ರೇಣುಕಾಯಲ್ಲಮ್ಮ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಕೆ. ಗಣೇಶ್ ನೇತೃತ್ವದಲ್ಲಿ ರಾತ್ರಿ 9 ಗಂಟೆಗೆ ನಗರದ ಟೇಕಲ್ ರಸ್ತೆಯ ಗೋಪಾಲಗೌಡರ ನಿವಾಸದ ಆವರಣದಲ್ಲಿ ಗಂಗಾಪೂಜೆ ಮುಗಿಸಿದ ನಂತರ ಹಸಿ ಕರಗವನ್ನು ಕರಗದ ಪೂಜಾರಿ ಬಿ.ವಿ. ಮಂಜುನಾಥ್, ಸಂತೋಷ್, ಕಿರಣ್ ಜತೆಗೂಡಿ, ಕೈಯಲ್ಲೇ ಹೊತ್ತು ತರುತ್ತಿದ್ದಂತೆ ವೀರಕುಮಾರರ ಗೋವಿಂದ, ಗೋವಿಂದ ಘೋಷಣೆ ಮುಗಿಲು ಮುಟ್ಟಿತ್ತು.
ಕನ್ನಡಪ್ರಭ ವಾರ್ತೆ ಕೋಲಾರನಗರದ ಪಿಸಿ ಬಡಾವಣೆಯ ರೇಣುಕಾಯಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವ ಶನಿವಾರ ರಾತ್ರಿ ವೈಭವದಿಂದ ನಡೆದಿದ್ದು, ಮೂವರು ಕರಗವನ್ನು ತಟ್ಟೆಯೊಂದರಲ್ಲಿಟ್ಟು ಕೈಯಲ್ಲೇ ಕುಣಿಸುವುದರ ವಿಶಿಷ್ಟತೆ ಎಲ್ಲರ ಮನಸೂರೆಗೊಂಡಿತಲ್ಲದೇ ಸಹಸ್ರಾರು ಮಂದಿ ವೀಕ್ಷಿಸಿದರು.ರೇಣುಕಾಯಲ್ಲಮ್ಮ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಕೆ. ಗಣೇಶ್ ನೇತೃತ್ವದಲ್ಲಿ ರಾತ್ರಿ 9 ಗಂಟೆಗೆ ನಗರದ ಟೇಕಲ್ ರಸ್ತೆಯ ಗೋಪಾಲಗೌಡರ ನಿವಾಸದ ಆವರಣದಲ್ಲಿ ಗಂಗಾಪೂಜೆ ಮುಗಿಸಿದ ನಂತರ ಹಸಿ ಕರಗವನ್ನು ಕರಗದ ಪೂಜಾರಿ ಬಿ.ವಿ. ಮಂಜುನಾಥ್, ಸಂತೋಷ್, ಕಿರಣ್ ಜತೆಗೂಡಿ, ಕೈಯಲ್ಲೇ ಹೊತ್ತು ತರುತ್ತಿದ್ದಂತೆ ವೀರಕುಮಾರರ ಗೋವಿಂದ, ಗೋವಿಂದ ಘೋಷಣೆ ಮುಗಿಲು ಮುಟ್ಟಿತ್ತು. ಹಸಿ ಕರಗವನ್ನು ಕರಗದ ಪೂಜಾರಿ ಮಂಜುನಾಥ್ ಸೇರಿದಂತೆ ಮೂವರು ಕೈಗಳಲ್ಲಿ ಕುಣಿಸುತ್ತಾ ಬದಲಿಸುತ್ತಾ ಸಾಗುತ್ತಿದ್ದು, ನೋಡುಗರಲ್ಲಿ ಭಕ್ತಿಯ ಭಾವನೆ ಇಮ್ಮಡಿಗೊಳ್ಳಲು ಕಾರಣವಾಗಿತ್ತು.ಹಸಿ ಕರಗಕ್ಕೆ ಮೊದಲು ಗೋಪಾಲಗೌಡರ ಕುಟುಂಬದಿಂದ ಪೂಜೆ ಸಲ್ಲಿಸಿದ ನಂತರ ನೇರವಾಗಿ ನಗರದ ಚೌಡೇಶ್ವರಿ ಬಡಾವಣೆಯ ಚೌಡೇಶ್ವರಿ ದೇವಾಲಯಕ್ಕೆ ಕರಗ ಆಗಮಿಸಿ ಅಲ್ಲಿ ಕರಗ ಕೈಯಲ್ಲಿಡಿದ ಮೂವರ ನೃತ್ಯ ಮನಸೂರೆಗೊಂಡಿತು.ನಂತರ ಪಿಸಿಹಳ್ಳಿ ಮೂಲಕ ಜಯನಗರ ೭ನೇ ಕ್ರಾಸ್‌ನಲ್ಲಿನ ಸಫಲಮ್ಮ ದೇವಾಲಯಕ್ಕೆ ಆಗಮಿಸಿ ಅಲ್ಲಿಯೂ ಪೂಜೆ, ನೃತ್ಯ ಮುಗಿದ ನಂತರ ಹಾರೋಹಳ್ಳಿ ಬಡಾವಣೆಯಲ್ಲಿ ಹಸಿಕರಗ ಸಂಚರಿಸಿ ನಂತರ ನಗರದ ಪಿಸಿ ಬಡಾವಣೆಯ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಹಾಗೂ ಹಾರೋಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿತು.ನಂತರ ರೇಣುಕಾ ಯಲ್ಲಮ್ಮ ದೇವಾಲಯದ ಮುಂದೆ ನಡೆದ ಕರಗದ ನೃತ್ಯ ವೀಕ್ಷಿಸಲು ಸಾವಿರಾರು ಮಂದಿ ಪಾಲ್ಗೊಂಡಿದ್ದು, ಇದಾದ ನಂತರ ಹಸಿ ಕರಗ ದೇವಾಲಯ ಪ್ರವೇಶ ಮಾಡಿತು. ಈ ಬಾರಿಯ ವಿಶೇಷವೆಂದರೆ ಹಸಿಕರಗವನ್ನು ದೇವಾಲಯದ ಮುಂದೇ ಕರಗದ ಪೂಜಾರಿ ಬಿ.ವಿ.ಮಂಜುನಾಥ್ ಒಬ್ಬರೇ ಒಂದು ಕೈಯಲ್ಲಿ ತಬ್ಬಿ ಹಿಡಿದು ನೃತ್ಯ ನಡೆಸಿದ್ದು ಅಮೋಘವಾಗಿತ್ತು.ಇಂದು ಹೂವಿನ ಕರಗ: ಹೂವಿನ ಕರಗ ಮಹೋತ್ಸವ ಮೇ ೧ ರ ರಾತ್ರಿ ೮ ಗಂಟೆಗೆ ನಡೆಯಲಿದೆ. ಮೇ ೨ರ ಮಧ್ಯಾಹ್ನ ಅಗ್ನಿಕುಂಡ ಪ್ರವೇಶ ನಡೆಯಲಿದೆ.