ಜನಪದರ ಹಾಡು ಮುಖ್ಯವೇ ಹೊರತು, ವೇಷಭೂಷಣವಲ್ಲ-ಕುಲಪತಿ ಪ್ರೊ. ಭಾಸ್ಕರ್‌

| Published : Aug 24 2024, 01:17 AM IST

ಸಾರಾಂಶ

ಭೌತಿಕ ಹಾಗೂ ಬೌದ್ಧಿಕ ವಿಕಾಸದ ಹಿನ್ನೆಲೆಯಲ್ಲಿ ನಮ್ಮನ್ನು ತಿದ್ದಿಕೊಳ್ಳುವಂತೆ ಸಾಹಿತ್ಯ ರಚಿಸಿ ಹಾಡಿದವರು ನಮ್ಮ ಜನಪದರು. ಹಾಡು ಹೇಗೆ ಹೇಳುತ್ತಿದ್ದಾರೆ ಎನ್ನುವುದು ಮುಖ್ಯವೇ ಹೊರತು ಅವರ ವೇಷಭೂಷಣ ಮುಖ್ಯವಲ್ಲ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.

ಶಿಗ್ಗಾಂವಿ: ಭೌತಿಕ ಹಾಗೂ ಬೌದ್ಧಿಕ ವಿಕಾಸದ ಹಿನ್ನೆಲೆಯಲ್ಲಿ ನಮ್ಮನ್ನು ತಿದ್ದಿಕೊಳ್ಳುವಂತೆ ಸಾಹಿತ್ಯ ರಚಿಸಿ ಹಾಡಿದವರು ನಮ್ಮ ಜನಪದರು. ಹಾಡು ಹೇಗೆ ಹೇಳುತ್ತಿದ್ದಾರೆ ಎನ್ನುವುದು ಮುಖ್ಯವೇ ಹೊರತು ಅವರ ವೇಷಭೂಷಣ ಮುಖ್ಯವಲ್ಲ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಾಡು ಬರೆಯುವುದು ಮತ್ತು ಅದಕ್ಕೆ ತಕ್ಕಂತೆ ಸಂಕಥನ ತುಂಬುವುದು ಬಹಳ ಮಹತ್ವದ್ದು, ಹಾಡು ಬಂದರೆ ಹಾಡು ಬರದಿದ್ದರೆ ಕುಂತು ಕೇಳು ಎನ್ನುವುದನ್ನು ಜನಪದರು ಹೇಳಿದ್ದಾರೆ, ಈ ಮೂಲಕ ಅವರು ಸಮಾಜಕ್ಕೆ ಮೌಲಿಕ ಸಂದೇಶ ಸಾರಿದ್ದಾರೆ ಎಂದರು.ಜನಪದ ಕಲಾವಿದರು ನಮಗೆ ಹೂವನ್ನು ಕೊಟ್ಟಿದ್ದಾರೆ. ಅದನ್ನು ನಾವು ಕಾಪಿಟ್ಟುಕೊಂಡು ವಿಶ್ವಮಟ್ಟದಲ್ಲಿ ಆ ಹೂವಿನ ಸುವಾಸನೆ ಪಸರಿಸುವ ಕೆಲಸ ಮಾಡುತ್ತೇವೆ, ಜನಪದ ಕಲೆಯನ್ನು ಪ್ರಚುರ ಪಡಿಸುತ್ತೇವೆ ಎಂದರು.ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ವಿಶ್ವದಾದ್ಯಂತ ಶಾಲಾ ಕಾಲೇಜುಗಳು ಸಂಘ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ವಿಶ್ವ ಜಾನಪದ ದಿನ ಆಚರಣೆ ಮಾಡುತ್ತಿದ್ದಾರೆ. ಜಾನಪದ ವಿಶ್ವವಿದ್ಯಾಲಯ ಕಲೆಗಳಿಗಾಗಿ, ಕಲಾವಿದರಿಗಾಗಿ ಇರುವ ಪ್ರಪಂಚದ ಒಂದೇ ಕನ್ನಡದ ಜಾನಪದ ವಿಶ್ವವಿದ್ಯಾಲಯ ಇರುವಂತದ್ದು, ಇಲ್ಲಿ ಕಲೆಯನ್ನು ತರಬೇತಿ ನೀಡುವ, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸಗಳಾಗುತ್ತಿವೆ. ಕಲಾವಿದರು ಬಂದು ಇಲ್ಲಿನ ಜಾನಪದ ಭಂಡಾರವನ್ನು ತಿಳಿದುಕೊಂಡು ಮುನ್ನಡೆಯಬೇಕು, ಜಾನಪದಕ್ಕೆ ಎಂದಿಗೂ ಸಾವಿಲ್ಲ, ಜಾನಪದ ಜನಪದರ ಜೀವಾಳ, ಜಾನಪದ ಸಾಯಲು ನಿರಾಕರಿಸದ ಜೀವಂತ ಪಳಿಯುಳಿಕೆ, ಇಂದು ಜಾನಪದವನ್ನು ಮರು ವ್ಯಾಖ್ಯಾನಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಕಲೆಗಳ ತರಭೇತಿ ಮತ್ತು ಜಾನಪದ ಸಂಪತ್ತು ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೂಲಕ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿದೆ ಎಂದರು.ಮೌಲ್ಯಮಾಪನ ಕುಲಸಚಿವ ಪ್ರೊ ಎನ್.ಎಂ. ಸಾಲಿ ಅವರು ಮಾತನಾಡಿ, ಸ್ವತಂತ್ರ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಜನಪದ ಕಲೆಗಳು ಕಟ್ಟಿಕೊಡುತ್ತವೆ. ಅಂತಹ ಕಲೆಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ. ಜನಪದ ಕಲೆಗಳು ಯಾವತ್ತೂ ನಾಶವಾಗದೇ ಇರುವ ಜೀವಂತ ಪಳೆಯುಳಿಕೆ ಎಂದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದರಾದ ಹನುಮಂತಪ್ಪ ತಿಮ್ಮಾಪೂರ ಅವರು ಮಾತನಾಡಿ, ಜಾನಪದಕ್ಕೆ ವಿಶ್ವದಲ್ಲಿ ಎಲ್ಲಿಯೂ ಇಲ್ಲದ ವಿಶ್ವವಿದ್ಯಾಲಯ ನಮ್ಮ ಜಿಲ್ಲೆಯಲ್ಲಿ ಇರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದರಾದ ಹನುಮಂತಪ್ಪ ಧಾರವಾಡ ಅವರು ಮಾತನಾಡಿ, ಜಾನಪದದ ಮೂಲ ಸಾಹಿತ್ಯವನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾಗಿದೆ ಎಂದರು. ಮೈಲಾರ ಮಹದೇವಪ್ಪ ಅವರ ಕುರಿತು ಜನಪದ ಲಾವಣಿ ಹಾಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದರಾದ ಪಕ್ಕಿರೇಶ ಮಾಸ್ತರ ಕೊಂಡಾಯಿ ಅವರು ಮಾತನಾಡಿ, ಇಂದಿನ ಯುವಕರು ಜನಪದ ಕಲೆಗಳನ್ನು ಆಸಕ್ತಿಯಿಂದ ಕಲಿತರೆ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.ಸಹಾಯಕ ಪ್ರಾಧ್ಯಾಪಕ ಡಾ. ವೆಂಕನಗೌಡ ಪಾಟೀಲ ಅವರು ವೇದಿಕೆಯಲ್ಲಿರುವ ಎಲ್ಲಾ ಗಣ್ಯ ಮಾನ್ಯರನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಚಂದ್ರಪ್ಪ ಸೊಬಟಿ ಪ್ರಾಸ್ತವಿಕವಾಗಿ ಮಾತನಾಡಿ, ಜನಪದ ಕಲಾವಿದರನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ವಿಜಯಲಕ್ಷ್ಮೀ ಗೇಟಿಯವರ ಜನಪದ ಗೀತೆ ಹೇಳಿದರು.ಶಿವಮೂರ್ತಪ್ಪ ಹಂಚಿನಮನಿ ಹಾಗೂ ತಂಡದವರು ಚೌಡಕಿ ಪದ ಹೇಳಿದರು. ವಿಜಯಲಕ್ಷ್ಮೀ ಗೊಟಗೋಡಿ ಸೋಬಾನೆ ಪದ ಹಾಡಿದರು. ನವಬಸಾಬ್ ಬೆಳಗಲಿ ಅವರಿಂದ ಕರಡಿ ಮಜಲು, ಕಜಾವಿವಿ ಜನಪದ ಕಲೆ ವಿಭಾಗದ ಮಂಜುನಾಥ ಮಠಪತಿ ಹಾಗೂ ತಂಡದವರಿಂದ ವೀರಗಾಸೆ, ಕಜಾವಿವಿ ಶರೀಫ ಮಾಕಪ್ಪನವರ ಹಾಗೂ ತಂಡದವರಿಂದ ಜನಪದ ಗೀತಗಾಯನ ಸೇರಿದಂತೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಹಿರಿಯ ಸಂಶೋಧನಾಧಿಕಾರಿಗಳಾದ ಡಾ.ಕೆ. ಪ್ರೇಮಕುಮಾರ್ ಅವರನ್ನು ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸ್ಥಳೀಯ ಹೆಚ್ಚು ಕಲಾವಿದರು ಕೊಣ್ಣೂರು ಹಿರಿಯರು ಉಪಸ್ಥಿತರಿದ್ದರು.ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ ನಿರೂಪಿಸಿದರು. ಜನಪದ ಕಲಾವಿದ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ವಂದಿಸಿದರು.