ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ರಾಜ್ಯ ಸರ್ಕಾರದ ಜನಪ್ರಿಯ ಶಕ್ತಿ ಯೋಜನೆ ಮೂಲಕ ರಾಜ್ಯದಲ್ಲಿ ಪ್ರತಿದಿನ 1 ಕೋಟಿ ಮಹಿಳೆಯರು ಪ್ರಯಾಣಿಸುತ್ತಿದ್ದು, ಬೇಡಿಕೆ ಮೇರೆಗೆ ಹೆಚ್ಚುವರಿಯಾಗಿ ಇನ್ನೂ 4 ಸಾವಿರ ನೂತನ ಬಸ್‌ಗಳನ್ನು ಹಂತ ಹಂತವಾಗಿ ಬಿಡಲಾಗುತ್ತಿದೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯ ಸಚಿವ ಬಿ.ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ ಶನಿವಾರಸಂತೆ ಪ್ರವಾಸಿ ಮಂದಿರ ಬಳಿ ರು. 1.70 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ನಂತರ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾರಂಭಿಕ ಹಂತದಲ್ಲಿ ಶಕ್ತಿ ಯೋಜನೆ ಬಗ್ಗೆ ಜನವಲಯದಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಈಗ ಯೋಜನೆ ಅನುಷ್ಠಾನಗೊಂಡ ಮೇಲೆ ರಸ್ತೆ ಸಾರಿಗೆ ನಿಗಮಕ್ಕೆ 9 ಸಾವಿರ ಸಿಬ್ಬಂದಿ ನೇಮಕ ಮಾಡಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ 840 ನೂತನ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದು ಈ ಮೂಲಕ ಶಕ್ತಿ ಯೋಜನೆ ಜನಪ್ರಿಯಗೊಂಡಿದೆ ಎಂದರು.ಶನಿವಾರಸಂತೆಯಲ್ಲಿ ನೂತನ ರಸ್ತೆ ಸಾರಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ 1.70 ಕೋಟಿ ರು. ಅನುದಾನ ನೀಡಿದ್ದು ಇದರ ಕಾಮಗಾರಿ 9 ತಿಂಗಳ ಒಳಗಡೆ ಮುಗಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೊಡಗಿನಲ್ಲಿ ಕುಶಾಲನಗರ ಸೇರಿದಂತೆ 2 ನೂತನ ರಸ್ತೆ ಸಾರಿಗೆ ವಿಭಾಗಿಯ ಡಿಪೋ ತೆರೆಯಲಾಗಿದ್ದು ಕೊಡಗಿಗೆ ಪ್ರತೇಕ ಡಿಪೋ ತೆರೆಯುವ ಬಗ್ಗೆ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದೆಂದು ಭರವಸೆ ನೀಡಿದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಶನಿವಾರಸಂತೆಯಲ್ಲಿ ರಸ್ತೆ ಸಾರಿಗೆ ಬಸ್ ನಿಲ್ದಾಣದ ಅವಶ್ಯಕತೆ ಇತ್ತು. ಶನಿವಾರಸಂತೆ ಕೊಡಗು-ಹಾಸನ-ದಕ್ಷಿಣಕನ್ನಡ ಜಿಲ್ಲಾ ಗಡಿ ಭಾಗವಾಗಿರುವುದ್ದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು ಈಗ ಇಲ್ಲಿಗೆ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಸಚಿವರು ಅನುದಾನ ನೀಡಿರವುದಕ್ಕೆ ಈ ಭಾಗದ ಜನತೆಯ ಬಗ್ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ದೈನಂದಿನ 6.90 ಲಕ್ಷ ರು. ಲಾಭ:ಶಕ್ತಿ ಯೋಜನೆ ಫಲವಾಗಿ ರಸ್ತೆ ಸಾರಿಗೆ ಬಸುಗಳಿಂದ ಕೊಡಗು ಜಿಲ್ಲೆಯಿಂದ ಪ್ರತಿದಿನ 6.90 ಲಕ್ಷ ರು. ಆದಾಯ ಬರುತ್ತಿದ್ದು ವಾರ್ಷಿಕ 12 ಕೋಟಿ ಆದಾಯ ಬರುವಂತಾಗಿದೆ ಎಂದರು. ಕೊಡಗು ಜಿಲ್ಲೆಗೆ ರಸ್ತೆ ಸಾರಿಗೆಯ ಪುತ್ತೂರು ವಿಭಾಗವಾಗಿರುವುದ್ದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ಸರ್ಕಾರ ಕೊಡಗಿಗೆ ಪ್ರತೇಕ ಡಿಪೋ ಮಾಡಿದರೆ ಉಪಯೋಗವಾಗುತ್ತದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಾರಿಗೆ ಮಾರ್ಗ ಕಲ್ಪಿಸಿಕೊಡುವಂತೆ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯಿಂದ ರಸ್ತೆ ಸಾರಿಗೆ ಸಂಸ್ಥೆಗೆ 12 ಕೋಟಿ ರು. ಆದಾಯ ಬರುತ್ತಿದ್ದು ಜಿಲ್ಲೆಗೆ ಮತ್ತಷ್ಟು ನೂತನ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ ಎಂದರು.ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್, ಗ್ರಾ.ಪಂ.ಸದಸ್ಯ ಎಸ್.ಎನ್.ರಘು ಮಾತನಾಡಿದರು.
ಕರ್ನಾಟಕ ರಸ್ತೆ ಸಾರಿಗೆ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ. ಹೊಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಅಪಾರ ಜಿಲ್ಲಾಧಿಕಾರಿ ಐಶ್ವರ್ಯ, ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ, ಗ್ರಾ.ಪಂ.ಉಪಾಧ್ಯಕ್ಷ ಸರ್ದಾರ್ ಆಹಮ್ಮದ್ ಮತ್ತಿತರರು ಹಾಜರಿದ್ದರು.