ರೈತರಲ್ಲಿ ಗರಿಗೆದರಿದ ಮುಂಗಾರು ಮಳೆ ಖುಷಿ

| Published : May 27 2024, 01:00 AM IST

ರೈತರಲ್ಲಿ ಗರಿಗೆದರಿದ ಮುಂಗಾರು ಮಳೆ ಖುಷಿ
Share this Article
  • FB
  • TW
  • Linkdin
  • Email

ಸಾರಾಂಶ

ಬರದಿಂದ ಕಂಗಾಲಾಗಿದ್ದ ರೈತರಿಗೆ ಹೊಸ ಭರವಸೆ ಮೂಡಿಸಿದ ಮುಂಗಾರು ಪೂರ್ವ ಮಳೆ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಕಾರ್ಯ ಜೋರು

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ವರ್ಷದ ಹಿಂದೆ ಮಳೆ ಕೊರತೆ, ತೀವ್ರ ಬರದಿಂದಾಗಿ ಮಂಕಾಗಿದ್ದ ಕೃಷಿ ಚಟುವಟಿಕೆಗಳು ನಿಧಾನಗತಿಯಲ್ಲಿ ವೇಗ ಪಡೆದುಕೊಳ್ಳುತ್ತಿವೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸುವುದರ ಜೊತೆಗೆ ಮತ್ತು ಕೃಷಿಯತ್ತ ಮುಖ ಮಾಡುವಂತೆ ಮಾಡಿದೆ.

ಕಳೆದ ತಿಂಗಳಿನಿಂದ ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ನಿರೀಕ್ಷೆಗಿಂತಲು ಹೆಚ್ಚಾದ ಹಿನ್ನೆಲೆಯಲ್ಲಿ ಬರದ ಛಾಯೆ ತೊಲಗಿ ಭೂಮಿ ಮೆತ್ತಗಾಗಿದ್ದು, ಮುಂಗಾರು ಹಂಗಾಮು ಆರಂಭಕ್ಕೂ ಮೊದಲು ಕೃಷಿಗೆ ಸಂಬಂಧಿಸಿತ ಚಟುವಟಿಕೆಗಳು ಶುರುವಾಗಿವೆ. ಇಷ್ಟು ದಿನ ಸುಮ್ಮನಿದ್ದ ಅನ್ನದಾತರು ಭೂಮಿ ಹದಗೊಳಿಸುವುದು, ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಇತ್ತ ಕೃಷಿ ಇಲಾಖೆ, ಜಿಲ್ಲಾಡಳಿತ ಸಹ ಅಗತ್ಯ ಬಿತ್ತನೆ ಬೀಜ, ಗೊಬ್ಬರದ ದಾಸ್ತಾನು ಮಾಡಿ, ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಣೆ ಕಾರ್ಯವನ್ನು ಸಹ ಪ್ರಾರಂಭಿಸಿವೆ.

ಬಿತ್ತನೆ-ಬೀಜದ ಗುರಿ:

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆ ರಾಯಚೂರು, ಮಾನ್ವಿ, ಸಿಂಧನೂರು, ಲಿಂಗಸುಗೂರು, ದೇವದುರ್ಗ, ಮಸ್ಕಿ, ಅರಕೇರಾ ಹಾಗೂ ಸಿರವಾರ ತಾಲೂಕು ವ್ಯಾಪ್ತಿಯಲ್ಲಿ ಖಷ್ಕಿ ಹಾಗೂ ನೀರಾವರಿ ಪ್ರದೇಶ ಸೇರಿ ಒಟ್ಟು 5.56,276 ಎಕರೆಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 2,91,467 ಎಕರೆ ಖಷ್ಕಿ ಮತ್ತು 2,64,809 ಎಕರೆ ನೀರಾವರಿ ಪ್ರದೇಶವಿದೆ.

ಜಿಲ್ಲೆಯಲ್ಲಿ ಭತ್ತವನ್ನು ಖಷ್ಕಿ ಹಾಗೂ ನೀರಾವರಿ ಪ್ರದೇಶ ಸೇರಿದಂತೆ ಒಟ್ಟು 1.87 ಲಕ್ಷ ಎಕರೆ ಬಿತ್ತನೆ ಗುರಿ ಹಾಗೂ ಉಳಿದಂತೆ ಹೈಬ್ರಿಡ್ ಜೋಳ, ಮೆಕ್ಕೆ ಜೋಳ, ಹೈಬ್ರಿಡ್ ಸಜ್ಜೆ ಬಿತ್ತನೆಗೆ ಸಿದ್ಧತೆ ನಡೆದಿದೆ. ಏಕದಳದ ಧಾನ್ಯ ಒಟ್ಟು 2,34, 494 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಉದ್ದು, ಅಲಸಂದಿ, ಹುರಳಿ ಸೇರಿ ಒಟ್ಟು 1,46 ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಅಲ್ಲದೇ ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಔಡಲ ಸೇರಿದಂತೆ ಒಟ್ಟು 21,528 ಎಕರೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ವಾಣಿಜ್ಯ ಬೆಳಗಳಾದ ಹತ್ತಿ 1,53 ಲಕ್ಷ ಎಕರೆ ಪ್ರದೇಶ ಹಾಗೂ ಕಬ್ಬು 1000 ಎಕರೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.ದಾಸ್ತಾನು ಮಾಹಿತಿ:

ಕೃಷಿ ಇಲಾಖೆಯಿಂದ ಗುರಿಗೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ (4 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳು ಸೇರಿ) ತೊಗರಿ 803.20 ಕ್ವಿಂಟಲ್, ಸಜ್ಜೆ 1.80 ಕ್ವಿಂ, ಭತ್ತ 536 ಕ್ವಿಂ, ಹೆಸರು 10.80 ಕ್ವಿಂ, ಮೆಕ್ಕೆಜೋಳ 21 ಕ್ವಿಂ ಹಾಗೂ ಸೂರ್ಯಕಾಂತಿ- 2.10 ಕ್ವಿಂಟಲ್‌ ಸೇರಿ ಒಟ್ಟು 1353.90 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ.

ಇದರ ಜೊತೆಗೆ ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಬೀಜಗಳು 45.30 ಕ್ವಿಂಟಾಲ್ ನಷ್ಟು ವಿತರಣೆ ಮಾಡಿದ್ದು, ಭತ್ತ, ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ ಒಟ್ಟು 247.80 ಕ್ವಿಂಟಲ್‌ನಷ್ಟು ದಾಸ್ತಾನು ಇದ್ದು, ಮಾನ್ವಿಯಲ್ಲಿ 120.60 ಕ್ವಿಂ, ದೇವದುರ್ಗದಲ್ಲಿ 110.40 ಕ್ವಿಂ, ಸಿರವಾರದಲ್ಲಿ 206.60 ಕ್ವಿಂ, ಲಿಂಗಸುಗೂರಿನಲ್ಲಿ 185.00 ಕ್ವಿಂ, ಸಿಂಧನೂರಿನಲ್ಲಿ 247.20 ಕ್ವಿಂ ಹಾಗೂ ಮಸ್ಕಿಯಲ್ಲಿ 236.30 ಕ್ವಿಂ ಮತ್ತು ಲಿಂಗಸುಗೂರಿನಲ್ಲಿ ಮಾತ್ರ ಈಗಾಗಲೇ 45.30 ಕ್ವಿಂಟಲ್ ತೊಗರಿ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗಿದೆ.

ಅದೇ ರೀತಿ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ರಾಯಚೂರು ಹಾಗೂ ಸಹಕಾರಿ ಸಂಘಗಳಲ್ಲಿ 10673 ಮೆಟ್ರಿಕ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 90273.88 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 100946.88 ಮೆಟ್ರಿಕ್ ಟನ್‌ನಷ್ಟು ಇಲ್ಲಿಯವರೆಗೆ ಜಿಲ್ಲೆಯಲ್ಲಿ ದಾಸ್ತಾನು ಮಾಡಲಾಗಿದೆ.