ಸಾರಾಂಶ
- ಜೀವನ ಸಂಗಾತಿ ಎಸ್ಸೆಸ್ಸೆಂ ನನ್ನ ರೋಲ್ ಮಾಡೆಲ್ ಎಂದ ಸಂಸದೆ । ಮುಖಂಡರಿಂದ ಸಚಿವರ ಗುಣಗಾನ
- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಮಗಳನ್ನು, ದಾವಣಗೆರೆ ಸೊಸೆಯನ್ನು ಇಡೀ ಲೋಕಸಭಾ ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದು, ತಮ್ಮ ಜೀವನ ಸಂಗಾತಿ, ತಮ್ಮ ರೋಲ್ ಮಾಡೆಲ್ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಮಾವನವರಾದ ಡಾ.ಶಾಮನೂರು ಶಿವಶಂಕರಪ್ಪ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಜನ್ಮದಿನ ಹಾಗೂ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಹಳ್ಳಿ ಹಳ್ಳಿಯಲ್ಲೂ ಸಾಕಷ್ಟು ಜನ ಕೆಲಸ ಮಾಡಿದ್ದೀರಿ, ನಿಮ್ಮೆಲ್ಲರ ಪರಿಶ್ರಮದಿಂದ 25 ವರ್ಷದ ನಂತರ ಕಾಂಗ್ರೆಸ್ ಬಾವುಟ ಲೋಕಸಭಾ ಕ್ಷೇತ್ರದಲ್ಲಿ ಹಾರಿಸಿದ್ದೀರಿ ಎಂದು ಶ್ಲಾಘಿಸಿದರು.ಪಂಚಾಯಿತಿ ಚುನಾವಣೆಗಳಿಗೆ ಸಜ್ಜಾಗಿ:
ಮುಂಬರುವ ಗ್ರಾಪಂ, ತಾಪಂ, ಜಿಪಂ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ನಗರ ಪಾಲಿಕೆ, ವಿಧಾನಸಭೆ ಚುನಾವಣೆಗಳಿಗೆ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಮುಂದಿನ ಲೋಕಸಭೆ ಚುನಾವಣೆಗೂ ಇದೇ ರೀತಿ ಉತ್ಸಾಹ, ಬೆಂಬಲ ಇರಲಿ. ಚುನಾವಣೆಗೆ ಒಂದೂವರೆ ತಿಂಗಳಿದ್ದಾಗಿನಿಂದಲೇ ಹಳ್ಳಿ ಹಳ್ಳಿಗೆ ಹೋಗಿ ಮತ ಕೇಳಿದ್ದೆವು. ದೇವಸ್ಥಾನ, ಸಮುದಾಯ ಭನ, ದಾಸೋಹ ಹೀಗೆ ಹೋದಲ್ಲೆಲ್ಲಾ ಇದು ನಿಮ್ಮ ಮಾವನವರ ಸೇವೆ, ಕೊಡುಗೆ ಅಂತಾ ಗ್ರಾಮಸ್ಥರು ಹೇಳಿದಾಗ ಖುಷಿಯಾಗುತ್ತಿತ್ತು ಎಂದ ಅವರು, ಗಾಳಿ, ನೀರು, ಬೆಳಕು ಎಲ್ಲಾ ಕಡೆ ಪಸರಿಸುವಂತೆ ಮಾವ ಶಾಮನೂರು ಶಿವಶಂಕರಪ್ಪನವರ ಸೇವೆ ಹರಡಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಿಮ್ಮೆಲ್ಲರ ಆಶೀರ್ವಾದ, ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.ಕುಂದುವಾಡ ಕೆರೆ, ವೃತ್ತಗಳು, 20 ಸಾವಿರ ಆಶ್ರಯ ಮನೆ, ಏಷ್ಯಾದ ನಂಬರ್ ಒನ್ ಗಾಜಿನ ಮನೆ, ಸಿಸಿ ರಸ್ತೆ, ನಗರ, ಗ್ರಾಮೀಣ ಸಿಸಿ ರಸ್ತೆ ಹೀಗೆ ಭೂಪಟದಲ್ಲಿ ಎದ್ದು ಕಾಣುವಂತೆ ಅಭಿವೃದ್ಧಿ ಕಾರ್ಯಗಳನ್ನು ಎಸ್.ಎಸ್. ಮಲ್ಲಿಕಾರ್ಜುನ ಮಾಡಿದ್ದಾರೆ. ಕುಂದುವಾಡ ಕೆರೆ ಸೇರಿದಂತೆ ನೀರಿನ ವಿಚಾರದಲ್ಲಿ ಪರಿಪೂರ್ಣ ಕೆಲಸ ಮಾಡುತ್ತಾರೆ ಎಂದು ಸಂಸದರು ತಿಳಿಸಿದರು.
ಮೆಕ್ಕೆಜೋಳ, ಅಡಕೆ ಬೆಳೆಗಾರರಿದ್ದು, ಎಲ್ಲ ಬೆಳೆಗಾರರ ಹಿತಕಾಯಲು ಬದ್ಧರಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಬೇಕಾಗಿದೆ. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಾಧಾನ್ಯತೆ ವಹಿಸಲಾಗುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೋತ್ಸಾಹಿಸಬೇಕಿದೆ. 20 ಸಾವಿರದಷ್ಟು ಉಚಿತ ಡಯಾಲಿಸಿಸ್ ಮಾಡಿಸಿದ್ದು, 17 ಡಯಾಲಿಸಿಸ್ ಯಂತ್ರ ಉಚಿತವಾಗಿ ನೀಡಿದ್ದೇವೆ. ಉಚಿತ ಹೆರಿಗೆ, ಶಸ್ರ್ರ ಚಿಕಿತ್ಸೆ ನೆರವಾಗುತ್ತಿದ್ದೇವೆ ಎಂದ ಅವರು, ಇಡೀ ಲೋಕಸಭಾ ಕ್ಷೇತ್ರಕ್ಕೆ ಆರೋಗ್ಯ ಸೇವೆ, ಶಿಬಿರ ವಿಸ್ತರಿಸುತ್ತೇವೆ ಎಂದು ಸಂಸದರು ಘೋಷಿಸಿದರು.ಎಸ್ಸೆಸ್ ಮಲ್ಲಿಕಾರ್ಜುನ ಜನ್ಮದಿನಕ್ಕಾಗಿ 5555 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಇತ್ತು. 3 ಸಾವಿರಕ್ಕೂ ಅಧಿಕ ಜನ ರಕ್ತದಾನ ಮಾಡಿದ್ದಾರೆ. ಈ ವರ್ಷ ಪೂರ್ತಿ ರಕ್ತದಾನ ಶಿಬಿರ ನಡೆಯಲಿದೆ. ರಾಜ್ಯದ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸುವೆ. ಕಳೆದ ಸಲ ಕಾಂಗ್ರೆಸ್ಸಿನ ಒಬ್ಬ ಎಂಪಿ ಇದ್ದರು. ಈಗ ನಾವು 9 ಸಂಸದರಿದ್ದೇವೆ. ಮಲತಾಯಿ ಧೋರಣೆ, ತೆರಿಗೆ ಹಂಚಿಕೆಯಲ್ಲಿ, ಕೇಂದ್ರದ ಅನುದಾನ ನೀಡುವಲ್ಲಿ, ಐಐಟಿ ಬಗ್ಗೆ, ನಗರ ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ನಾವೂ ಅನುದಾನ ಕೇಳುತ್ತಿದ್ದೇವೆ. ಸಿಎಂ. ಡಿಸಿಎಂ ನೇತೃತ್ವದಲ್ಲಿ ಪ್ರಧಾನಿ, ಹಣಕಾಸು ಸಚಿವರನ್ನೂ ಭೇಟಿ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
- - -(ಸಂಸದೆ ಡಾ.ಪ್ರಭಾ)