ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಂದೆ

| Published : May 19 2024, 01:47 AM IST

ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಂದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ರಾಮನಗರ: ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಗ್ರಾಮದ ಕೃಷ್ಣಪ್ಪ ಎಂಬುವರೇ ತನ್ನ ಪುತ್ರ ಭಾಸ್ಕರ್(31) ನನ್ನು ಕೊಲೆ ಮಾಡಿದವರು. ಆರೋಪಿ ಕೃಷ್ಣಪ್ಪನನ್ನು ರಾಮನಗರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಕೊರೋನಾ ಸಮಯದಲ್ಲಿ ಸ್ವಗ್ರಾಮಕ್ಕೆ ಹಿಂದಿರುಗಿದ್ದ. ಬಳಿಕ ಯಾವುದೇ ಕೆಲಸ ಮಾಡದೆ ಜೂಜು, ಮದ್ಯದ ಚಟಕ್ಕೆ ದಾಸನಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದನು. ಈತನ ಸಾಲ ತೀರಿಸಲು ಕುಟುಂಬದವರು ಒಂದು ಎಕರೆ ಜಮೀನನ್ನು ಮಾರಾಟ ಮಾಡಿದ್ದರು.

ಇತ್ತೀಚಿಗೆ ಮತ್ತೆ 14 ಗುಂಟೆ ಜಮೀನನ್ನು ಮಾರಾಟ ಮಾಡಿದ್ದು, ಆ ಹಣಕ್ಕಾಗಿ ಭಾಸ್ಕರ್ ತಂದೆಯನ್ನು ಪೀಡಿಸುತ್ತಿದ್ದನು. ಈ ವಿಚಾರಕ್ಕೆ ತಂದೆ ಮಗನ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಶುಕ್ರವಾರ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಇಬ್ಬರು ಪಾನಮತ್ತರಾಗಿದ್ದು, ಮಗ ಮಲಗಿದ್ದಾಗ ಮಚ್ಚಿನಿಂದ ಮುಖದ ಭಾಗಕ್ಕೆ ತಂದೆ ಹಲ್ಲೆ ಮಾಡಿದ್ದಾನೆ. ಮುಖದ ಭಾಗಕ್ಕೆ ಮಾರಣಾಂತಿಕ ಏಟು ಬಿದ್ದ ಪರಿಣಾಮ ಭಾಸ್ಕರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ತಲೆ ಮರೆಸಿಕೊಂಡಿದ್ದ ತಂದೆ:

ಮಗನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ ಕೃಷ್ಣಪ್ಪ, ತಕ್ಷಣ ಮನೆಯಿಂದ ಪರಾರಿಯಾಗಿದ್ದಾನೆ. ಕೊಲೆ ನಡೆದಿರುವುದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲಾ ಕಡೆ ಹುಡುಕಾಡಿ, ಗ್ರಾಮದ ಹೊರವಲಯದಲ್ಲಿ ರಾಗಿಮೆದೆಯ ಬಳಿ ಮಲಗಿದ್ದ ಕೃಷ್ಣಪ್ಪನನ್ನು ಶನಿವಾರ ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆ ಎಎಸ್ಪಿ ಕೃಷ್ಣಪ್ಪ, ಡಿವೈಎಸ್ಪಿ ದಿನಕರ್‌ಶೆಟ್ಟಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 18ಕೆಆರ್ ಎಂಎನ್ 3.ಜೆಪಿಜಿ

ಮೃತ ಭಾಸ್ಕರ್ .