ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಹು ಬೇಡಿಕೆಯ 4 ಮತ್ತು 5ನೇ ಫ್ಲ್ಯಾಟ್ ಫಾರಂಗಳನ್ನು ಸಂಪರ್ಕಿಸುವ ಮೊದಲ ಪಾದಚಾರಿ ಮೇಲ್ಸೇತುವೆ ಪೂರ್ಣಗೊಂಡಿದೆ. ಇನ್ನೂ ಒಂದು ಮೇಲ್ಸೇತುವೆ ಹಾಗೂ ಶೆಲ್ಟರ್, ಎಸ್ಕಲೇಟರ್ ಕಾಮಗಾರಿ ಬಾಕಿ ಉಳಿದಿದೆ. ಸೆಂಟ್ರಲ್ ನಿಲ್ದಾಣದ ಈ ಎರಡು ಹೆಚ್ಚುವರಿ ಫ್ಲ್ಯಾಟ್‌ಫಾರಂ ಕಾಮಗಾರಿ ಕಳೆದ ನವೆಂಬರ್‌ನಲ್ಲಿ ಪೂರ್ಣಗೊಂಡು ಬಳಕೆಯಲ್ಲಿದೆ. ಈ ನೂತನ ಫ್ಲಾಟ್ ಫಾರಂಗಳನ್ನು ಮಂಗಳೂರು ಸೆಂಟ್ರಲ್‌ಗೆ ಬರುವ ರೈಲುಗಳ ನಿಲುಗಡೆಗಾಗಿ ಬಳಕೆ ಮಾಡುತ್ತಿದ್ದರೆ, ಇದೀಗ ಈ ಫ್ಲಾಟ್ ಫಾರಂಗಳ ಮೂಲಕ ರೈಲುಗಳ ಸಂಚಾರವನ್ನೂ ನಿಧಾನಗತಿಯಲ್ಲಿ ಆರಂಭಿಸಲಾಗಿದೆ. ಈ ನೂತನ ಫ್ಲ್ಯಾಟ್ ಫಾರಂಗಳು ಬಳಕೆಯಾಗುತ್ತಿದ್ದರೂ, ಮೇಲ್ಸೇತುವೆಯ ಕೊರತೆಯಿಂದಾಗಿ ಈ ಫ್ಲಾಟ್ ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಫ್ಲಾಟ್‌ಫಾರಂನಿಂದ ನಿಲ್ದಾಣದ ಹಿಂದುಗಡೆ ರಸ್ತೆಗೆ ಸಾಗಿ ಮುಖ್ಯ ದ್ವಾರ ಅಥವಾ ಅವರ ಮುಂದಿನ ಪ್ರಯಾಣ ಬೆಳೆಸಲು ಬಹುದೂರ ನಡೆದೇ ಸಾಗಬೇಕಾಗಿತ್ತು. ಕೆಲವರು ಫ್ಲಾಟ್‌ಫಾರಂನಿಂದ ಇಳಿದು ಹಳಿಗಳನ್ನು ದಾಟಿ 3 ನೇ ಫ್ಲ್ಯಾಟ್ ಫಾರಂಗೆ ಹತ್ತಿ ಅಲ್ಲಿಂದ ಮೇಲ್ಸೇತುವೆ ಮೂಲಕ ಮುಖ್ಯ ದ್ವಾರ ತಲುಪಬೇಕಾಗಿತ್ತು. ಇದೀಗ ಮೇಲ್ಸೇತುವೆ ನಿರ್ಮಾಣವಾಗಿರುವುದರಿಂದ ಈ ನೂತನ ಫ್ಲಾಟ್‌ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಮೇಲ್ಸೇತುವೆ ಮೂಲಕ ಮುಖ್ಯದ್ವಾರಕ್ಕೆ ಕೆಲ ನಿಮಿಷಗಳಲ್ಲೇ ತಲುಪಬಹುದಾಗಿದೆ.
ಉದ್ಘಾಟನೆ ಬಾಕಿ: ಫ್ಲ್ಯಾಟ್ ಫಾರಂಗಳು ರೈಲು ಸಂಚಾರಕ್ಕೆ ಬಳಕೆಯಾಗುತ್ತಿದ್ದರೂ, ಅಧಿಕೃತವಾಗಿ ಫ್ಲ್ಯಾಟ್ ಫಾರಂಗಳು ಉದ್ಘಾಟನೆಗೊಂಡಿಲ್ಲ. ಹಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಫ್ಲ್ಯಾಟ್ ಫಾರಂಗಳನ್ನು ಬಳಕೆ ಮಾಡಲಾಗುತ್ತಿದೆ. ಮಾತ್ರವಲ್ಲದೆ, ಪಾದಚಾರಿ ಮೇಲ್ಸೇತುವೆಯೂ ಪ್ರಯಾಣಿಕರ ಬಳಕೆಗೆ ಲಭ್ಯ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.