ಯಾಂತ್ರಿಕೃತ ಬೇಸಾಯ ಆರಂಭವಾದಾಗಿನಿಂದ ಗ್ರಾಮೀಣ ಪ್ರದೇಶದಲ್ಲಿ ಹೊನ್ನಾರು ಕಟ್ಟುವ ಸಂಪ್ರದಾಯ ಕಳೆಗುಂದುತ್ತಿದೆ. ಆದರೂ ಕೂಡ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಲು ಹೊಸ ಸಂವತ್ಸರದ ಮೊದಲ ಉಳುಮೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಯುಗಾದಿ ಸಂಭ್ರಮಾಚರಣೆ । ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯ ಮುಂದಿನ ಪೀಳಿಕೆಗೆ ಪರಿಚಯಿಸಿದ ರೈತರು
ಕನ್ನಡಪ್ರಭ ವಾರ್ತೆ ನಾಗಮಂಗಲಯುಗಾದಿ ಅಂಗವಾಗಿ ತಾಲೂಕಿನ ಹಲವು ಹಳ್ಳಿಗಳಲ್ಲಿ ರೈತರು ಗುರುವಾರ ಹೊನ್ನಾರು ಕಟ್ಟುವ ಮೂಲಕ ಹೊಸ ಸಂವತ್ಸರದ ಮೊದಲ ಉಳುಮೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಯಾಂತ್ರಿಕೃತ ಬೇಸಾಯ ಆರಂಭವಾದಾಗಿನಿಂದ ಗ್ರಾಮೀಣ ಪ್ರದೇಶದಲ್ಲಿ ಹೊನ್ನಾರು ಕಟ್ಟುವ ಸಂಪ್ರದಾಯ ಕಳೆಗುಂದುತ್ತಿದೆ. ಆದರೂ ಕೂಡ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಲು ಹೊಸ ಸಂವತ್ಸರದ ಮೊದಲ ಉಳುಮೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.ಯುಗಾದಿ ಹಬ್ಬದ ದಿನ ಹೊನ್ನಾರು ಕಟ್ಟಿದರೆ ಸಮೃದ್ಧಿಯಾಗಿ ಮಳೆ ಬಂದು ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆಯಿಂದ ಪೂರ್ವಜರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಾಗಾಗಿ ರೈತರು ತಮ್ಮ ಹೊಲದಲ್ಲಿ ನೇಗಿಲನ್ನು ಹಿಡಿದು ಉಳುಮೆ ಮಾಡುವ ಮುನ್ನ ಗ್ರಾಮದ ಹಿರಿಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಹೊನ್ನಾರು ಕಟ್ಟುತ್ತಾರೆ.
ಹೊನ್ನಾರು ಸಂಪ್ರದಾಯ: ಹೊಸ ವರ್ಷದ ಸಂವತ್ಸರದಲ್ಲಿ ರೈತರು ತಮ್ಮ ಎತ್ತುಗಳನ್ನು ಸಿಂಗಾರ ಮಾಡಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹೊನ್ನಾರು ಹೂಡುವುದು ವಾಡಿಕೆ. ತ್ರೇತಾಯುಗದಲ್ಲಿ ಜನಕ ಮಹಾರಾಜ ಹೊನ್ನಾರು ಕಟ್ಟುವುದನ್ನು ಪ್ರಾರಂಭಿಸಿದರು ಎನ್ನಲಾಗಿದೆ.ಯುಗಾದಿ ಹಬ್ಬದ ದಿನದಂದು ಗ್ರಾಮದ ಮುಖ್ಯಸ್ಥರು ಎಣ್ಣೆ ಸ್ನಾನ ಮಾಡಿ, ದೇವಾಲಯಕ್ಕೆ ಬಂದು ಹೊಸ ಪಂಚಾಂಗ ಓದಿಸಿ ಯಾರ ಹೆಸರಿಗೆ ಹೊನ್ನಾರು ಕಟ್ಟುವುದು ಎಂದು ಹೇಳಲಾಗುತ್ತದೆಯೋ ಆ ಹೆಸರಿನವರಿಂದ ಹೊನ್ನಾರು ಹೂಡಿಸುತ್ತಾರೆ. ರೈತರು ಅಲಂಕರಿಸಿದ ತಮ್ಮ ಎತ್ತುಗಳಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅವುಗಳಿಗೆ ನೈವೇಧ್ಯೆ ಕೊಟ್ಟು ನೇಗಿಲು ಹೂಡಿ ವರ್ಷದ ಮೊದಲ ಉಳುಮೆ ಮಾಡುತ್ತಾರೆ.
ತಾಲೂಕಿನ ಕರಡಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಶ್ರೀ ಪರಾಭವ ನಾಮ ಸಂವತ್ಸರದ ಹೊಸ ಪಂಚಾಂಗವನ್ನು ನೋಡಿಸಿದ ಗ್ರಾಮದ ಮುಖ್ಯಸ್ಥರು ಒಂದೇ ಹೆಸರಿನ ಮೂವರು ರೈತರನ್ನು ಆಯ್ಕೆ ಮಾಡಿ ಅವರೊಂದಿಗೆ ಗ್ರಾಮದ ಶ್ರೀ ಬೋರೇದೇವರ ದೇವಸ್ಥಾನದ ಮುಂಭಾಗ ಗರುಡಕಂಭದ ಮುಂದೆ ಮೂರು ಜೊತೆ ಸಿಂಗರಿಸಿದ ಎತ್ತುಗಳಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ತಮಟೆ ಸದ್ದಿನೊಂದಿಗೆ ನೇಗಿಲು ಹೊತ್ತ ಮೂವರು ರೈತರು ತಮ್ಮ ಎತ್ತುಗಳೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ನಂತರ ಮೂರು ಜೊತೆ ಎತ್ತುಗಳಿಗೆ ನೇಗಿಲು ಕಟ್ಟಿ ಗ್ರಾಮದ ಸುತ್ತಲೂ ಉಳುಮೆ ಮಾಡುವ ಮೂಲಕ ವರ್ಷದ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆದರು.ಈ ವಿಶಿಷ್ಟ ಆಚರಣೆಯನ್ನು ಪೂರ್ವಿಕರಿಂದ ನಡೆಸಿಕೊಂಡು ಬಂದಿದ್ದು ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಈ ವರ್ಷ ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂಬ ಉದ್ದೇಶದಿಂದ ಹೊನ್ನಾರು ಕಟ್ಟಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.
ಈ ವೇಳೆ ಗ್ರಾಮದ ಮುಖ್ಯಸ್ಥರಾದ ಕೆ.ಆರ್.ದಯಾನಂದ್, ಕೆ.ಎಸ್.ರವೀಂದ್ರ, ಎಸ್.ಗೋವಿಂದಯ್ಯ, ವೆಂಕಟೇಶ್, ಜಯಬೋರೇಗೌಡ, ರಾಮಣ್ಣ, ದೇವೇಗೌಡ, ಸಿಂಗಾರಿಗೌಡ, ರಾಜಪ್ಪ, ಕೆ.ಎಂ.ನಾಗರಾಜು ಸೇರಿದಂತೆ ಹಲವರು ಇದ್ದರು.ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಗುರುವಾರ ಮಧ್ಯಾಹ್ನ ಹೊನ್ನಾರು ಕಟ್ಟಿದರೆ ಇನ್ನೂ ಕೆಲ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗೆ ಹೊನ್ನಾರು ಕಟ್ಟುವ ಆಚರಣೆ ನಡೆಯಿತು. ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಈ ವಿಶಿಷ್ಟ ಆಚರಣೆಯನ್ನು ನೆರವೇರಿಸಿದರು.
-----20ಕೆಎಂಎನ್ ಡಿ13
ನಾಗಮಂಗಲ ತಾಲೂಕಿನ ಕರಡಹಳ್ಳಿಯಲ್ಲಿ ಯುಗಾದಿ ಹಬ್ಬದ ದಿನದಂದು ಹೊನ್ನಾರು ಕಟ್ಟುವ ಆಚರಣೆ ನಡೆಯಿತು.