ಪ್ರತ್ಯಾರೋಪಕ್ಕೆ ನಗರಸಭೆಯ ಸಾಮಾನ್ಯ ಸಭೆ ಸಾಕ್ಷಿ

| Published : Aug 13 2025, 12:30 AM IST

ಪ್ರತ್ಯಾರೋಪಕ್ಕೆ ನಗರಸಭೆಯ ಸಾಮಾನ್ಯ ಸಭೆ ಸಾಕ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ಜಾಗ ಅತಿಕ್ರಮಣ ಮಾಡಿಕೊಂಡ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಸಾಮಾನ್ಯ ಸಭೆ ಕರೆಯಬೇಕು ಎಂದು ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು.

ಶಿರಸಿ: ನಗರಸಭೆ ಹಿಂಭಾಗದಲ್ಲಿರುವ ಅತಿಕ್ರಮಣ ಜಾಗ ತೆರವುಗೊಳಿಸುವ ಚರ್ಚೆ ವಿಷಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆದು ನಗರಸಭೆಯ ಆಡಳಿತ ಕಾಂಗ್ರೆಸ್‌ನ ಕೈನಲ್ಲಿದ್ದಾಗ ಯಾಕೆ ಮೌನ ವಹಿಸಿರುವುದು? ಹಾಲಿ ಬಿಜೆಪಿ ಆಡಳಿತದಲ್ಲಿ ತೆರವುಗೊಳಿಸಲು ಮೀನಮೇಷ ಮಾಡುತ್ತಿರುವುದು ಯಾಕೆ? ಎಂಬ ಸದಸ್ಯರ ಆರೋಪ ಪ್ರತ್ಯಾರೋಪಕ್ಕೆ ನಗರಸಭೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ನಗರದ ಅಟಲ್‌ಜೀ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ವಿಷಯ ನಂಬರ್ ೫ ರಲ್ಲಿ ಶಿರಸಿ ನಗರಸಭೆ ಮಾಲಿಕತ್ವದ ಸರ್ವೇ ನಂ.೭೩ರ ಜಾಗದ ಕುರಿತು ಶಿರಸಿ ನಗರಸಭೆ ಸದಸ್ಯರಿಂದ ಬಂದ ಪತ್ರದ ಕುರಿತು ವಿಚಾರ ಚರ್ಚಿಸುವ ವೇಳೆ ನಗರಸಭೆ ಸದಸ್ಯರಾದ ಯಶವಂತ ಮರಾಠೆ, ನಾಗರಾಜ ನಾಯ್ಕ, ಆನಂದ ಸಾಲೇರ, ಕಿರಣ ಶೆಟ್ಟರ್, ರಾಘವೇಂದ್ರ ಶೆಟ್ಟಿ, ದೀಪಾ ಮಹಾಲಿಂಗಣ್ಣನವರ್ ಇನ್ನಿತರ ಸದಸ್ಯರು ವಿರೋಧ ಪಕ್ಷದ ಸದಸ್ಯರನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ೧೪-೧-೨೦೧೬ ರಲ್ಲಿ ನಗರಸಭೆ ಕಬ್ಜಾ ತೆಗೆದುಕೊಂಡು ಅತಿಕ್ರಮಣ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಹೈಕೋಟ್‌ಗೆ ಅರ್ಜಿ ಸಲ್ಲಿಸಲು ೪೫ ದಿನ ಕಾಲವಕಾಶವಿರುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ೯೦ ದಿನ ಕಾಲವಕಾಶವಿರುತ್ತದೆ. ಆ ಸಮಯದಲ್ಲಿ ನೋಟಿಸ್ ನೀಡದೇ ಸುಮ್ಮನಿದ್ದವರು ಕಾಂಗ್ರೆಸ್‌ನವರು.

ನೀವು ಸಹ ಹಣ ಪಡೆದುಕೊಂಡಿರುವ ಅನುಮಾನವಿದೆ. ನಿಮ್ಮ ಆಡಳಿತದಲ್ಲಿ ಯಾಕೆ ತೆರವುಗೊಳಿಸಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದಾಗ, ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಪ್ರದೀಪ ಶೆಟ್ಟಿ, ಫ್ರಾನ್ಸಿಸ್ ನರೋನಾ, ದಯಾನಂದ ನಾಯ್ಕ ಮತ್ತಿತರರ ಸದಸ್ಯರು, ೨೦೧೮ ರಿಂದ ಬಿಜೆಪಿ ನಗರಸಭೆಯಲ್ಲಿ ಅಧಿಕಾರದಲ್ಲಿದೆ. ಯಾಕೆ ಅತಿಕ್ರಮಣ ತೆರವುಗೊಳಿಸಲು ಸಾಧ್ಯವಾಗಿಲ್ಲ. ಅತಿಕ್ರಮಣದಾರರ ಜತೆ ಕೈಜೋಡಿಸಿ, ₹೩ ಲಕ್ಷ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವವರು ಯಾರ ಪಕ್ಷದವರು ? ಬಿಜೆಪಿ ಪಕ್ಷದ ಸದಸ್ಯರಲ್ಲವೇ ಎಂದು ಆರೋಪಿಸಿದರು.

ವಿರೋಧ ಪಕ್ಷದ ನಾಯಕ ಪ್ರದೀಪ ಶೆಟ್ಟಿ ಮಾತನಾಡಿ, ನಗರಸಭೆ ಜಾಗ ಅತಿಕ್ರಮಣ ಮಾಡಿಕೊಂಡ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಸಾಮಾನ್ಯ ಸಭೆ ಕರೆಯಬೇಕು ಎಂದು ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅಧ್ಯಕ್ಷರು ವಿಶೇಷ ಸಭೆ ನಡೆಸದೇ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚಿಸಲು ಅವಕಾಶ ನೀಡಿದ್ದಾರೆ. ನಗರದ ಜನತೆ ೭ವರ್ಷದ ಹಿಂದೆ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಈ ಆಡಳಿಯದಲ್ಲಿ ಆರೋಪಗಳ ಮೇಲೆ ಆರೋಪ. ನಗರಸಭೆಯ ಬಗ್ಗೆ ಅಸಹ್ಯವಾಗಿ ಜನರು ಮಾತನಾಡುತ್ತಿದ್ದಾರೆ. ಪೈಪ್ ಲಪಟಾವಣೆ ಪ್ರಕರಣದಲ್ಲಿ ನಮ್ಮ ಪಕ್ಷದ ಸದಸ್ಯರು ಭಾಗಿಯಾದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ನಗರ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯರೂ ಆಗಿರುವವರು ಟೇಬಲ್ ಕುಟ್ಟಿ ಹೇಳಿದ್ದರು. ಆ ನಂತರ ಪತ್ರಿಕಾ ಪ್ರಕಟಣೆ ನೀಡಿ ಕಾಂಗ್ರೆಸ್ ಷಡ್ಯಂತರದಿಂದ ಹೆಸರು ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸದಸ್ಯರ ಕೈವಾಡ ಏನೆಂಬುದನ್ನು ಸ್ಪಷ್ಟಪಡಿಸಬೇಕು ಆಗ್ರಹಿಸಿದರು.

ಸರ್ವೆ ನಂಬರ್ ೭೩ರಲ್ಲಿ ಅತಿಕ್ರಮಣ ಖುಲ್ಲಾ ಪಡಿಸಲು ನಿರ್ಧಾರ ಮಾಡಿದವು. ಅತಿಕ್ರಮಣದಾರ ಜತೆ ಒಪ್ಪಂದ ಮಾಡಿಕೊಂಡು ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಗಣಪತಿ ನಾಯ್ಕ ಮತ್ತು ಕಂದಾಯ ನಿರೀಕ್ಷಕ ಆರ್.ಎಂ. ವೆರ್ಣೇಕರ ಹಣ ಪಡೆಯುವಾಗ ಲೋಕಾಯುಕ್ತರ ಕೈಯಲ್ಲಿ ಸಿಲುಕಿಕೊಂಡರು. ಆಡಳಿತ ಪಕ್ಷದ ತಪ್ಪಿನಿಂದ ವಿರೋಧ ಪಕ್ಷದವರು ಹೇಳಿಸಿಕೊಳ್ಳಬೇಕಾಗಿದೆ. ನಗರಸಭೆಯ ಬಿಜೆಪಿ ಆಡಳಿತ ಶೂನ್ಯ ಸಾಧನೆಯಾಗಿದೆ. ಶೌಚಾಲಯವು ಬಾವಿ ತೆಗೆಯಲು ಸಾಧ್ಯವಿಲ್ಲ. ರಸ್ತೆಗಳೆಲ್ಲವೂ ಹೊಂಡಗಳ ರಾಶಿ. ಇದಕ್ಕೆಲ್ಲ ಸ್ಪಷ್ಟ ಉತ್ತರ ನೀಡಬೇಕು. ಇಲ್ಲವಾದಲ್ಲಿ ಸಭೆಯಿಂದ ಏಳುವುದಿಲ್ಲ ಎಂದು ಪಟ್ಟು ಹಿಡಿದರು.

ಇದಕ್ಕೆ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಪ್ರತಿಕ್ರಿಯಿಸಿ, ಶೌಚಾಲಯಕ್ಕೆ ಟೆಂಡರ್ ಕರೆಯಲಾಗಿತ್ತು. ಯಾರೂ ಬಂದಿಲ್ಲ. ಇನ್ನೊಮ್ಮೆ ಟೆಂಡರ್ ಕರೆಯುತ್ತೇವೆ. ಇಲ್ಲವಾದಲ್ಲಿ ನಗರಸಭೆಯಿಂದ ನಡೆಸುತ್ತೇವೆ ಎಂದು ಭರವಸೆ ನೀಡಿ, ಇಲ್ಲಿ ಪಕ್ಷದ ವಿಷಯ ಚರ್ಚಿಸಲು ಅವಕಾಶವಿಲ್ಲ. ಸಭೆಯ ಅಜೆಂಡಾ ವಿಷಯದ ಕುರಿತು ಚರ್ಚಿಸಲು ಮಾತ್ರ ಅವಕಾಶವಿದೆ ಎಂದರು.

ಸದಸ್ಯ ಖಾದರ ಆನವಟ್ಟಿ ಮಾತನಾಡಿ, ನಗರದಲ್ಲಿ ವಾಣಿಜ್ಯ ತೆರಿಗೆ ಕಡಿಮೆ ಬರುತ್ತಿದೆ. ಸರ್ವೆ ಮಾಡಬೇಕು. ಅವರಿಗೆ ಸರಿಯಾದ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದರು.

ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ಸ್ಥಾಯಿ ಸಮಿತಿಯ ಅನುದಾನದಲ್ಲಿ ₹೩.೫ ಕೋಟಿಗಿಂತ ಹೆಚ್ಚು ಕೆಲಸ ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ₹೨೫ ಲಕ್ಷ. ಹೊಂಡ-ಗುಂಡಿ ತುಂಬಲು ಮೀಸಲು ಇಟ್ಟಿದ್ದೇವೆ. ಚೌತಿಯಲ್ಲಿ ಗಣೇಶಮೂರ್ತಿ ಮೆರವಣಿಗೆ ತೆರಳುವ ಮಾರ್ಗಗಳ ಹೊಂಡ ತುಂಬಲು ₹೫ ಲಕ್ಷ ಅನುದಾನ ಮೀಸಲಿಟ್ಟಿದ್ದೇವೆ. ವಿಶೇಷ ಅನುದಾನ ಇಲ್ಲ. ನಗರಸಭೆ ಅನುದಾನ ಬಳಕೆ ಮಾಡಿಕೊಳ್ಳಬೇಕು. ಜಾತ್ರೆಯ ವಿಶೇಷ ಅನುದಾನ ಇನ್ನೂ ಬಂದಿಲ್ಲ ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ: ನಗರೋತ್ಥಾನ ಕಾಮಗಾರಿ ನಡೆಯುತ್ತಿಲ್ಲ.ನಗರೋತ್ಥಾನ ಅನುದಾನದಲ್ಲಿ ₹೬ ಕೋಟಿ ಬಾಕಿ ಇದೆ. ೩೧ ವಾರ್ಡ್‌ನ ಕೆಲಸ ಆಗುವವರಿಗೂ ಬಿಲ್ ಮಾಡಬೇಡಿ.ಮರು ಟೆಂಡರ್ ಕರೆಯುವಂತೆ ನಾವೆಲ್ಲರೂ ಸದಸ್ಯರು ಸೇರಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಚೇರಿ ಎದುರು ಧರಣಿ ಕುಳಿತುಕೊಂಡು ಆಗ್ರಹಿಸೋಣ ಎಂದು ಸದಸ್ಯ ಫ್ರಾನ್ಸಿಸ್ ನರೋನಾ ಹೇಳಿದಾಗ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಉತ್ತರಿಸಿ ಒಂದು ದಿನ ಸಮಯ ನಿಗದಿ ಪಡಿಸುತ್ತೇನೆ. ೩೧ ಸದಸ್ಯರು ಸೇರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳೋಣ ಎಂದರು.