ಡಾ.ಪಿ.ಬಿ.ಭರತ್ ಅಭಿಮತ । ಅಂತರ್ ಕಾಲೇಜು ವಿದ್ಯುತೋತ್ಸವ-2026 ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಮತ್ತು ಪರಿಶ್ರಮ ದೇಶದ ಭವಿಷ್ಯವನ್ನು ರೂಪಿಸಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ಪಿ.ಬಿ.ಭರತ್ ಹೇಳಿದರು.

ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ಒಂದು ದಿನದ ಅಂತರ್ ಕಾಲೇಜು ವಿದ್ಯುತೋತ್ಸವ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನವು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ವಿದ್ಯುತ್ ತಂತ್ರಜ್ಞಾನ ಕ್ಷೇತ್ರವು ಮಾನವ ಜೀವನವನ್ನು ಸುಲಭಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಬೆಳಕಿನಿಂದ ಹಿಡಿದು ಸಂವಹನದವರೆಗೆ, ಕೈಗಾರಿಕೆಗಳಿಂದ ಹಿಡಿದು ಡಿಜಿಟಲ್ ಯುಗದವರೆಗೆ ವಿದ್ಯುತ್ ತಂತ್ರಜ್ಞಾನದ ಪ್ರಭಾವವನ್ನು ಕಾಣಬಹುದು ಎಂದರು.

ಈ ತಾಂತ್ರಿಕ ಉತ್ಸವವು ಕೇವಲ ಸ್ಪರ್ಧೆಗಳ ವೇದಿಕೆಯಲ್ಲ, ನಿಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ನವೀನ ಚಿಂತನೆಗಳನ್ನು ಪ್ರದರ್ಶಿಸುವ ಅದ್ಭುತ ಅವಕಾಶವಾಗಿದೆ. ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹಂಚಿಕೊಳ್ಳುವುದರ ಮೂಲಕ ಪರಸ್ಪರ ಕಲಿಕೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.


ದಾವಣಗೆರೆ ಜಿ.ಎಂ.ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಮರುಳಸಿದ್ದಪ್ಪ ಎಚ್.ಬಿ.ಮಾತನಾಡಿ, ನಮ್ಮ ದಿನನಿತ್ಯದ ಜೀವನದಲ್ಲಿ ವಿದ್ಯುತ್ ಇಲ್ಲದೆ ಏನೂ ಸಾಧ್ಯವಿಲ್ಲ. ಇಂಧನ ಉತ್ಪಾದನೆ, ಪ್ರಸರಣ, ನವೀಕರಿಸಬಹುದಾದ ಶಕ್ತಿ, ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನ, ಇವೆಲ್ಲವೂ ದೇಶದ ಅಭಿವೃದ್ಧಿಗೆ ಪ್ರಮುಖವಾಗಿವೆ. ಇಂತಹ ತಾಂತ್ರಿಕ ಉತ್ಸವಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ನವೀನ ಆಲೋಚನೆಗಳನ್ನು ಹಂಚಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿವೆ ಎಂದರು.

ನಮ್ಮ ದೇಶವು ಇಂದು ಶಕ್ತಿ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆಯನ್ನು ಕಾಣುತ್ತಿದೆ. ಸೌರಶಕ್ತಿ, ಗಾಳಿ ಶಕ್ತಿ ಮತ್ತು ವಿದ್ಯುತ್ ವಾಹನಗಳ ಅಭಿವೃದ್ಧಿ ಇವುಗಳಲ್ಲಿ ಯುವ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮುಖ್ಯವಾಗಿದೆ. ನಿಮ್ಮಂತಹ ವಿದ್ಯಾರ್ಥಿಗಳಿಂದಲೇ ನಾಳೆಯ ಭಾರತವು ಇನ್ನಷ್ಟು ಶಕ್ತಿಶಾಲಿಯಾಗಲಿದೆ. ಗೆಲುವಿಗಿಂತ ಕಲಿಕೆ ಮುಖ್ಯ ಎಂಬುದನ್ನು ಮರೆಯಬೇಡಿ ಎಂದರು.

ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ. ಬಿ.ಜಿ.ಕುಮಾರಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಲಕ ಡಾ.ಎ.ಎಂ.ರಾಜೇಶ್, ಡೀನ್ ಅಕಾಡೆಮಿಕ್ ಡಾ.ಚೇತನ್.ಎಸ್, ಕಾರ್ಯಕ್ರಮದ ಸಂಚಾಲಕ ಡಾ.ಎಸ್.ಸಿ.ಮಂಜುನಾಥ್, ಸಂಯೋಜಕರಾದ ಪ್ರೊ.ಸುಧಾ.ಟಿ, ಪ್ರೊ.ನೂರ್‌ಫಾತಿಮ, ಪ್ರೊ.ಸುಶ್ಮಿತಾದೇಬ್, ವಿದ್ಯಾರ್ಥಿ ಸಂಯೋಜಕರಾದ ಕಾವ್ಯ, ಚಂದನ್, ಭರತ್, ವೆಂಕಟೇಶ್, ಚಂದನ, ವಿಭಾಗದ ಬೋದಕ ಮತ್ತು ಬೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ತೇಜಸ್ವಿನಿ ಪ್ರಾರ್ಥಿಸಿ, ಬಿಬಿ ಹಜಿರಾ ಸ್ವಾಗತಿಸಿ, ಕೇಸರ್ ಮಲನ್ ನಿರೂಪಿಸಿ ವಂದಿಸಿದರು.