ಸಾರಾಂಶ
ಕೃಷ್ಣ ಎನ್. ಲಮಾಣಿ
ಹಂಪಿ: ಇಡೀ ಜಗತ್ತಿನ ಕಣ್ಮನ ಸೆಳೆದ ಹಂಪಿ ಉತ್ಸವ ವೈಭವೋಪೇತವಾಗಿ ಸಂಪನ್ನಗೊಂಡಿದೆ. ಉತ್ಸವಕ್ಕಾಗಿ ನಿರ್ಮಿಸಿದ್ದ ನಾಲ್ಕೂ ವೇದಿಕೆಗಳನ್ನು ತೆರವುಗೊಳಿಸಲಾಗುತ್ತಿದ್ದು, ಹಂಪಿ ತನ್ನ ನೈಜ ಸ್ವರೂಪಕ್ಕೆ ಮರಳುತ್ತಿದೆ. ಕೃತಕ ಅಲಂಕಾರಕ್ಕಿಂತಲೂ ಸಹಜ ಸ್ಮಾರಕಗಳೇ ವರ್ಷವೀಡಿ ದೇಶ-ವಿದೇಶಿ ಪ್ರವಾಸಿಗರನ್ನುಆಕರ್ಷಿಸುತ್ತವೆ.ಹಂಪಿ ಉತ್ಸವದ ವೈಭವಕ್ಕೆ ಸರಿಸಾಟಿಯಾಗಿ ಹಂಪಿಯ ಕಲ್ಲು- ಬಂಡೆಗಳ ಸ್ಮಾರಕಗಳು ನಿಲ್ಲಲ್ಲಿವೆ. ಕೃತಕ ಅಲಂಕಾರ, ವೇದಿಕೆ ತಾತ್ಕಾಲಿಕ ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ದೇವಾಲಯಗಳು, ಮಂಟಪಗಳು, ಸ್ಮಾರಕಗಳು ಯಾವತ್ತಿಗೂ ಶಾಶ್ವತ. ಈಗಾಗಲೇ 800 ವರ್ಷಗಳನ್ನು ಕಳೆದಿರುವ ಈ ಸ್ಮಾರಕಗಳು ಇನ್ನೂ ಗಟ್ಟಿಮುಟ್ಟಾಗಿ ಉಳಿಯಲಿವೆ. ಯುನೆಸ್ಕೊ ಹೇಳಿದಂತೆ "ಹಂಪಿಯ ಸ್ಮಾರಕಗಳ ಗುಚ್ಛವನ್ನು ಮುಂದಿನ ಪೀಳಿಗೆಗೆ ಸಹಜ ಸ್ಥಿತಿಯಲ್ಲಿ ಕಾಪಾಡಬೇಕು " ಎಂಬ ಧ್ಯೇಯವಾಕ್ಯಕ್ಕೆ ಪೂರಕವಾಗಿ ಹಂಪಿ ಸ್ಮಾರಕಗಳು 72 ಗಂಟೆಗಳಲ್ಲೇ ಮರಳಿ ತಮ್ಮ ಸಹಜ ಸ್ವರೂಪಕ್ಕೆ ಮರಳಿವೆ. ಅದರಲ್ಲೂ ವಿದ್ಯುದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಹಂಪಿ ಹಾಗೂ ಅದರ ವಾಸ್ತುಶಿಲ್ಪ ಪ್ರಪಂಚ ಸಹಜ, ಸರಳ ರೂಪಕ್ಕೆ ಬಂದು, ಶಿವನ ಶಾಂತ ಸ್ವರೂಪ ತಾಳಿವೆ. ಇಡೀ ಹಂಪಿ ಮೂರು ದಿನಗಳ ವೈಭವದ ಬಳಿಕ ಧ್ಯಾನಸ್ಥ ರೂಪ ತಾಳಿದ್ದು, ಎಲ್ಲೆಡೆ ಶಾಂತತೆ ನೆಲೆಗೊಂಡಿತ್ತು.
ಆಗಸದಿಂದ ಹಂಪಿ ಸಹಜ ಸ್ವರೂಪ: ಕಮಲಾಪುರದ ಮಯೂರ ಭುವನೇಶ್ವರಿ ಆವರಣದಿಂದ ಲೋಹದ ಹಕ್ಕಿ ಏರಿ ವೀಕ್ಷಣೆ ಮಾಡಿದಾಗ ಹಂಪಿ ಸಂಪೂರ್ಣ ಸ್ತಬ್ದವಾಗಿತ್ತು. ಗಾಯತ್ರಿ ಪೀಠ ವೇದಿಕೆಯಲ್ಲಿ ಕಾರ್ಮಿಕರು ತ್ಯಾಜ್ಯ, ಕುರ್ಚಿಗಳನ್ನು ತೆರವುಗೊಳಿಸುತ್ತಿದ್ದರು. ಇನ್ನೂ ವೇದಿಕೆ ಬಳಿ ಹಾಕಲಾಗಿದ್ದ ಟೆಂಟ್‌ಗಳು, ಗ್ರೀನ್ ರೂಮ್‌ಗಳು, ಮಾಧ್ಯಮ ಕೇಂದ್ರವನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿತು. ಇನ್ನು ಮೂರು ದಿನಗಳಿಂದ ಲಕ್ಷಾಂತರ ಜನರ ಮನಗೆದ್ದ ವಿರೂಪಾಕ್ಷೇಶ್ವರ ಭವ್ಯ ಗೋಪುರ, ಉಗ್ರ ನರಸಿಂಹ, ಕಲ್ಲಿನತೇರು ಸ್ಮಾರಕ, ವಿಜಯನಗರ ಸಾಮ್ರಾಜ್ಯದ ಲಾಂಛನ ವರಾಹ ಸೇರಿದಂತೆ ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿ ಅರಳಿ ನಿಂತಿದ್ದ ಭವ್ಯ ವೇದಿಕೆಯನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿತು.ಹಂಪಿಯ ಎದುರು ಬಸವಣ್ಣ ಮಂಟಪ, ಸಾಸಿವೆಕಾಳು ಮಂಟಪ, ವಿರೂಪಾಕ್ಷೇಶ್ವರ ದೇವಾಲಯದ ವೇದಿಕೆಯಲ್ಲೂ ತೆರವು ಮಾಡಲಾಗುತ್ತಿತ್ತು. ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನದ ಮಳಿಗೆಗಳನ್ನು ತೆರವುಗೊಳಿಸುತ್ತಿರುವ ದೃಶ್ಯ ಆಗಸದಿಂದಲೇ ಕಣ್ಣಿಗೆ ಬಿದ್ದಿತು. ಈ ಅಲಂಕಾರಿಕ ವೇದಿಕೆಗಳನ್ನು ತೆರವುಗೊಳಿಸುತ್ತಿರುವುದು ಒಂದೆಡೆಯಾದರೆ, ಹಂಪಿಯ ವಾಸ್ತುಶಿಲ್ಪದ ಭವ್ಯ ಲೋಕ ಆಗಸದಿಂದ ಕಣ್ಣಿಗೆ ಹಬ್ಬದಂತೆ ಮುದ ನೀಡಿತು.
ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ತುಂಗಭದ್ರಾ ನದಿ, ಕಮಲ ಮಹಲ್, ಗಜಶಾಲೆ, ಹಜಾರರಾಮ ದೇವಾಲಯ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರ ಮಂಟಪ, ಮಹಾನವಮಿ ದಿಬ್ಬ, ಅರಮನೆ ಪಾಯಗಳು, ವಿರೂಪಾಕ್ಷೇಶ್ವರ ಬಜಾರ, ಶ್ರೀಕೃಷ್ಣ ಬಜಾರ, ವಿಜಯ ವಿಠ್ಠಲ ಬಜಾರ ಹಂಪಿಯ ಸೊಬಗನ್ನು ಇನ್ನಷ್ಟು ಇಮ್ಮಡಿಗೊಳಿಸುವ ಮಾದರಿಯಲ್ಲಿ ಆಗಸದಿಂದ ಕಂಡುಬಂದಿತು. ಹೆಲಿಕಾಪ್ಟರ್‌ನಿಂದ ಹಂಪಿ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದು, ಕೃತಕ ಅಲಂಕಾರಕ್ಕಿಂತ ನೈಜ ಸ್ವರೂಪದ ಹಂಪಿಯೇ ಈ ನೆಲದ ಭವ್ಯ ಮೆರಗು ಎಂಬುದು ಮನದಟ್ಟಾಯಿತು.ಸ್ಮಾರಕಗಳ ವೀಕ್ಷಣೆ: ಹಂಪಿ ಸ್ಮಾರಕಗಳನ್ನು ಸಹಜ ರೂಪದಲ್ಲಿ ಕಾಣುವುದೇ ಕಣ್ಣಿಗೆ ಹಬ್ಬ, ನೋಡಿ ಹಂಪಿ ಆಗಸದಿಂದ ಹೇಗೆ ಕಾಣುತ್ತಿದೆ. ಹಂಪಿಯ ಸ್ಮಾರಕಗಳು ಎಷ್ಟು ಚೆಂದವಾಗಿ ಕಾಣುತ್ತಿವೆ. ವೇದಿಕೆಗಳನ್ನು ತೆರವು ಮಾಡಲಾಗುತ್ತಿದೆ. ಆದರೂ ಹಂಪಿ ಸ್ಮಾರಕಗಳ ವೀಕ್ಷಣೆಗೆ ವರ್ಷವೀಡಿ ಜನ ಬರುತ್ತಾರೆ ಎಂದು ಆಗಸದಿಂದ ಹಂಪಿ ಸ್ಮಾರಕ ವೀಕ್ಷಿಸಿದ ವಿದ್ಯಾ ತಿಳಿಸಿದರು.ಗತವೈಭವದ ಮೆಲುಕು: ಹಂಪಿ ಯಾವತ್ತಿದ್ದರೂ ವಾಸ್ತುಶಿಲ್ಪ ಪ್ರಪಂಚಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಉತ್ಸವ ಹಂಪಿ ಗತ ವೈಭವ ಮೆಲುಕು ಹಾಕಿದೆ. ಮುಂದಿನ ಪೀಳಿಗೆಗೆ ಹಂಪಿ ಸೊಬಗನ್ನು, ಚರಿತ್ರೆಯನ್ನು ಕಟ್ಟಿಕೊಡುವ ಕೆಲಸ ಮಾಡಿದೆ. ಹಂಪಿ ಸ್ಮಾರಕಗಳು ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂದು ಹಂಪಿ ನಿವಾಸಿ ವಿರೂಪಾಕ್ಷಿ ತಿಳಿಸಿದರು.