ಹಿಂಗಾರು ಹಂಗಾಮಿಗೆ ಸಿದ್ಧನಾದ ರೈತ!

| Published : Oct 05 2024, 01:37 AM IST

ಸಾರಾಂಶ

ಮುಂಗಾರು ಹಂಗಾಮಿಗೆ ಬಿತ್ತಿದ ಹತ್ತಿ, ಮೆಣಸಿನಕಾಯಿ ಅಂತಹ ಕೆಲವು ಬೆಳೆಗಳು ವರ್ಷದ ಬೆಳೆಗಳು. ಈ ಹಿನ್ನೆಲೆಯಲ್ಲಿ ಮುಂಗಾರಿಗೆ ಹೆಚ್ಚಿನ ಬಿತ್ತನೆ ಪ್ರದೇಶವಿದ್ದು, ಹಿಂಗಾರಿಗೆ ಇಳಿಮುಖವಾಗಲಿದೆ. ಮುಂಗಾರಿಗಿಂತ ಹೆಚ್ಚು ಹಿಂಗಾರು ರೈತರಿಗೆ ಹಣದ ಬೆಳೆಯಾಗಿದ್ದು, ಖರ್ಚು ಸಹ ಕಡಿಮೆ.

ಧಾರವಾಡ:

ಮುಂಗಾರು ಹಂಗಾಮಿನ ರೈತಾಪಿ ಚಟುವಟಿಕೆ ಮುಗಿಸಿದ ರೈತರು, ಹಿಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಹದವಾದ ಮಳೆಗೆ ರೈತರು ಹಿಂಗಾರು ಬಿತ್ತನೆಗಾಗಿ ತಮ್ಮ ಹೊಲಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಮುಂಗಾರಿನಲ್ಲಿ ಹೆಸರು, ಉದ್ದು, ಶೇಂಗಾ, ಸೋಯಾ ಅಂತಹ ಬೆಳೆಗಳನ್ನು ಒಕ್ಕಣೆ ಮಾಡಿರುವ ರೈತರು ಹಿಂಗಾರು ಬಿತ್ತನೆಗೆ ಜಮೀನುಗಳನ್ನು ಟ್ರ್ಯಾಕ್ಟರ್‌ ಹಾಗೂ ಎತ್ತುಗಳ ಮೂಲಕ ಹರಗುವ ಮೂಲಕ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.

2 ಲಕ್ಷ ಹೆಕ್ಟೇರ್‌ ಗುರಿ:

ಹಿಂಗಾರಿನ ಪ್ರಮುಖ ಬೆಳೆ ಕಡಲೆ. ಜವಾರಿ ಹಾಗೂ ದೊಡ್ಡ ಕಡಲೆ ಎಂದು ಎರಡು ರೀತಿಯಾಗಿದ್ದು ಕೃಷಿ ಇಲಾಖೆ ಪ್ರಕಾರ ಅಂದಾಜು 2 ಲಕ್ಷ ಹೆಕ್ಟೇರ್‌ ಹಿಂಗಾರು ಬಿತ್ತನೆ ಪ್ರದೇಶ ಪೈಕಿ 1.30 ಲಕ್ಷ ಹೆಕ್ಟೇರ್‌ ಕಡಲೆ ಬಿತ್ತನೆಯ ನಿರೀಕ್ಷೆ ಹೊಂದಲಾಗಿದೆ. ಜೋಳ 35 ಸಾವಿರ ಹೆಕ್ಟೇರ್‌, ಗೋಧಿ 19 ಸಾವಿರ ಹೆಕ್ಟೇರ್‌, ಗೋವಿನ ಜೋಳ 7600 ಹೆಕ್ಟೇರ್‌, ಕುಸುಬೆ 6 ಸಾವಿರ ಹೆಕ್ಟೇರ್‌, ಹುರುಳಿ 3700 ಹೆಕ್ಟೇರ್‌, ಸೂರ್ಯಕಾಂತಿ 3375 ಹೆಕ್ಟೇರ್‌ ಹಾಗೂ ಹಿಂಗಾರಿ ಶೇಂಗಾ ಒಂದು ಸಾವಿರ ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂಗಾರಿನಲ್ಲಿ 2.70 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶದಲ್ಲಿ ಬೆಳೆಗಳನ್ನು ತೆಗೆದಿರುವ ರೈತರು ಮಳೆ ಹಾಗೂ ವಾತಾವರಣ ಪ್ರತಿಕೂಲದಿಂದ ಈ ಬಾರಿ ಅಷ್ಟೋ-ಇಷ್ಟೋ ಇಳುವರಿ ತೆಗೆದಿದ್ದಾರೆ. ಮುಂಗಾರಿನಲ್ಲಿ ಹೆಸರು, ಉದ್ದು ಪ್ರಮುಖ ಬೆಳೆಯಾಗಿದ್ದು, ನಿರೀಕ್ಷಿತ ಪ್ರಮಾಣದ ಬೆಲೆ ಬರದ ಕಾರಣ ಶೇ. 80ರಷ್ಟು ರೈತರು ಇನ್ನೂ ಮುಂಗಾರು ಇಳುವರಿಯನ್ನು ಮಾರದೇ ಮನೆಯಲ್ಲಿಯೇ ಕಾಪಿಟ್ಟುಕೊಂಡಿದ್ದಾರೆ. ಇಂದು-ನಾಳೆ ಉತ್ತಮ ದರ ಬರಬಹುದು ಎಂಬ ನಿರೀಕ್ಷೆ ಹೊಂದಲಾಗಿದ್ದು, ಇದೇ ಸಮಯದಲ್ಲಿ ಹಿಂಗಾರು ಹಂಗಾಮು ಸಹ ಬಂದಿದ್ದು, ರೈತರಿಗೆ ಖರ್ಚು-ವೆಚ್ಚ ನಿಭಾಯಿಸುವುದು ಕಷ್ಟವಾಗಿದೆ. ಹಿಂಗಾರಿಗೆ ಹೋಲಿಸಿದರೆ ಮುಂಗಾರಿಗೆ ಹೆಚ್ಚು ವೆಚ್ಚ. ಹಿಂಗಾರು ಬೆಳೆಗಳು ಬರೀ ವಾತಾವರಣದ ಮೇಲೆಯೇ ಬೆಳೆಯುತ್ತಿದ್ದು ಅದೇ ಧೈರ್ಯದಲ್ಲಿ ಹಿಂಗಾರಿಗೆ ಸಜ್ಜಾಗುತ್ತಿದ್ದೇವೆ. ಹೊಲಗಳನ್ನು ಸದ್ಯ ಹಸನು ಮಾಡುತ್ತಿದ್ದು ಬಿತ್ತನೆ ಬೀಜಗಳನ್ನು ಸಹ ಖರೀದಿ ಮಾಡಿದ್ದೇವೆ. ದಸರಾ ಮುಗಿಯುವದರೊಳಗೆ ಬಿತ್ತನೆ ಮಾಡಲು ಯೋಜಿಸಲಾಗಿದೆ ಎಂದು ಯಾದವಾಡ ಗ್ರಾಮದ ವಿಠ್ಠಲ ದಿಂಡಲಕೊಪ್ಪ ಹೇಳಿದರು.

ಮುಂಗಾರು ಹಂಗಾಮಿಗೆ ಬಿತ್ತಿದ ಹತ್ತಿ, ಮೆಣಸಿನಕಾಯಿ ಅಂತಹ ಕೆಲವು ಬೆಳೆಗಳು ವರ್ಷದ ಬೆಳೆಗಳು. ಈ ಹಿನ್ನೆಲೆಯಲ್ಲಿ ಮುಂಗಾರಿಗೆ ಹೆಚ್ಚಿನ ಬಿತ್ತನೆ ಪ್ರದೇಶವಿದ್ದು, ಹಿಂಗಾರಿಗೆ ಇಳಿಮುಖವಾಗಲಿದೆ. ಮುಂಗಾರಿಗಿಂತ ಹೆಚ್ಚು ಹಿಂಗಾರು ರೈತರಿಗೆ ಹಣದ ಬೆಳೆಯಾಗಿದ್ದು, ಖರ್ಚು ಸಹ ಕಡಿಮೆ. ಈ ಕಾರಣದಿಂದ ಸರಿಯಾದ ಸಮಯ ನೋಡಿ ಹಿಂಗಾರು ಬಿತ್ತನೆಗೆ ರೈತರು ಯೋಜಿಸಿದ್ದಾರೆ. ಅದೇ ರೀತಿ ಕೃಷ ಇಲಾಖೆ ಸಹ ಹಿಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜ ಹಾಗೂ ಗೊಬ್ಬರದ ಸಿದ್ಧತೆ ಸಹ ಕೈಗೊಂಡಿದ್ದಾರೆ.ಮುಂಗಾರಿನಲ್ಲಿ ಕೆಲವೆಡೆ ಒಕ್ಕಣೆ ಸಮಯದಲ್ಲಿ ಮಳೆಯಾಗಿದ್ದು ಬಿಟ್ಟರೆ ಉತ್ತಮ ಇಳುವರಿ ನಿರೀಕ್ಷೆ ಹೊಂದಲಾಗಿದೆ. ಹಿಂಗಾರು ಬಿತ್ತನೆಗೆ ಬೇಕಾದ ಮಳೆ ಹದವಾಗಿದ್ದು, ಕೆಲವೇ ದಿನಗಳಲ್ಲಿ ಬಿತ್ತನೆ ಶುರುವಾಗಲಿದೆ. ಇದೀಗ ಕೃಷಿ ಚಟುವಟಿಕೆಗಳು ಗರಿಗೆದರಿದ್ದು ಹವಾಮಾನ ಮುನ್ಸೂಚನೆಯಂತೆ ರೈತರು ಕಡಲೆ, ಜೋಳ, ಗೋದಿ ಬಿತ್ತನೆ ಮಾಡಲಿದ್ದಾರೆ. ಹಿಂಗಾರು ಹಂಗಾಮಿಗೆ ಕೃಷಿ ಇಲಾಖೆ ಬೇಕಾದ ಸಿದ್ಧತೆಯನ್ನು ಕೈಗೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.