ಕನ್ನಡಪ್ರಭ ವಾರ್ತೆ ಇಂಡಿ
ಶ್ರೀ ಸಿದ್ದೇಶ್ವರ ಶ್ರೀಗಳ ಆಶಯವನ್ನು ಈಡೇರಿಸುವ ಕಾರ್ಯ ನಂದಿ ಕೂಗು ಅಭಿಯಾನದಿಂದ ಜರಗುತ್ತಿದೆ. ರೈತರ ಶ್ರಮಕ್ಕೆ ತಕ್ಕ ಬೆಲೆ ನೀಡುವ ವ್ಯವಸ್ಥೆ ನಿರ್ಮಾಣವಾದರೆ ಮಾತ್ರ ಎಲ್ಲರಿಗೂ ಒಳ್ಳೆಯ ಭವಿಷ್ಯವಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯಡಿ ರೈತರ ಬಸವ ತತ್ವ ಪುನರುತ್ಥಾನಕ್ಕಾಗಿ ಪೂರಕ ಯೋಜನೆ ಹಾಗೂ ಕಾನೂನು ಜಾರಿಗೆ ತರಲು ಹಕ್ಕೊತ್ತಾಯ ಮಾಡುವುದಕ್ಕಾಗಿ 108 ಗ್ರಾಮಗಳ ಜೋಡೆತ್ತಿನ ರೈತರ ಐತಿಹಾಸಿಕ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು
ಸಿಂದಗಿಯ ಸಾರಂಗಮಠದ ಶ್ರೀ ವಿಶ್ವ ಪ್ರಭುದೇವ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ರೋಗ ರಹಿತ ಸಮಾಜ ನಿರ್ಮಾಣವಾಗಬೇಕಾದರೆ ನಂದಿ ಸಂತತಿ ಹೆಚ್ಚಿಸುವುದು ಮಾತ್ರ ಪರಿಹಾರವಾಗಿದೆ ಎಂದರು. ಬುರ್ಣಾಪುರದ ಶ್ರೀ ಯೋಗೇಶ್ವರಿ ಮಾತಾಜಿಯವರು, ಯಂತ್ರ ಆಧಾರಿತ ಕೃಷಿಯಿಂದ ರೈತರ ಸಾಗುವಳಿ ವೆಚ್ಚ ಹೆಚ್ಚಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ರೈತರು ಸಾಲ ಮುಕ್ತರಾಗಬೇಕಾದರೆ ಎತ್ತಿನ ಕೃಷಿಕರಿಗೆ ಪ್ರೋತ್ಸಾಹ ನೀಡಬೇಕು ಎಂದರು.ಸಾಲೋಟಗಿಯ ಶ್ರೀ ಸಿದ್ದೇಶ್ವರ ಆಶ್ರಮದ ಸಂಗಮೇಶ್ವರ ಸ್ವಾಮೀಜಿ, ರೈತರು, ಪೂಜ್ಯರ ಸಾನ್ನಿಧ್ಯದಲ್ಲಿ ಒಗ್ಗೂಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯ. ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳು ನಂದಿ ಕೂಗು ಅಭಿಯಾನದ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಲುವುದಾಗಿ ತಿಳಿಸಿದರು.
ನಂದಿ ಕೂಗು ಅಭಿಯಾನದ ಮಾರ್ಗದರ್ಶಕರಾದ ಬಿಜ್ಜರಗಿಯ ಶ್ರೀ ಸೋಮಲಿಂಗ ಅಜ್ಜನವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳು ಜೋಡೆತ್ತಿನ ಕೃಷಿಕರು ಎಂಬುದು ವಚನ ಸಾಹಿತ್ಯ ಹಾಗೂ ಆಧುನಿಕ ವಿಜ್ಞಾನದಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಜೊಡೆತ್ತಿನ ಕೃಷಿಕರ ಶ್ರಮಕ್ಕೆ ಬೆಲೆ ನೀಡುವ ವ್ಯವಸ್ಥೆ ನಿರ್ಮಾಣವಾದರೆ ಮಾತ್ರ ಸರ್ವರಿಗೂ ವಿಷಮುಕ್ತ ಆಹಾರ ದೊರೆಯಲು ಸಾಧ್ಯವಿದೆ. ಇಲ್ಲವಾದರೆ, ಸಮಸ್ಯೆಯು ಕೈ ಮೀರಿ ಹೋಗಿ ಸಮಾಜವು ಹಳಿ ತಪ್ಪುವುದು ಎಂದು ಕಳವಳ ವ್ಯಕ್ತಪಡಿಸಿದರು.
ನಂದಿ ಕೂಗು ಅಭಿಯಾನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿ, ಶ್ರೀ ಸಿದ್ದೇಶ್ವರ ಶ್ರೀಗಳ ಕೃಪೆಯಿಂದ ರಾಜ್ಯದ ಬಹುಜನರು ಒಂದಾಗಿ ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರಿಗೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಹಕ್ಕೊತ್ತಾಯ ಮಾಡಲು ರಾಜ್ಯಾದ್ಯಂತ ಮುಂದಾಗುತ್ತಿದ್ದಾರೆ ಎಂದರು.
ಶ್ರೀಶೈಲ ಪಾದಯಾತ್ರೆ ಸಂದರ್ಭದಲ್ಲಿ ಜರಗುವ ಕಂಬಿ ಮಲ್ಲಯ್ಯನ ಪೂಜಾ ಸಂಪ್ರದಾಯವು ಗ್ರಾಮದ ನಂದಿ ಸಂಪತ್ತನ್ನು ಉಳಿಸಿ ಬೆಳೆಸುವುದರ ಸಂಕೇತವಾಗಿದೆ. ಅದಕ್ಕಾಗಿ ಗ್ರಾಮಗಳಿಂದ ಕಂಬಿಯನ್ನು ಕಳುಹಿಸುವ ಸಂದರ್ಭದಲ್ಲಿ ಜೋಡೆತ್ತಿನ ಬಂಡಿಗಳ ನಂದಿ ಸೇನೆ ಯಾತ್ರೆಯನ್ನು 3 ರಿಂದ 11 ಕಿ.ಮೀ. ವರೆಗೆ 1008 ಗ್ರಾಮಗಳಲ್ಲಿ ಆಯೋಜಿಸುವಂತೆ ಜನಜಾಗೃತಿ ಮೂಡಿಸುವ ಸಂಕಲ್ಪ ಸಮಾವೇಶದಲ್ಲಿ ಮಾಡಿಸಲಾಯಿತು. ಮುಖ್ಯ ಮಂತ್ರಿಗಳಿಗೆ ರವಾನಿಸುತ್ತಿರುವ ನಂದಿ ಸೇನೆಯ ಹಕ್ಕೊತ್ತಾಯ ಪತ್ರವನ್ನು ಸಾಲೋಟಗಿ ಗ್ರಾಮದ ಶ್ರೀ ಸೋಮನಾಥ ಶಿವೂರ ಅವರು ಓದಿ ಹೇಳಿ ಜನರ ಒಪ್ಪಿಗೆ ಪಡೆದರು.ಆಳೂರಿನ ಶಂಕರಾನಂದ ಸ್ವಾಮೀಜಿ, ಹುಮನಾಬಾದಿನ ಬ್ರಹ್ಮಾನಂದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಭೀಮರಾಯ ಕಣ್ಣಿ, ರಮೇಶ ಕಲ್ಯಾಣಿ, ಶ್ರೀಶೈಲ ನಾಗರಹಳ್ಳಿ, ರಾಜಕುಮಾರ ಅಡಗಲ್, ಶಿವಾನಂದ ಮನಗೊಂಡ, ವಿಜಯಕುಮಾರ ಚನಗೊಂಡ, ವಿಜುಗೌಡ ಪಾಟೀಲ, ಹಣಮಂತ ಉಪ್ಪಾರ, ಶಿವರಾಜ ಪಾರಗೊಂಡ, ಗಂಗಾಧರ ಮನಗೊಂಡ, ಸಿದ್ಧನಗೌಡ ಬಿರಾದಾರ ಹಾಗೂ ಇತರರು ಭಾಗವಹಿಸಿದ್ದರು. ಬಸವರಾಜ ಗೊರನಾಳ ನಿರೂಪಿಸಿ, ವಂದಿಸಿದರು.
ನಾಗರಿಕತೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ, ಸರ್ಕಾರ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹ ಧನ ನೀಡಬೇಕು. ರೈತರ ಬಸವ ತತ್ವ ಪುನರುತ್ಥಾನಕ್ಕಾಗಿ ಶೇ.10ರಷ್ಟು ಬಜೆಟ್ ಮೀಸಲಿಡಬೇಕು. ಎಂದು ನಂದಿ ಕೂಗು ಅಭಿಯಾನದ ರೂವಾರಿ ಬಸವರಾಜ ಬಿರಾದಾರ ತಿಳಿಸಿದರು.