ಸಾರಾಂಶ
-ಸದ್ಭಾವನಾ ಯಾತ್ರೆ ಸ್ವಾಗತಿಸಿದ ಮಾಜಿ ಸಂಸದ ಹೆಚ್.ಹನುಮಂತಪ್ಪ। ಚಿತ್ರದುರ್ಗ ತಲುಪಿದ ರಾಜೀವ್ ಜ್ಯೋತಿ ಸದ್ಬಾವನಾ ಯಾತ್ರೆ
-------ಕನ್ನಡಪ್ರಭವಾರ್ತೆ, ಚಿತ್ರದುರ್ಗ
ರಾಜೀವಗಾಂಧಿ ಪ್ರಧಾನಿಯಾಗಿದ್ದ ವೇಳೆ ತಂತ್ರಜ್ಞಾನಕ್ಕೆ ನೀಡಿದ ಆದ್ಯತೆ ಪರಿಣಾಮ ಇಂದು ಎಲ್ಲೆಡೆ ಇಂಟರ್ ನೆಟ್, ಮೊಬೈಲ್ ಕ್ರಾಂತಿ ಉಂಟಾಗಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಹೇಳಿದರು.ಆಗಸ್ಟ್ 9ರಂದು ಪೆರಂಬದೂರಿನಿಂದ ದೆಹಲಿಗೆ ಹೊರಟಿರುವ ರಾಜೀವ್ ಜ್ಯೋತಿ ಸದ್ಬಾವನಾ ಯಾತ್ರೆ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಸ್ವಾಗತಿಸಿ ಮಾತನಾಡಿದ ಅವರು ರಾಜೀವಗಾಂಧಿಯವರು ಇನ್ನಷ್ಟು ವರ್ಷ ಬದುಕಿದ್ದರೆ ಉತ್ತಮವಾದ ಆಡಳಿತ ನೀಡುವುದರ ಜೊತೆಗೆ ದೇಶವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎಂದರು.
ಕ್ವಿಟ್ ಇಂಡಿಯಾ ಚಳುವಳಿಯ ದಿನದಂದು ಭಯೋತ್ಪಾದನೆ ತೊರೆಯಿರಿ ಎಂಬ ಘೋಷಣೆಯೊಂದಿಗೆ ಅಗಲಿದ ನಾಯಕ ಮಾಜಿ ಪ್ರಧಾನಮಂತ್ರಿ ರಾಜೀವಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 19ರಂದು ಯಾತ್ರೆ ನವದೆಹಲಿ ತಲುಪಲಿದೆ ಎಂದರು.ರಾಜೀವಗಾಂಧಿ ಅವರ ಹತ್ಯೆಯಾದ ದಿನ ನಾನು ಅವರ ಜೊತೆಯಲ್ಲಿ ಇದ್ದೆ. ಕಾರಣಾಂತರದಿಂದ ಕಾರ್ಯಕ್ರಮ ನಡೆಯುವ ದಿನ ಅಲ್ಲಿಂದ ವಾಪಸ್ಸಾಗಿದ್ದೆ. ಹಾಗಾಗಿ, ಬದುಕುಳಿದಿದ್ದೇನೆ. ಇಲ್ಲವಾದ್ದರೆ ಅಂದೇ ನಾನು ರಾಜೀವ್ ಜೊತೆ ಸಾವಿಗೀಡಬೇಕಾಗಿತ್ತೆಂದು ಹಳೆಯ ನೆನೆಪು ಮಾಡಿಕೊಂಡರು.
ರಾಜೀವಗಾಂಧಿಯವರು ಅಧಿಕಾರದಲ್ಲಿದ್ದಾಗ ಉತ್ತಮ ಕಾರ್ಯ ಮಾಡಿದ್ದಾರೆ. 18ನೇ ವಯಸ್ಸಿಗೆ ಯುವಜನಾಂಗಕ್ಕೆ ಮತದಾನದ ಹಕ್ಕನ್ನು ನೀಡಿದರು. ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಮಾಡುವುದರ ಮೂಲಕ ಗ್ರಾಮ ಆಡಳಿತಕ್ಕೆ ಆದ್ಯತೆ ನೀಡಿದರು. ಇಂದು ತಾಪಂ, ಜಿಪಂ ಹಾಗೂ ಗ್ರಾಪಂ ಆಡಳಿತ ವ್ಯವಸ್ಥೆ ಜಾರಿ ಹಿಂದೆ ರಾಜೀವಗಾಂಧಿ ಅವರ ಕನಸು ಇದೆ. ರಾಜೀವಗಾಂಧಿಯವರಿಗೆ ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ. ಅನಿವಾರ್ಯ ಕಾರಣದಿಂದಾಗಿ ಪ್ರವೇಶ ಮಾಡಿದರೆಂದರು.ರಾಜೀವ ಜ್ಯೋತಿ ಸದ್ಭಾವನಾ ಯಾತ್ರೆ ಸಮಿತಿ ಭಯೋತ್ಪಾದನೆ ವಿರೋಧಿ ಸಂದೇಶವನ್ನು ಸಾರುತ್ತದೆ. ರಾಷ್ಟ್ರವನ್ನು ನಿರ್ಮಿಸಲು ದೇಶದ ಏಕ್ಯತೆಯನ್ನು ಬಲಪಡಿಸಲು ರಾಜೀವಗಾಂಧಿಯವರ ಕೊಡುಗೆಯನ್ನು ಪ್ರಚುರ ಪಡಿಸುತ್ತಿದೆ. ಏಕತೆ ಮತ್ತು ಭಯೋತ್ಪಾದನೆ ವಿರುದ್ದ ದೃಢವಾದ ಕ್ರಮಕ್ಕೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ. ದೇಶದಲ್ಲಿ ಭಯೋತ್ಪಾದನೆಯ ಆಪಾಯಕಾರಿ ಚಟುವಟಿಕೆಗಳು ನಿಲ್ಲಬೇಕಿದೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ರಾಜೀವಗಾಂಧಿ ಬದುಕಿದ್ದರೆ ಭಾರತದ ರಾಜಕೀಯ ಚಿತ್ರಣವೇ ಬದಲಾಗುತ್ತಿತ್ತು ಎಂದು ಹನುಮಂತಪ್ಪ ತಿಳಿಸಿದರು.
ರಾಜೀವಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ಅಧ್ಯಕ್ಷ ಆರ್.ದೊರೈ, ಶ್ರೀನಿವಾಸಪ್ಪ, ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ಮೈಲಾರಪ್ಪ, ಪ್ರಕಾಶ್, ನಜ್ಮಾತಾಜ್, ಲಕ್ಷ್ಮೀಕಾಂತ್, ಕಾಂಗ್ರೆಸ್‍ನ ಕಾರ್ಮಿಕ ವಿಭಾಗದ ಜಾಕಿರ್, ಪೈಲ್ವಾನ್ ತಿಪ್ಪೇಸ್ವಾಮಿ ಭಾಗವಹಿಸಿದ್ದರು. ಇದಕ್ಕೂ ಮುನ್ನಾ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಾಯಿತು.ಪೋಟೋ: ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆ ಚಿತ್ರದುರ್ಗಕ್ಕೆ ಆಗಮಿಸಿದಾಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ನಡೆದ ಸಭೆಯಲ್ಲಿ ಮಾಜಿ ಸಂಸದ ಹೆಚ್.ಹನುಮಂತಪ್ಪ ಸ್ವಾಗತಿಸಿದರು.
------ಫೋಟೋ: 11 ಸಿಟಿಡಿ 1