ಸಾಗುವಳಿದಾರರ ಒಕ್ಕಲೆಬ್ಬಿಸುವ ಹುನ್ನಾರ ಖಂಡನೀಯ

| Published : Jul 19 2025, 01:00 AM IST

ಸಾಗುವಳಿದಾರರ ಒಕ್ಕಲೆಬ್ಬಿಸುವ ಹುನ್ನಾರ ಖಂಡನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ ಭೂಮಿ ಸಾಮಾಜಿಕ ಅರಣ್ಯೀಕರಣ, ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಸರ್ಕಾರ ದಲಿತರ ಒಕ್ಕಲೆಬ್ಬಿಸುವ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಹೊನ್ನಾಳಿ ತಾಲೂಕು ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಧಾನ ಸಂಚಾಲಕ ಕುರುವ ಮಂಜುನಾಥ್ ಹೇಳಿದ್ದಾರೆ.

- ಮುಖಂಡ ಕುರುವ ಮಂಜುನಾಥ್ ಹೇಳಿಕೆ । ದಲಿತರಿಗೆ ಅನ್ಯಾಯ ಖಂಡಿಸಿ ಸರ್ಕಾರಕ್ಕೆ ಮನವಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ ಭೂಮಿ ಸಾಮಾಜಿಕ ಅರಣ್ಯೀಕರಣ, ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಸರ್ಕಾರ ದಲಿತರ ಒಕ್ಕಲೆಬ್ಬಿಸುವ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಹೊನ್ನಾಳಿ ತಾಲೂಕು ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಧಾನ ಸಂಚಾಲಕ ಕುರುವ ಮಂಜುನಾಥ್ ಹೇಳಿದರು.

ಸಂಘಟನೆ ವತಿಯಿಂದ ಶುಕ್ರವಾರ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ, ಬಳಿಕ ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಮಂಜುನಾಥ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ದೇಶದಲ್ಲಿ ಭೂಮಿ ಒಂದು ಉತ್ಪಾದನಾ ಸಾಧನವಾಗಿದೆ. ಭೂಮಿವುಳ್ಳವರಿಗೆ ಸಾಮಾಜಿಕ ಘನತೆ ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ಸಾಮಾಜಿಕ ವ್ಯವಸ್ಥೆ ನೀಡುತ್ತ ಬಂದಿದೆ. ತಲತಲಾಂತರದಿಂದ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಡಾ.ಅಂಬೇಡ್ಕರ್ ಆಂದೋಲನದಿಂದಾಗಿ ದಲಿತ ಹಾಗೂ ದಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗಪ್ರಜ್ಞೆಯಿಂದ ಪುರೋಹಿತಶಾಹಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರು.

ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಚಳವಳಿ ಭೂಮಿ, ಶಿಕ್ಷಣ ಮುಂತಾದ ಮನುಷ್ಯ ಮೂಲಭೂತ ಅವಶ್ಯಕತೆಗಾಗಿ ಆಳುವ ವ್ಯವಸ್ಥೆಯೊಂದಿಗೆ ನಿರಂತರ ಸಂಘರ್ಷ ನಡೆಯುತ್ತಿದೆ. 4 ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟಗಳಲ್ಲಿ, ದರಕಾಸ್ತು ಜಮೀನು ಮಂಜೂರು ಮಾಡುವ ಕಾಯಿದೆ ಜಾರಿಗೆ ಬಂದಿದೆ. ಇಂದಿಗೂ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ ಶೇ.11ರಷ್ಟು ಮಾತ್ರ ಭೂಮಿ ಹೂಂದಿದ್ದಾರೆ. ಇದರಲ್ಲಿ ನೀರಾವರಿ ಪ್ರದೇಶ ಅತ್ಯಲ್ಪವಾಗಿದೆ ಎಂದು ಹೇಳಿದರು.

ದರಕಾಸ್ತು ಭೂಮಿ ಸಮೀಪಕರಣ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳ ನಿರ್ಲಕ್ಷ್ಯದಿಂದ ಸಭೆಗಳು ನಡೆಯದೇ ಫಾರಂ ನಂ.54, 53, 57ರಲ್ಲಿ ಸಲ್ಲಿಸಿರುವ ದಲಿತ ತಳ ಸಮುದಾಯಗಳ ಅರ್ಜಿಗಳು ಇತ್ಯರ್ಥವಾಗದೇ ರಾಶಿಗಟ್ಟಲೇ ಕೊಳೆಯುತ್ತ ಬಿದ್ದಿವೆ. ಅದರಲ್ಲಿ ಸಾವಿರಾರು ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಆರೋಪಿಸಿದರು.

ಆಡಳಿತ ನಡೆಸುವ ಸರ್ಕಾರ ದಲಿತರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಸಮಿತಿಯ ಉಪ ಪ್ರಧಾನ ಸಂಚಾಲಕ ಕುಂಬಳೂರು ಜಗದೀಶ್, ರೈತ ಸಂಘದ ಮಹಿಳಾ ಮುಖಂಡೆ ರೂಪ, ದಲಿತ ಸಮಿತಿಯ ಜೌಡಪ್ಪ, ಹನುಮಂತಪ್ಪ, ಗಿರೀಶ್, ಎ.ಕೆ. ಶೇಖರಪ್ಪ, ಮಂಜಪ್ಪ ಇತರರು ಇದ್ದರು.

- - -

-18ಎಚ್.ಎಲ್.ಐ2.ಜೆಪಿಜಿ:

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ದಲಿತರ ಭೂಮಿ, ವಸತಿ ಹಕ್ಕಿಗಾಗಿ ಅಗ್ರಹಿಸಿ ಪಟ್ಟಣದ ಎಸಿ ಕಚೇರಿ ಎದುರು ಘೋಷಣೆ ಕೂಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.