ಉಗಾರ ಬಿ.ಕೆ ಪಿಕೆಪಿಎಸ್‌ಗೆ 15.61 ಲಕ್ಷ ಲಾಭ

| Published : Sep 21 2025, 02:04 AM IST

ಸಾರಾಂಶ

ಆಡಳಿತ ಮಂಡಳಿಯವರ ಪರಿಶ್ರಮ, ಬ್ಯಾಂಕ್‌ ಸಿಬ್ಬಂದಿ ಕರ್ತವ್ಯ ನಿಷ್ಠೆ, ಸಾಲಗಾರರ ಪ್ರಾಮಾಣಿಕತೆಯಿಂದ ಬ್ಯಾಂಕ್‌ ಪ್ರಗತಿಯಾಗಲು ಸಾಧ್ಯ

ಕನ್ನಡಪ್ರಭ ವಾರ್ತೆ ಕಾಗವಾಡ

ತಾಲೂಕಿನ ಉಗಾರ ಬಿ.ಕೆ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 2024-25ನೇ ಸಾಲಿನಲ್ಲಿ ₹15.61 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶೀತಲಗೌಡ ಪಾಟೀಲ ತಿಳಿಸಿದರು.

ಸಂಘದ 105ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿಯವರ ಪರಿಶ್ರಮ, ಬ್ಯಾಂಕ್‌ ಸಿಬ್ಬಂದಿ ಕರ್ತವ್ಯ ನಿಷ್ಠೆ, ಸಾಲಗಾರರ ಪ್ರಾಮಾಣಿಕತೆಯಿಂದ ಬ್ಯಾಂಕ್‌ ಪ್ರಗತಿಯಾಗಲು ಸಾಧ್ಯ. ನಮ್ಮ ಗ್ರಾಮದ ಜಮೀನು ಕಡಿಮೆ ಇದ್ದರೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಲಕ್ಷ್ಮಣ ಸವದಿಯವರು ಈ ವರ್ಷ ₹2.30 ಕೋಟಿ ಹೆಚ್ಚಿನ ಸಾಲ ನೀಡಿದ್ದು ಅವರಿಗೆ ಈ ಸಭೆಯ ಮೂಲಕ ಧನ್ಯವಾದ ಸಲ್ಲಿಸಿದರು.

ಸಂಘವು 1894 ಸದಸ್ಯರನ್ನು ಹೊಂದಿದ್ದು, ₹1.22 ಕೋಟಿ ಶೇರು ಬಂಡವಾಳ ಹೊಂದಿದೆ. ₹12.86 ಕೋಟಿ ದುಡಿಯುವ ಬಂಡವಾಳವಿದೆ. ₹11.66 ಕೋಟಿ ಬೆಳೆಸಾಲ ವಿತರಿಸಲಾಗಿದೆ. ₹33.70 ಲಕ್ಷ ಠೇವಣಿ ಹೊಂದಿದೆ. ಪ್ರಸಕ್ತ ವರ್ಷ ₹15.61 ಲಕ್ಷ ನಿವ್ವಳ ಲಾಭ ಗಳಿಸಿ ಶೇ.6ರಷ್ಟು ಲಾಭಾಂಶ ಘೋಷಿಸಲಾಗಿದೆ ಎಂದರು. ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು ಕೃಷಿ ಚಟುವಟಿಕೆ ಜೊತೆಗೆ ಗುಡಿ ಕೈಗಾರಿಕೆ ಹಾಗೂ ಹೈನುಗಾರಿಕೆ ಸೇರಿದಂತೆ ಮತ್ತಿತರ ಲಾಭ ತರುವ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸಿದಾಗ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ತಿಳಿಸಿದರು.

ಈ ವೇಳೆ ಮುಖ್ಯ ಕಾರ್ಯನಿರ್ವಾಹಕ ಬಾಹುಬಲಿ ಚಿಂಚವಾಡೆ ಸಂಘದ ವರದಿ ವಾಚಿಸಿದರು. ಉಪಾಧ್ಯಕ್ಷ ಪದ್ಮಕುಮಾರ ಆಳಪ್ಪನವರ, ಆಡಳಿತ ಮಂಡಳಿ ಸದಸ್ಯರಾದ ಪ್ರಶಾಂತ ಕುಸನಾಳೆ, ಮಲ್ಲಪ್ಪ ಕುರಬರ, ಸಾಗರ ಪುಜಾರಿ, ಸದಾಶಿವ ನಾಯಿಕ, ಸಂಗೀತಾ ಹೊಸುರೆ, ಪದ್ಮಾ ಖಂಡೇ ರಾಜುರೆ, ಪ್ರವೀಣ ಪಾಟೀಲ, ರಾವಸಾಬ ಗಿಡ್ಡಸಕ್ಕನವರ, ಬಾಳಾಸಾಬ ಹವಲೆ, ಆಮಂತ್ರಿತ ಸದಸ್ಯರಾದ ವೃಷಭ ಪಾಟೀಲ, ದೀಪಕ ಪಾಟೀಲ, ಪ್ರಮೋದ ಪಾಟೀಲ, ಬಾಳಾಸಾಬ ಚೌಗಲಾ ಸೇರಿ ಸಂಘದ ಸರ್ವ ಸದಸ್ಯರಿದ್ದರು. ಬಾಹುಬಲಿ ಚಿಂಚವಾಡೆ ಸ್ವಾಗತಿಸಿದರು.

ರಾಸಾಯನಿಕ ಗೊಬ್ಬರದ ಜೊತೆಗೆ ಕಂಪನಿಗಳು ಜಿಂಕ್ ಕೊಡುತ್ತಿದ್ದಾರೆ. ಇದರ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರು ಜಿಂಕ್‌ ಪದ್ಧತಿ ಬಂದ್ ಮಾಡಿಲ್ಲ. ಎಲ್ಲರೂ ಕೂಡಿ ಕೃಷಿ ಸಚಿವರ ಗಮನಕ್ಕೆ ತಂದು ಜಿಂಕ್‌ ಬಂದ್ ಮಾಡಿ ನೇರವಾಗಿ ರೈತರು ಬೇಡುವ ರಸಗೊಬ್ಬರ ಮಾತ್ರ ಪೂರೈಸುವಂತೆ ಕ್ರಮಕೈಗೊಳ್ಳಿ. ಶೀತಲಗೌಡ ಪಾಟೀಲ ಅಧ್ಯಕ್ಷರು, ಪಿಕೆಪಿಎಸ್‌ ಉಗಾರ ಬಿ.ಕೆ