ಸಾರಾಂಶ
ಎಂ. ಪ್ರಹ್ಲಾದ್
ರಾಜಾ ಉಡಚಪ್ಪ ನಾಯಕ ವೇದಿಕೆಕನಕಗಿರಿ: ೨೦೨೪ರ ಕನಕಗಿರಿ ಉತ್ಸವ ನಿಮಿತ್ತ ರಾಜಾ ಉಡಚಪ್ಪ ನಾಯಕ ವೇದಿಕೆ ಬಳಿ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕನಕಾಚಲಪತಿ ದೇಗುಲದ ಮುಖ್ಯ ಗೋಪುರವು ಚೆಂಡು ಹಾಗೂ ಗುಲಾಬಿ ಹೂವುಗಳಿಂದ ಅರಳಿದ್ದು, ಇದು ನೋಡುಗರ ಮನ ಸೆಳೆಯುತ್ತಿದೆ.ಬರೋಬ್ಬರಿ ೨೦ ಕ್ವಿಂಟಲ್ ಚೆಂಡು, ಗುಲಾಬಿ ಹೂವು ಬಳಸಿಕೊಂಡು ಈ ಗೋಪುರ ಸಿದ್ಧಪಡಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಕೆಳಗಡೆ ಮಧ್ಯ ಭಾಗದಲ್ಲಿ ಕನಕಾಚಲ (ನರಸಿಂಹಸ್ವಾಮಿ) ದೇವರನ್ನು ನಿರ್ಮಿಸಲಾಗಿದ್ದು, ಈ ಹೂವಿನ ಗೋಪುರ ಪ್ರದರ್ಶನ ವೀಕ್ಷಿಸಲು ಬರುವ ಜನರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇನ್ನು ಪ್ರದರ್ಶನದ ಮುಂಭಾಗದಲ್ಲಿ ತಾಲೂಕಿನ ಸಿರಿವಾರ ಗ್ರಾಮದ ಬಳಿ ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ ನಿರ್ಮಿಸುವ ಉದ್ದೇಶವನ್ನು ತೋಟಗಾರಿಕೆ ಇಲಾಖೆ ಕನಕಗಿರಿ ಉತ್ಸವದಲ್ಲಿ ಬಿಚ್ಚಿಟ್ಟಿದ್ದು, ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಪ್ರಯತ್ನವಾಗಿದೆ.ತೋಟಗಾರಿಕೆಯಲ್ಲಿ ರೈತರು ಇನ್ನಷ್ಟು ಜಾಗೃತಿಗೊಳಿಸುವ ಉದ್ದೇಶದಿಂದ ಜಿಲ್ಲೆಯ ರೈತರು ಅತ್ಯುತ್ತಮವಾಗಿ ಬೆಳೆದ ದಾಳಿಂಬೆ, ಪೇರಲ, ಪಪ್ಪಾಯಿ, ದ್ರಾಕ್ಷಿ ಸೇರಿದಂತೆ ನಾನಾ ದಿನಸಿ ಹಣ್ಣನ್ನು ತಂದು ಇಡಲಾಗಿದೆ. ಪ್ರದರ್ಶನಕ್ಕೆ ರೈತರು ಬಂದು ಕೇಳಿದಾಗ ಈ ಹಣ್ಣುಗಳ ಬೆಳೆದ ವಿಧಾನದ ಕುರಿತು ಸವಿಸ್ತಾರ ಮಾಹಿತಿ ನೀಡಲಾಗುತ್ತಿದೆ.ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರೈಸಿದ ಭಾಗವಾಗಿ ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನದ ರಂಗೋಲಿ ಬಿಡಿಸಿದೆ. ಸರ್ಕಾರ ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಿಂದ ಬಸವೇಶ್ವರರ ಮೂರ್ತಿಯನ್ನು ನಾನಾ ಬಗೆಯ ಹೂವಿನ ಕುಂಡಗಳ ನಡುವೆ ಇಡಲಾಗಿದ್ದು, ಇವು ವೀಕ್ಷಕರ ಗಮನ ಸೆಳೆಯುತ್ತಿವೆ.
ಕಲ್ಲಂಗಡಿಯಲ್ಲಿ ಕುವೆಂಪು, ದ.ರಾ. ಬೇಂದ್ರೆ, ಪುಟ್ಟರಾಜ ಗವಾಯಿ, ಶಿವಕುಮಾರ ಶ್ರೀಗಳು, ವರನಟ ಡಾ.ರಾಜಕುಮಾರ, ಪುನೀತ ರಾಜಕುಮಾರ ಸೇರಿದಂತೆ ಹಲವು ಗಣ್ಯರ ಚಿತ್ರಗಳು ಕಲ್ಲಂಡಿಯಲ್ಲಿ ಕೆತ್ತನೆ ಮಾಡಲಾಗಿದೆ.ತೆಂಗಿನ ಗರಿಯಲ್ಲಿ ಅರಳಿದ ಶ್ರೀರಾಮ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾದರಿಯಾಗಿಟ್ಟುಕೊಂಡು ಮತ್ತು ಆತನ ಆದರ್ಶಗಳು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದ್ದರಿಂದ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತ ಪ್ರಭು ಶ್ರೀರಾಮನನ್ನು ಹೋಲುವ ಚಿತ್ರವನ್ನು ತೆಂಗಿನ ಗರಿಯಲ್ಲಿ ಅರಳಿಸಿ ಪ್ರದರ್ಶನಕ್ಕಿಡಲಾಗಿದ್ದು, ಇದು ಕೂಡ ವೀಕ್ಷಕರನ್ನು ಸೆಳೆಯುತ್ತಿದೆ.