ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಪರಿಸರ ಕಾಳಜಿಯೊಂದಿಗೆ ಕೋಟಿ ವೃಕ್ಷ ಅಭಿಯಾನದ ಮೂಲಕ 0.17ರಷ್ಟಿದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ಶೇ.2ರಷ್ಟು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.10 ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಕೈಗಾರಿಕೆ ಇಲಾಖೆ ವ್ಯಾಪ್ತಿಯ ಕೆಎಸ್‌ಡಿಎಲ್- ಸಿಎಸ್‌ಆರ್ ಅನುದಾನದಲ್ಲಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 20 ಜನ ಸಿಬ್ಬಂದಿಗಳಿಗೆ ಕಿಟ್ ವಿತರಿಸಿ ಮಾತನಾಡಿದರು. ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ವಿಜಯಪುರ ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 2016ರಲ್ಲಿ ಆರಂಭಿಸಿದ ಕೋಟಿ ವೃಕ್ಷ ಅಭಿಯಾನವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಸಸಿ-ಗಿಡಗಳನ್ನು ಬೆಳೆಸಿ ಸಂರಕ್ಷಿಸಲಾ ಗುತ್ತಿದೆ. ಈ ಅಭಿಯಾನ ನಿರಂತರವಾಗಿ ಸಾಗಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಅರಣ್ಯ ಪ್ರದೇಶ ಶೇ.10 ರಿಂದ 15 ರಷ್ಟಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಪರಿಸರ ರಕ್ಷಣೆ, ಗಿಡ-ಸಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆಯು ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಮೈಸೂರು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಕೈಗಾರಿಕೋದ್ಯಮಿ ಎಸ್.ಜಿ.ಶಾಸ್ತಿ ಅವರ ದೂರದೃಷ್ಟಿಯಿಂದ 1916ರಲ್ಲಿ ಸ್ಥಾಪನೆಯಾಗಿ ಶತಮಾನ ಇತಿಹಾಸ ಹೊಂದಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿನ ಕೆ.ಎಸ್.ಡಿ.ಎಲ್ ಸಂಸ್ಥೆಯಿಂದ ಸಿ.ಎಸ್.ಆರ್. ಅನುದಾನದಡಿ ಉಪಯುಕ್ತ ಪರಿಕರಗಳಿರುವ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಅರಣ್ಯ ಇಲಾಖೆಯ 10 ಸಾವಿರ ಸಿಬ್ಬಂದಿಗಳಿಗೆ ಕಿಟ್‌ಗಳನ್ನು ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಬೆಳಗಾವಿ ವಿಭಾಗ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಮುಂಚೂಣಿ ಕಾರ್ಯನಿರತ ಸಿಬ್ಬಂದಿಗಳಾದ ಅರಣ್ಯ ರಕ್ಷಕರು, ವೀಕ್ಷಕರು ಮತ್ತು ವಾಹನ ಚಾಲಕರಿಗೆ ಉತ್ತಮ ಗುಣಮಟ್ಟದ ಶೂ, ಜರ್ಕಿನ್, ಬ್ಯಾಗ್ ಹಾಗೂ ನೀರಿನ ಬಾಟಲಿ ಇರುವ ವಿಶೇಷ ಕಿಟ್ ನೀಡಲಾಯಿತು ಹಾಗೂ ಬಿಲ್ ವಿದ್ಯೆ (ಆರ್ಚರಿ) ಕ್ರೀಡಾಪಟು ಶಹಾಪುರದ ದೇವಮ್ಮ ಜಂಗಿನಾಳಗೆ ಬಿಲ್ ವಿದ್ಯೆ ಪರಿಕರವನ್ನು ವಿತರಿಸಲಾಯಿತು. ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿದರು. ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ.ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಾಂತೇಶ ಬಿರಾದಾರ ವಂದಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ, ಬೆಳಗಾವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ವನ್ಯ ಜೀವಿ ಮಂಡಳಿ ಸದಸ್ಯರಾದ ಧ್ರುವ ಪಾಟೀಲ, ವಿಜಯಪುರ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ಕೆಬಿಜೆಎನ್‌ಎಲ್ ಉಪ ಸಂರಕ್ಷಣಾಧಿಕಾರಿ ಎನ್.ಕೆ.ಬಾಗಾಯತ್ ಸೇರಿ ಅರಣ್ಯ ಇಲಾಖೆ ಹಾಗೂ ಕೆಎಸ್‌ಡಿಎಲ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))