರಿಪ್‌ಗೆ ₹4 ಸಾವಿರದಂತೆ ಸಗಣಿ ಗೊಬ್ಬರ ಮಾರುತ್ತಿದ್ದು, ಇದರಿಂದ ಬರುವ ಲಕ್ಷಾಂತರ ಹಣವೇ ಇವರಿಗೆ ಆರ್ಥಿಕ ಶಕ್ತಿ ತುಂಬಿದೆ.ಬೇಸಿಗೆಯಲ್ಲೇ ಕಳೆ ಬೀಜ ನಾಶಕ್ಕೆ ಕ್ರಮಹೊಲದಲ್ಲಿ ಕಳೆ ಬೆಳೆಯದಂತೆ ಈರಣ್ಣವರು ಬೇಸಿಗೆಯಲ್ಲಿಯೇ ಯೋಜನೆ ರೂಪಿಸುತ್ತಾರೆ. ಲಾವಣಿ ಹೊಲ ಆದರೂ ನೇಗಿಲು ಹೊಡೆಯುವುದನ್ನು ಮರೆಯುವುದಿಲ್ಲ. ಬೆಳೆಗೆ ತಕ್ಕಂತೆ ತಯಾರಿ ಮಾಡಿಕೊಳ್ಳುತ್ತಾರೆ. ಬೇವಿನಹಿಂಡಿ, ಅಗತ್ಯಬಿದ್ದರೆ ಕೊಟ್ಟಿಗೆ ಗೊಬ್ಬರ ಸಹ ಹಾಕುತ್ತಾರೆ. ನೇಗಿಲು ಹೊಡೆಯುವುದರಿಂದ ಹುಲ್ಲು ಹಾಗೂ ಕಸದ ಬೀಜ ಭೂಮಿಯ ಆಳಕ್ಕೆ ಹೋಗುತ್ತದೆ. ಹೀಗಾಗಿ ಮಳೆ ಸುರಿದರೂ ಹೆಚ್ಚು ಹುಲ್ಲು ಬರುವುದಿಲ್ಲ. ಹೊಲಗಳು ಸ್ವಚ್ಛವಾಗಿದ್ದರೆ ಬೆಳೆ ಸಹ ಹುಲುಸಾಗಿ ಬೆಳೆಯುತ್ತದೆ. ಇದೇ ನಮ್ಮ ಯಶಸ್ಸಿನ ಗುಟ್ಟು ಎಂದು ವಿವರಿಸುತ್ತಾರೆ ಸೊಲಬಣ್ಣನವರ.ಕಳೆದುಕೊಂಡವರೇ ಹೆಚ್ಚುಧಾರವಾಡ ಜಿಲ್ಲೆ ಸೇರಿದಂತೆ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಕೈಸುಟ್ಟುಕೊಂಡವರೇ ಹೆಚ್ಚು. ಇಡೀ ಹೊಲ ಈರುಳ್ಳಿ ಹಾಕುತ್ತಾರೆ. ಜತೆಗೆ ಮಧ್ಯದ ಸಾಲುಗಳ ರೂಪದಲ್ಲಿ ಮೆಣಸಿನಕಾಯಿ ಸಹ ಬೆಳೆಯುತ್ತಾರೆ. ಮಳೆ ಕೈಕೊಟ್ಟರೆ ಬೆಳೆಯುವುದಿಲ್ಲ. ಜಾಸ್ತಿ ಮಳೆ ಬಂದರೂ ಈರುಳ್ಳಿ ತಡೆಯುವುದಿಲ್ಲ. ಇಳುವರಿ ಜಾಸ್ತಿ ಬಂದಾಗ ದರ ಇರುವುದಿಲ್ಲ. ಹೀಗಾಗಿ ಈರುಳ್ಳಿ ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ.ಹಳ್ಳಿಕೇರಿ ಗ್ರಾಮದಲ್ಲಿ ನಾವು ಚಿಕ್ಕಹಿಡುವಳಿದಾರರು, ಆದರೆ ಕೃಷಿಯಲ್ಲಿ ಕೈಗೊಂಡ ಹಲವು ಕ್ರಮಗಳು ಹೆಚ್ಚು ಉತ್ಪನ್ನ ತೆಗೆಯಲು ಕಾರಣವಾಗಿದೆ. 2019ರಿಂದಲೂ ಭೂಮಿ ತಾಯಿ ನಮ್ಮನ್ನು ಕೈಬಿಟ್ಟಿಲ್ಲ. ಶ್ರಮಕ್ಕೆ ಮೀರಿ ಪ್ರತಿಫಲ ಕೊಡುತ್ತಿದ್ದಾಳೆ ಎಂದು ಹಳ್ಳಿಕೇರಿ ರೈತ ಈರಣ್ಣ ಸೊಲಬಣ್ಣವರ ಹೇಳಿದರು.ಹಳ್ಳಿಕೇರಿಯ ಈರಣ್ಣ ಸೊಲಬಣ್ಣವರ ನಮ್ಮಲ್ಲಿ ಅಕ್ಟೋಬರ್ ಮಳೆಗಿಂತ ಮೊದಲೇ ನಮ್ಮಲ್ಲಿ ಎರಡ್ಮೂರು ಸಲ ಈರುಳ್ಳಿ ಮಾರಾಟ ಮಾಡಿದ್ದು, ₹3200ರಿಂದ ₹4 ಸಾವಿರ ವರೆಗೆ ಉತ್ತಮ ದರ ಅವರ ಈರುಳ್ಳಿಗೆ ದೊರೆತಿದೆ ಎಂದು ಈರುಳ್ಳಿ ವ್ಯಾಪಾರಸ್ಥ ಕಾಶೀನಾಥ ಹಂಜಗಿ ಹೇಳಿದರು.