ದೇಶದ ಮಹತ್ವಾಕಾಂಕ್ಷೆಯ ಯೋಜನೆಯಾದ ವಂದೇ ಭಾರತ್ ಬೆಂಗಳೂರು -ಮಡಗಾಂವ್ ರೈಲಿಗೆ ಶುಕ್ರವಾರ ಮಧ್ಯರಾತ್ರಿ ಬೈಂದೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನೂರಾರು ಸಾರ್ವಜನಿಕರು ರೈಲ್ವೆ ಯಾತ್ರಿ ಸಂಘದ ಸದಸ್ಯರು ಸಂಭ್ರಮದಿಂದ ಸ್ವಾಗತಿಸಿ ಸಂತಸಪಟ್ಟರು.

ಬೈಂದೂರು: ದೇಶದ ಮಹತ್ವಾಕಾಂಕ್ಷೆಯ ಯೋಜನೆಯಾದ ವಂದೇ ಭಾರತ್ ಬೆಂಗಳೂರು -ಮಡಗಾಂವ್ ರೈಲಿಗೆ ಶುಕ್ರವಾರ ಮಧ್ಯರಾತ್ರಿ ಬೈಂದೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನೂರಾರು ಸಾರ್ವಜನಿಕರು ರೈಲ್ವೆ ಯಾತ್ರಿ ಸಂಘದ ಸದಸ್ಯರು ಸಂಭ್ರಮದಿಂದ ಸ್ವಾಗತಿಸಿ ಸಂತಸಪಟ್ಟರು.

ಈ ಸಂದರ್ಭ ಉಪಸ್ಥಿತರಿದ್ದ ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಅವರನ್ನು ರೈಲ್ವೆ ಯಾತ್ರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ದೇಶದ ರೈಲ್ವೆ ನಿಲ್ದಾಣಗಳು ಇಂದು ವಿಮಾನ ನಿಲ್ದಾಣಕ್ಕೆ ಕಡಿಮೆ ಇಲ್ಲದಂತೆ ವ್ಯವಸ್ಥಿತವಾಗುತ್ತಿವೆ. ಅದರಂತೆ ಬೈಂದೂರು ರೈಲ್ವೆ ನಿಲ್ದಾಣ ಕೂಡ ಸುಸಜ್ಜಿತವಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ಕೊಲ್ಲೂರಿಗೆ ಪ್ರತಿದಿನ 3 - 4 ಸಾವಿರ ಭಕ್ತರು ಆಗಮಿಸುತ್ತಾರೆ, ಈ ವಂದೇ ಭಾರತ್ ರೈಲಿನಿಂದ ಅವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಕೊಲ್ಲೂರು ಹೆದ್ದಾರಿ ನಿರ್ಮಾಣವಾದ ಬಳಿಕ ಬೈಂದೂರು ರೈಲ್ವೆ ನಿಲ್ದಾಣ ಇನ್ನಷ್ಟು ಸನಿಹವಾಗಲಿದೆ ಕೊಲ್ಲೂರಿಗೆ ಉಪನಗರವಾಗಿ ಬೈಂದೂರು ಬೆಳೆಯುತ್ತಿದೆ. ಕ್ಷೇತ್ರಕ್ಕೆ 100 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು ಭವಿಷ್ಯದಲ್ಲಿ ಬೈಂದೂರಿನ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.

ಕರಾವಳಿಗೆ ಹೊಸ ದಿಕ್ಕು:

ಬೈಂದೂರು ಶಾಸಕ ಗುರುರಾಜ ಗಂಟೆಹೊಳೆ ಮಾತನಾಡಿ ರಾಘಣ್ಣರಂತಹ ಸಂಸದರನ್ನು ಪಡೆದ ಪರಿಣಾಮ ಈ ಮಟ್ಟಿನ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಹೋರಾಟ ಮತ್ತು ಪ್ರಯತ್ನ ಯಾವ ಮಟ್ಟಿಗೆ ಅನೂಕೂಲವಾಗುತ್ತದೆ ಎನ್ನುವುದು ಬೈಂದೂರು ರೈಲ್ವೆ ಹೋರಾಟ ಸಮಿತಿಯ ಪ್ರಯತ್ನ ಸ್ಪಷ್ಟ ನಿದರ್ಶನವಾಗಿದೆ. ವಂದೆ ಭಾರತ್ ರೈಲು ಆರಂಭದಿಂದ ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕುದೊರೆಯಲಿದೆ ಎಂದರು.

ಕೊಂಕಣ ರೈಲ್ವೆ ಅಧಿಕಾರಿ ಮಂಜುನಾಥ ದೇವಾಡಿಗ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ. ಇದ್ದರು.ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್ ಸ್ವಾಗತಿಸಿದರು. ಗೌರವಾಧ್ಯಕ್ಷ ಕೆ ವೆಂಕಟೇಶ ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಶಿಕ್ಷಕ ಗಣಪತಿ ಹೋಬಳಿದಾರ್ ನಿರೂಪಿಸಿ ವಂದಿಸಿದರು.