೧೦ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಹೋರಾಟ

| Published : Dec 16 2024, 12:46 AM IST

ಸಾರಾಂಶ

೯ನೇ ದಿನವಾದ ಭಾನುವಾರ ಧರಣಿ ಸತ್ಯಾಗ್ರಹದ ನೇತೃತ್ವವನ್ನು ಹಾವೇರಿ ಮತ್ತು ಬ್ಯಾಡಗಿ ತಾಲೂಕಿನ ರೈತರು ವಹಿಸಿದ್ದರು.

ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ, ಬೆಳೆ ವಿಮೆ ಮತ್ತು ಪರಿಹಾರ, ವಿದ್ಯುತ್ ಸಮಸ್ಯೆ ನಿವಾರಣೆ, ರೈತ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಇತ್ಯಾದಿ ಬೇಡಿಕೆ ಈಡೇರಿಸುವಂತೆ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ೧೦ನೇ ದಿನಕ್ಕೆ ಕಾಲಿಟ್ಟಿದೆ.

೯ನೇ ದಿನವಾದ ಭಾನುವಾರ ಧರಣಿ ಸತ್ಯಾಗ್ರಹದ ನೇತೃತ್ವವನ್ನು ಹಾವೇರಿ ಮತ್ತು ಬ್ಯಾಡಗಿ ತಾಲೂಕಿನ ರೈತರು ವಹಿಸಿದ್ದರು. ಧರಣಿ ಸತ್ಯಾಗ್ರಹಕ್ಕೆ ಕನವಳ್ಳಿಯ ಗೋಣಿ ಬಸವೇಶ್ವರ ಭಜನಾ ಸಂಘದವರು ಸ್ವಯಂ ಪ್ರೇರಿತರಾಗಿ ಬೆಂಬಲ ಸೂಚಿಸಿದರು.ಈ ವೇಳೆ ರೈತ ಮುಖಂಡರು ಮಾತನಾಡಿ, ಕಳೆದ ೯ ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ರೈತರ ಸಮಸ್ಯೆಗಳನ್ನು ಆಲಿಸಲು ಸಮಯವಿಲ್ಲ. ಇದರಿಂದ ರೈತರ ಬಗ್ಗೆ ಆಳುವ ಸರ್ಕಾರಗಳ ಕಾಳಜಿ ಎಷ್ಟು ಇದೆ ಎಂದು ಗೊತ್ತಾಗುತ್ತದೆ. ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಗೆ ಬೆಂಬಲ ನೀಡುವ ಸ್ಥಳೀಯ ಸರ್ಕಾರ ಹಾವೇರಿ ಜಿಲ್ಲೆಯಲ್ಲಿ ನಿರಂತರವಾಗಿ ೯ ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿರುವುದು ಅವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಅಧಿವೇಶನ ಎಲ್ಲಿ ವರೆಗೆ ಮುಂದುವರೆಯುತ್ತದೆ. ಅಲ್ಲಿ ವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮುಂದುವರೆಯುತ್ತದೆ ಎಂದರು.

೧೯೮೨ರಲ್ಲಿ ರೈತರಿಗೆ ಅನುಕೂಲವಾಗುವಂತೆ ರೂಪಿಸಿದ ನಬಾರ್ಡ್ ಯೋಜನೆಯ ಮೊತ್ತವನ್ನು ಈ ಬಾರಿ ಕೇಂದ್ರ ಸರ್ಕಾರ ಶೇ. ೪೨ರಷ್ಟು ಕಡಿತ ಮಾಡಿದ್ದು, ಇದು ರೈತ ವಲಯಕ್ಕೆ ನುಂಗಲಾಗದ ತುತ್ತಾಗಿದೆ. ಈಗಾಗಲೇ ನಿರಂತರವಾಗಿ ಬರ ಇಲ್ಲವೇ ಅತಿವೃಷ್ಠಿಗೆ ಸಿಲುಕಿ ಭವಿಷ್ಯದ ಬಗ್ಗೆ ಆತಂಕಕ್ಕೆ ಸಿಲುಕಿದ್ದೇವೆ. ನೈಜವಾಗಿ ಈ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಬೇಕಿತ್ತು. ಆದರೆ, ಅದನ್ನು ಕಡಿತ ಮಾಡಿದ್ದು ಕೂಡಲೇ ಸರಿಪಡಿಸಿ ಮೊದಲಿನಂತೆ ಮೊತ್ತ ನಿಗದಿ ಮಾಡಿ ನೀಡುವಂತೆ ಒತ್ತಾಯಿಸಿದರು.

ಅಲ್ಲದೇ ಇದು ವರೆಗೂ ಜಿಲ್ಲೆಯ ಒಟ್ಟು ೭೬ ಸಾವಿರ ರೈತರು ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪರಿಹಾರ ಕೊಡುತ್ತೇವೆ ಎನ್ನುತ್ತಾರೆಯೇ ಹೊರತು ನೀಡುತ್ತಿಲ್ಲ. ೨೦೨೩ ಸೆಪ್ಟೆಂಬರ್ ನಂತರದ ಅವಧಿಯಲ್ಲಿ ಕೊಳವೆ ಬಾವಿ ಕೊರೆಸಿದ ಯಾವುದೇ ರೈತರಿಗೆ ಪಂಪ್‌ಸೈಟ್‌ಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಇದರಿಂದ ರೈತರಿಗೆ ಹಲವಾರು ತೊದರೆಗಳಾಗುತ್ತಿವೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಎಚ್.ಎಚ್. ಮುಲ್ಲಾ, ಮಂಜುನಾಥ ಕದಂ, ಶಿವಯೋಗಿ ಹೊಸಗೌಡ, ಅಡಿವೆಪ್ಪ ಆಲದಕಟಿ, ಈರಣ್ಣ ಚಕ್ರಸಾಲಿ, ಜಾನ ಪುನೀತ್, ಶಂಕ್ರಣ್ಣ ಶಿರಗೂಂಬಿ, ಪ್ರವೀಣ ಬೆನ್ನೂರ, ಸುಭಾಷ ಬನ್ನಿಹಟ್ಟಿ, ಸಿದ್ದಲಿಂಗಪ್ಪ ಬಳ್ಳಾರಿ, ವಿರೂಪಾಕ್ಷಪ್ಪ ಗುಡಗೂರ, ಪರಮೇಶ ನಾಯಕ, ನಂಜುಂಡಯ್ಯ ಹಾವೇರಿಮಠ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಗುಡ್ಡನಗೌಡ ಪ್ಯಾಟಿಗೌಡ್ರ, ರವಿ ಅಂಗಡಿ, ಶಿವನಗೌಡ್ರ, ಶೇಖಪ್ಪ ಖಾಸಿ ಸೇರಿದಂತೆ ನಾಯರಾರು ರೈತರು ಪಾಲ್ಗೊಂಡಿದ್ದರು.

ಶಾಸಕರ ಮನೆ ಎದುರು ಪ್ರತಿಭಟನೆ

ಒಂದು ವೇಳೆ ಬೆಳಗಾವಿ ಅಧಿವೇಶನದ ಒಳಗಾಗಿ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲೆಯ ಎಲ್ಲ ೬ ತಾಲೂಕಿನ ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಎಲ್ಲ ಶಾಸಕರ ಕಾರ್ಯಕ್ರಮಕ್ಕೆ ಘೇರಾವ್ ಹಾಕಲಾಗುವುದು. ಮುಂದುವರೆದು ರಾಷ್ಟ್ರೀಯ ಹೆದ್ದಾರಿ ತಡೆ ಇನ್ನೂ ಹಲವಾರು ಹಂತಗಳಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.