ಹರಪನಹಳ್ಳಿ: ಪಂಚಗಣಾಧೀಶರರ ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವವು ಬುಧವಾರ ಸಂಜೆ ಅಪಾರ ಭಕ್ತರ ಮಧ್ಯೆ ಅತ್ಯಂತ ಶ್ರದ್ದಾ ಭಕ್ತಿಗಳಿಂದ ಜರುಗಿತು.ಊರ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟ ಹಾಗೂ ಹಲವು ದೇವಾನುದೇವತೆಗಳ ಭಾವಚಿತ್ರ ಅಳವಡಿಕೆಯ ಜತೆಗೆ, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪ ಮಾಲೆಯೊಂದಿಗೆ ಅಲಂಕರಿಸಲಾಗಿತ್ತು.ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಬಿರುದಾವಳಿ ಮೂಲಕ ಸಕಲ ವಾದ್ಯತಂಡಗಳ ಭಾಜ-ಭಜಂತ್ರಿಯೊಂದಿಗೆ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ. ವಿಶೇಷ ಪೂಜೆ ಸಲ್ಲಿಸಿ ನಂತರ ದೇಗುಲದಲ್ಲಿನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆ ಹೊರಟಿತು.ಚಿನ್ಮಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೋಣಿಬಸವೇಶ್ವರರ ಪಟ(ಧ್ವಜ)ವನ್ನು ಬಹಿರಂಗ ಹರಾಜು ಮಾಡಲಾಯಿತು. ಇದರಲ್ಲಿ ಅಡವಿ ಸೋಮ್ಲಾಪುರದ ಮರಿಯಪ್ಪ ₹2.85 ಲಕ್ಷಕ್ಕೆ ಪಡೆದುಕೊಂಡರು.ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ರಥಮಂಟಪದಲ್ಲಿ ಪ್ರತಿಷ್ಠಾಪಿಸುವ ಮೂಲಕ ಅರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತಿಯೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಉತ್ತರಾಭಿಮುಖವಾಗಿ ಚಾಲನೆ ನೀಡಲಾಯಿತು.ಹರಕೆ ಹೊತ್ತಿದ್ದ ಭಕ್ತರು, ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಮೆಣಸು ತೂರಿ ಹರಕೆ ಸಮರ್ಪಿಸಿದರು. ಚಿತ್ರದುರ್ಗ ದಾವಣಗೆರೆ, ಬಳ್ಳಾರಿ, ಗದಗ, ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನಾದ್ಯಂತ ಭಕ್ತ ಸಾಗರವೇ ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.ಡಿವೈಎಸ್ಪಿ ವೆಂಕಟಪ್ಪನಾಯಕ, ಸಿಪಿಐ ಸಾಬಯ್ಯ, ಪಿಎಸ್‌ಐ ಶಂಭುಲಿಂಗಹಿರೇಮಠ, ಹಾಗೂ ಪೂಜಾರ ಕೊಟ್ರೇಶ, ಅಂಬಳಿ ಆನಂದ, ಹ್ಯಾಲ್ಯಾದ ಗೋಣೆಪ್ಪ, ವಿ.ವೆಂಕಟೇಶ, ಪೂಜಾರ ಬಸವರಾಜ, ಕೊಟ್ರೇಶ, ಅರ್ಚಕರಾದ ಸಿದ್ದಪ್ಪ, ಹಾಲೇಶ, ಶರಣಪ್ಪ ಮತ್ತು ಗ್ರಾಪಂ ಸದಸ್ಯರು ಇದ್ದರು.
ವೈಭವದ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ
ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಬಿರುದಾವಳಿ ಮೂಲಕ ಸಕಲ ವಾದ್ಯತಂಡಗಳ ಭಾಜ-ಭಜಂತ್ರಿಯೊಂದಿಗೆ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.