ಸಾರಾಂಶ
ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದಿಂದ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕಾಳುಮೆಣಸಿನ ಹಬ್ಬ- ೨೦೨೫, ಕಾಳುಮೆಣಸಿನ ಯುವ ಕೃಷಿಕರಿಗೆ ರಾಣಿ ಚೆನ್ನಭೈರಾದೇವಿ ಪುರಸ್ಕಾರ ಪ್ರದಾನ ಹಾಗೂ ಕಾಫಿ ಹರಾಜು ಕೇಂದ್ರದ ಉದ್ಘಾಟನೆಯನ್ನು ಜ. ೨೮ರಂದು ಬೆಳಗ್ಗೆ ೧೦.೩೦ ಗಂಟೆಗೆ ಕದಂಬ ಮಾರ್ಕೆಟಿಂಗ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತವು ಈ ಭಾಗದ ಕೃಷಿಕರ ಅಸಾಂಪ್ರದಾಯಿಕ ಸಾಂಬಾರ ಬೆಳೆಗಳು, ಕಿರು ಅರಣ್ಯ ಉತ್ಪನ್ನಗಳು, ಮಹಿಳೆಯರು ಹಾಗೂ ಉದ್ಯಮಶೀಲ ವ್ಯಕ್ತಿಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ಯಶಸ್ವಿ ಪ್ರಯತ್ನ ನಡೆಸುತ್ತ ಬಂದಿದೆ ಎಂದರು.
ಫೆ. ೨೮ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಅವರು ಪ್ರದರ್ಶಿನಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.ಫೆ. ೨೯ರಂದು ಬೆಳಗ್ಗೆ ೧೦.೩೦ರಿಂದ ಯಲ್ಲಾಪುರ ತಾಲೂಕು ಚವತ್ತಿಯ ಸುಧೀರ ಬಲ್ಸೆ ಅವರ ಕಾಳುಮೆಣಸಿನ ತೋಟ ಕ್ಷೇತ್ರ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ವಿಜ್ಞಾನಿ ಡಾ. ಎಂ.ಎನ್. ವೇಣುಗೋಪಾಲ ಮೈಸೂರು ಅಧ್ಯಕ್ಷತೆಯಲ್ಲಿ ಆರ್ಥಿಕ ಸ್ವಾತಂತ್ರ್ಯಕ್ಕೆ ಕಾಳುಮೆಣಸು ಮತ್ತು ಕಾಫಿ ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಮಾಲೋಚನೆ ನಡೆಯಲಿದೆ. ಡಾ. ವಿಜಯೇಂದ್ರ ಹೆಗಡೆ ಶಿಂಗನಮನೆ, ಡಾ. ಕಿರಣ್ ಕುಮಾರ್ ಎ.ಸಿ., ಡಾ. ರೂಪಾ ಪಾಟೀಲ ಅವರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೊಷ್ಠಿಯಲ್ಲಿ ಯಡಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ, ಸಲಹೆಗಾರ ವಿಶ್ವೇಶ್ವರ ಭಟ್ಟ ಕೋಟೆಮನೆ, ನಾರಾಯಣ ಹೆಗಡೆ ಗಡಿಕೈ ಮತ್ತಿತರರು ಇದ್ದರು.ಇಂದಿನಿಂದ ಭಟ್ಕಳದ ಸೋಡಿಗದ್ದೆ ಮಹಾಸತಿ ಜಾತ್ರೆ
ಭಟ್ಕಳ: ತಾಲೂಕಿನ ಸುಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆ ಜ. ೨೩ರಿಂದ ೩೧ರ ವರೆಗೆ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.ಸೋಡಿಗದ್ದೆಯ ಮಹಾಸತಿ ದೇವಸ್ಥಾನ ಭಕ್ತರಪಾಲಿನ ಶಕ್ತಿಸ್ಥಳವಾಗಿದೆ. ಈ ಜಾತ್ರೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಸೋಡಿಗದ್ದೆ ಮಹಾಸತಿಗೆ ಭಟ್ಕಳದ ಭಕ್ತರಷ್ಟೇ ಅಲ್ಲದೇ ನೆರೆಯ ಉಡುಪಿ, ಶಿವಮೊಗ್ಗ ಜಿಲ್ಲೆಯ ಭಕ್ತರೂ ಶ್ರದ್ಧಾಭಕ್ತಿಯಿಂದ ನಡೆದು ಕೊಳ್ಳುತ್ತಿರುವುದು ವಿಶೇಷ.ಜಾತ್ರೆಯ ಸಂದರ್ಭದಲ್ಲಿ ಮಹಾಸತಿಗೆ ಹೂವಿನ ಪೂಜೆ, ಗೊಂಬೆ ಹರಕೆ, ಕೆಂಡಸೇವೆ, ತುಲಾಭಾರ ಸೇವೆ ಮುಂತಾದವುಗಳು ನಡೆಯಲಿವೆ. ಜಾತ್ರೆಯ ಆರಂಭ ದಿನದಂದು(ಜ. ೨೩ರಂದು) ಹಾಲ ಹಬ್ಬ ನಡೆಯಲಿದೆ. ಜ. ೨೪ರಂದು ನಡೆಯುವ ಕೆಂಡಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ತಮ್ಮ ಹರಕೆ ತೀರಿಸುತ್ತಾರೆ.ಜ. ೨೫,೨೬,೨೭ರಂದು ತುಲಾಭಾರ ಸೇವೆ ನಡೆಯಲಿದೆ. ಜಾತ್ರೆ ಆರಂಭದ ದಿನದಿಂದ ಜ. ೩೧ರ ವರೆಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ತಮ್ಮ ಸಂಕಷ್ಟದ ಕಾಲದಲ್ಲಿ ಹೇಳಿಕೊಂಡ ಹರಕೆಯನ್ನು ಭಕ್ತರು ಜಾತ್ರೆ ಸಂದರ್ಭದಲ್ಲಿ ದೇವಿಗೆ ಸಮರ್ಪಿಸುವುದು ಇಲ್ಲಿನ ವಾಡಿಕೆ.
ಬೈಂದೂರು, ಕುಂದಾಪುರ ಮತ್ತಿತರ ಪ್ರದೇಶಗಳ ಕೆಲವು ಭಕ್ತರು ಇಲ್ಲಿಗೆ ಹರಕೆಯಂತೆ ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತ ಬಂದು ಮಹಾಸತಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಸೋಡಿಗದ್ದೆ ಮಹಾಸತಿ ಅಮ್ಮ ಶಕ್ತಿ ದೇವತೆಯಾಗಿದ್ದಾಳೆ ಎನ್ನುವ ನಂಬಿಕೆ ಭಕ್ತರದ್ದಾಗಿದ್ದು, ಹೀಗಾಗಿಯೇ ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಭಕ್ತಿಪೂರ್ವಕವಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡು ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ ಎಂದು ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಹಾಗೂ ಆಡಳಿತ ಕಮಿಟಿಯ ಅಧ್ಯಕ್ಷ ದೇವಿದಾಸ ಮೊಗೇರ ಮತ್ತು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.