ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ರೈತ

| Published : Feb 12 2024, 01:35 AM IST

ಸಾರಾಂಶ

ಮಹಾಲಿಂಗಪುರ: ಪಟ್ಟಣಕ್ಕೆ ಮೊಸರು ಮಾರಲು ಬಂದ ಸಂಗಾನಟ್ಟಿ ಗ್ರಾಮದ ಅಜ್ಜಿಯೋರ್ವಳು ಪಟ್ಟಣದ ನಡುಚೌಕಿ ಮುಖಾಂತರ ಮೊಸರು ಮಾರುತ್ತಾ ಹೋಗುವ ವೇಳೆ ಕಳೆದುಕೊಂಡಿದ್ದ ಒಂದು ತೊಲೆ ಬಂಗಾರದ ಆಭರಣ (ಬೋರಮಾಳ)ವನ್ನು ಅಜ್ಜಿಗೆ ಮರಳಿಸಿದ ರೈತನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಹಾಲಿಂಗಪುರಕ್ಕೆ ಮೊಸರು ಮಾರಲು ಬಂದ ಸಂಗಾನಟ್ಟಿ ಗ್ರಾಮದ ಅಜ್ಜಿಯೋರ್ವಳು ಪಟ್ಟಣದ ನಡುಚೌಕಿ ಮುಖಾಂತರ ಮೊಸರು ಮಾರುತ್ತಾ ಹೋಗುವ ವೇಳೆ ಕಳೆದುಕೊಂಡಿದ್ದ ಒಂದು ತೊಲೆ ಬಂಗಾರದ ಆಭರಣ (ಬೋರಮಾಳ)ವನ್ನು ಅಜ್ಜಿಗೆ ಮರಳಿಸಿದ ರೈತನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.

ಪಟ್ಟಣದ ಮಹಾಲಿಂಗಪ್ಪ ಇಂಗಳಗಿ ಪ್ರಾಮಾಣಿಕತೆ ಮೆರೆದ ರೈತ. ಇಲ್ಲಿಯ ನಡುಚೌಕಿ ಮುಖಾಂತರ ಹೋಗುತ್ತಿರುವಾಗ ರಸ್ತೆಯ ಮೇಲೆ ಬಿದ್ದ ಆಭರಣ ಕಂಡು ಯಾರೋ ಕಳೆದುಕೊಂಡಿರಬಹುದು ಎಂದು ಊಹಿಸಿ ವಾರಸುದಾರರನ್ನು ಹುಡುಕುತ್ತಿರುವಾಗ ತೆಂಗಿನ ಕಾಯಿ ವ್ಯಾಪಾರಿಗಳ ಬಳಿಅಜ್ಜಿ ತಾನು ಕಳೆದುಕೊಂಡ ಆಭರಣದ ಬಗ್ಗೆ ವಿಚಾರಿಸಿದ್ದು ತಿಳಿದುಬಂದಿದೆ. ಆ ಅಜ್ಜಿ ಹೋದ ರಸ್ತೆಯ ಕುರಿತು ತೆಂಗಿನಕಾಯಿ ವ್ಯಾಪಾರಿಗಳಿಂದ ಮಾಹಿತಿ ಪಡೆದ ಮಹಾಲಿಂಗಪ್ಪ ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದ ಹತ್ತಿರ ಇರುವುದು ಗೊತ್ತಾಗಿ ಕೂಡಲೇ ಅಲ್ಲಿಗೆ ಹೋಗಿ ಆಭರಣ ಹಿಂದುರಿಗಿಸಿದ್ದಾರೆ. ಆಭರಣ ಕಳೆದುಕೊಂಡು ಕಣ್ಣೀರಿಡುತ್ತಿದ್ದ ಅಜ್ಜಿ ಸಂತೋಷದಿಂದ ಹಣ ನೀಡಲು ಬಂದರೂ ರೈತ ನಿರಾಕರಿಸಿ ಇನ್ನು ಮುಂದೆ ಆಭರಣ ಧರಿಸಿಕೊಂಡು ಬರಬೇಡವೆಂದು ಬುದ್ಧಿ ಹೇಳಿ ಕಳಿಸಿದ್ದಾನೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಪಟ್ಟಣದ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಭರತ ಕದ್ದಿಮನಿ ರೈತ ಮಹಾಲಿಂಗಪ್ಪ ಇಂಗಳಗಿ ಅವರ ಪ್ರಾಮಾಣಿಕತೆಗೆ ಶ್ಲಾಘಿಸಿದ್ದಾರೆ.