ಕನ್ನಡಪ್ರಭ ವಾರ್ತೆ ಬೆಳಗಾವಿ 2014ರಿಂದ ಭಾರತ ಅರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಅನೇಕ ಸುಧಾರಣಾ ಕ್ರಮಗಳು ದೇಶದ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
2014ರಿಂದ ಭಾರತ ಅರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಅನೇಕ ಸುಧಾರಣಾ ಕ್ರಮಗಳು ದೇಶದ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2047ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷ ಪೂರ್ಣಗೊಳ್ಳಲಿದೆ. ಅದಕ್ಕೆ ತಕ್ಕಂತೆ ವಿಕಸಿತ ಭಾರತ ನಿರ್ಮಾಣವೇ ಕೇಂದ್ರ ಸರ್ಕಾರದ ಗುರಿಯಾಗಿದೆ. ಗ್ರಾಮೀಣ ಭಾಗದ ಸುಧಾರಣೆಯೇ ದೇಶದ ಸುಧಾರಣೆ ಎಂಬುದು ಗಾಂಧೀಜಿಯವರ ಕನಸಾಗಿದೆ. ಅದನ್ನೇ ಮೋದಿ ಸರ್ಕಾರ ಸಾಕಾರಗೊಳಿಸುತ್ತಿದೆ ಎಂದು ಜೊಲ್ಲೆ ಹೇಳಿದರು. ರೈತ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ಬಿಲ್ಲುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.
ಹಿಂದೆ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನರೇಗಾ ಎಂದು ಕರೆಯಲಾಗುತ್ತಿದ್ದ ಯೋಜನೆಯನ್ನು ಇದೀಗ ವಿಕಸಿತ ಭಾರತ ಗ್ಯಾರಂಟಿ ಯೋಜನೆ ರೂಪದಲ್ಲಿ ಬಲಿಷ್ಠ ಆಧಾರದೊಂದಿಗೆ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೊದಲು 100 ದಿನ ಉದ್ಯೋಗ ನೀಡಲಾಗುತ್ತಿತ್ತು. ಈಗ ಅದಕ್ಕೆ ಹೆಚ್ಚುವರಿ 25 ದಿನಗಳನ್ನು ಸೇರಿಸಲಾಗಿದೆ. ದಿನಗೂಲಿ ಮೊತ್ತವನ್ನು ಹಿಂದಿನಿಗಿಂತ ₹ 375ಗೆ ಹೆಚ್ಚಿಸಲಾಗಿದೆ. ಮೊದಲು 15 ದಿನಕ್ಕೊಮ್ಮೆ ಪಾವತಿ ಮಾಡುತ್ತೇವೆ ಎಂದು ಹೇಳಿ ಮೂರು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿತ್ತು. ಆದರೆ ಈಗ ತಂತ್ರಜ್ಞಾನ ಬಳಸಿ 10 ದಿನಗಳೊಳಗೆ ವೇತನವನ್ನು ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ತಡೆ ನೀಡುವ ಉದ್ದೇಶದಿಂದ ಹಲವು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಮಹಿಳಾ ಪ್ರಾಧಾನ್ಯತೆ, ಒಬ್ಬಂಟಿ ಮಹಿಳೆಯರು, ಅಂಗವಿಕಲರು ಹಾಗೂ ತೃತೀಯ ಲಿಂಗಿಗಳಿಗೆ ವಿಶೇಷ ಅವಕಾಶ ನೀಡಲಾಗಿದೆ ಎಂದು ಹೇಳಿದರು.2014ರ ಮೊದಲು ಉದ್ಯೋಗ ಖಾತ್ರಿ ಯೋಜನೆಗೆ ₹ 8.53 ಲಕ್ಷ ಕೋಟಿ ಬಿಡುಗಡೆ ಮಾಡಲಾಗುತ್ತಿತ್ತು. ಈಗ₹ 8.62 ಲಕ್ಷ ಕೋಟಿ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಕಾಮಗಾರಿಗಳು ನಡೆಯುತ್ತಿವೆ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ 2011ರಲ್ಲಿ ₹ 47 ಸಾವಿರ ಕೋಟಿ ಬಜೆಟ್ ನಿಗದಿಪಡಿಸಿ, ಬೇಡಿಕೆ ಇದ್ದರೂ ₹ 33 ಸಾವಿರ ಕೋಟಿಗೆ ಇಳಿಕೆ ಮಾಡಲಾಗಿತ್ತು. ಈ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಿಎಜಿಐ ವರದಿ ಮಾಡಿತ್ತು. ನಕಲಿ ಜಾಬ್ ಕಾರ್ಡ್‌ಗಳು, ಗುತ್ತಿಗೆದಾರರ ಹಾವಳಿ ಹೆಚ್ಚಾಗಿತ್ತು ಎಂದು ಟೀಕಿಸಿದರು.ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆರೋಪಗಳು ಆಧಾರ ರಹಿತವಾಗಿವೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಂ.ಬಿ.ಜಿರಲಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ನಗರ ಸೇವಕ ಹನುಮಂತ ಕೊಂಗಾಲಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.------
ಕೋಟ್‌ಈಗ ಯೋಜನೆಯನ್ನು ಸಂಪೂರ್ಣ ಪಾರದರ್ಶಕವಾಗಿ ಜಾರಿಗೆ ತರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ತಡೆಯುವ ಉದ್ದೇಶದಿಂದ ಮಹಿಳೆಯರು ಹಾಗೂ ಯುವಕರನ್ನು ಯೋಜನೆಗಳಲ್ಲಿ ಸಕ್ರಿಯವಾಗಿ ಒಳಗೊಳ್ಳಲಾಗಿದೆ. ರೈತರು ನೀರಾವರಿ ಯೋಜನೆಗಳನ್ನು ರೂಪಿಸಿಕೊಳ್ಳಲು ಈ ಯೋಜನೆ ಸಹಾಯಕವಾಗಲಿದೆ.ಶಶಿಕಲಾ ಜೊಲ್ಲೆ, ನಿಪ್ಪಾಣಿ ಶಾಸಕಿ