ಬನ್ನಂಗಾಡಿಯಲ್ಲಿ ದೊಡ್ಡಮ್ಮತಾಯಿ ದೇವರ ಜಾತ್ರಾ ಮಹೋತ್ಸವ

| Published : Mar 22 2025, 02:07 AM IST

ಬನ್ನಂಗಾಡಿಯಲ್ಲಿ ದೊಡ್ಡಮ್ಮತಾಯಿ ದೇವರ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬನ್ನಂಗಾಡಿ ಗ್ರಾಮದ ಹೊರ ವಲಯದ ಶ್ಯಾನಬೋಗರ ತೋಟದ ಆವರಣದಲ್ಲಿ ಕುಲಗುರು ಬೋಳಾನಹಳ್ಳಿ ಶ್ರೀನಿಜಗುಣ ಒಡೆಯರ್‌ಅವರ ನೇತೃತ್ವದಲ್ಲಿ ಗ್ರಾಮ ದೇವತೆಗಳಾದ ದೊಡ್ಡಮ್ಮತಾಯಿ, ಸುಡುಗಾಡಮ್ಮ, ಬೆಟ್ಟದ ಸಿದ್ದಯ್ಯ, ಸಿದ್ದರಾಮೇಶ್ವರ, ಕಟ್ಟೇಸಿದ್ದೇಶ್ವರ ಹಾಗೂ ಕಾಲಭೈರವೇಶ್ವರಸ್ವಾಮಿ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆ ದೊಡ್ಡಮ್ಮತಾಯಿ ದೇವರ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಹೊರ ವಲಯದ ಶ್ಯಾನಬೋಗರ ತೋಟದ ಆವರಣದಲ್ಲಿ ಕುಲಗುರು ಬೋಳಾನಹಳ್ಳಿ ಶ್ರೀನಿಜಗುಣ ಒಡೆಯರ್‌ಅವರ ನೇತೃತ್ವದಲ್ಲಿ ಗ್ರಾಮ ದೇವತೆಗಳಾದ ದೊಡ್ಡಮ್ಮತಾಯಿ, ಸುಡುಗಾಡಮ್ಮ, ಬೆಟ್ಟದ ಸಿದ್ದಯ್ಯ, ಸಿದ್ದರಾಮೇಶ್ವರ, ಕಟ್ಟೇಸಿದ್ದೇಶ್ವರ ಹಾಗೂ ಕಾಲಭೈರವೇಶ್ವರಸ್ವಾಮಿ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಗ್ರಾಮಸ್ಥರು, ವಿವಿಧ ಊರುಗಳಿಂದ ಆಗಮಿಸಿದ ದೇವರ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನದಿಂದ ಸಂಜೆವರೆಗೂ ದೇವರುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಎಲ್ಲಾ ದೇವರುಗಳನ್ನು ಮೆರವಣೆಗೆ ಮೂಲಕ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಉತ್ಸವ ನಡೆಸಲಾಯಿತು.

ನಂತರ ದೇವಸ್ಥಾನಕ್ಕೆ ತೆರಳಿ ದೇವರ ಮೂರ್ತಿಗಳನ್ನು ಇಡಲಾಯಿತು. ಉತ್ಸವದಲ್ಲಿ ಗ್ರಾಮದ ಈರಮಕ್ಕಳಿಂದ ಮೂಡಿಬಂದ ದೇವರ ಕುಣಿತ ಎಲ್ಲರ ಗಮನ ಸೆಳೆಯಿತು. ಇದಕ್ಕೂ ಮುನ್ನ ಜಾತ್ರೆ ಅಂಗವಾಗಿ ಮಂಗಳವಾರ ಗ್ರಾಮದ ದೊಡ್ಡಮ್ಮ ತಾಯಿ ಗುಡಿಗೆ ಪೂಜೆ ಸಲ್ಲಿಸಿ ಮೀಸಲು ನೀರು ತಂದು ದೇವರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಬುಧವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಸುಡುಗಾಡಮ್ಮ ತಾಯಿಗೆ ಪೂಜೆಸಲ್ಲಿಸಿದ ನಂತರ ದೇವಿ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಗುರುವಾರ ಸಿದ್ದೇಶ್ವರಸ್ವಾಮಿ ಹಲಿಗೇ ಕುಣಿತ, ದೇವರ ಮೆರವಣಿಗೆ ನಡೆಸಲಾಯಿತು.

ಶುಕ್ರವಾರ ನಡೆದ ದೊಡ್ಡಮ್ಮತಾಯಿ ದೇವರ ಮೆರವಣೆಗೆಯಲ್ಲಿ ದೇವರ ಪೂಜಾಕುಣಿತ, ನಂದಿಕುಣಿತ, ವೀರಮಕ್ಕಳ ಕುಣಿತ, ತಮಟೆ ಕುಣಿತ ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆ ಮೆರಗು ನೀಡಿದವು. ದೊಡ್ಡಮ್ಮತಾಯಿ ಜಾತ್ರೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ದೇವರಿಗೆ ಪೂಜೆಸಲ್ಲಿಸಿದರು.

ಭಕ್ತರಿಗೆ ಅನ್ನಸಂತರ್ಪಣೆ:

ಶ್ರೀದೊಡ್ಡಮ್ಮತಾಯಿ ಜಾತ್ರಾ ಮಹೋತ್ಸವಕ್ಕೆ ಬನ್ನಂಗಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಸುಮಾರು 8 ಸಾವಿರಕ್ಕೂ ಅಧಿಕ ಮಂದಿಗೆ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವ ಮೂಲಕ ಭಕ್ತಿಭಾವ ಪ್ರದರ್ಶಿಸಿದರು.

ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಎಲ್ಲಾ ಸಮುದಾಯದ ಯಜಮಾನರು, ಮುಖಂಡರು, ಯುವಕರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಯಾಗಿ ಆಚರಣೆ ಮಾಡಿದರು.