ಗುತ್ತಲ: ಜೀವನ ಸಮೃದ್ಧಿಗೆ ಮತ್ತು ಶಾಂತಿಗೆ ದೈವಿ ಗುಣಗಳ ಅವಶ್ಯಕತೆಯಿದೆ. ದೈವಿ ಗುಣಗಳು ಪ್ರಾಬಲ್ಯಗೊಂಡರೆ ಅಸುರಿ ಗುಣಗಳು ನಾಶವಾಗುತ್ತವೆ. ಸಮಾಜದಲ್ಲಿ ಸಂಘಟನೆಗಳು ನಡೆಯಲಿ ಆದರೆ ಸಂಘರ್ಷಗಳು ನಡೆಯಬಾರದು. ಸೌಹಾರ್ದಯುತ ಸಮಾಜ ನಿರ್ಮಾಣವೇ ಪಂಚಪೀಠಗಳ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸಮೀಪದ ನೆಗಳೂರಿನಲ್ಲಿ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ನೂತನ ರಥದ ಲೋಕಾರ್ಪಣೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ನೆಗಳೂರು ಗ್ರಾಮದ ಚಾರಿತ್ರಿಕ ಇತಿಹಾಸದಲ್ಲಿ ಇಂದಿನ ದಿನ ಅವಿಸ್ಮರಣೀಯ. ಲಿಂ. ಶಿವಾನಂದ ಶಿವಾಚಾರ್ಯರ ಬಹು ದಿನದ ಸಂಕಲ್ಪ ಇಂದು ಸಾಕಾರಗೊಂಡಿದೆ. ಇಂದಿನ ಪಟ್ಟಾಧ್ಯಕ್ಷರಾದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳ ನಿರಂತರ ಪರಿಶ್ರಮ ಮತ್ತು ಪ್ರಯತ್ನದಿಂದಾಗಿ ಈ ಮಹಾಕಾರ್ಯ ಸರ್ವಾಂಗ ಸುಂದರವಾಗಿ ನಡೆಯುತ್ತಿರುವುದು ಎಲ್ಲರಿಗೂ ಹರುಷ ತಂದಿದೆ ಎಂದು ಭಾವಿಸುತ್ತೇವೆ. ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾದದ್ದು. ಜಗದ್ಗುರು ರೇಣುಕಾದಿ ಪಂಚ ಆಚಾರ್ಯರಿಂದ ಸ್ಥಾಪಿತಗೊಂಡ ಪಂಚ ಪೀಠಗಳು ಯಾವಾಗಲೂ ಧರ್ಮ ಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಕಾರ್ಯ ಮಾಡುತ್ತಾ ಬಂದಿವೆ. ಜಾತಿ,ಮತ, ಪಂಥಗಳ ಗಡಿ ಮೀರಿ ಭಾವೈಕ್ಯತೆಗೆ ಸಾಮರಸ್ಯ ಬದುಕಿಗೆ ಮಹತ್ವ ಕೊಟ್ಟು ಮಾರ್ಗದರ್ಶನ ನೀಡುತ್ತಿವೆ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಮಾತನಾಡಿ, ವಿದ್ಯಾ ಬುದ್ಧಿ ಕೊಟ್ಟವನು ಭಗವಂತ. ಹೃದಯ ಹೊಟ್ಟೆ ಕೊಟ್ಟವನು ಭಗವಂತ. ಅನ್ನ, ನೀರು, ಗಾಳಿ, ಬೆಳಕು ಕೊಟ್ಟವನು ಪರಮಾತ್ಮ. ಅರಿವು ಆಚರಣೆಗೆ ಗುರು ಬೋಧಾಮೃತ ಅವಶ್ಯಕವೆಂದರು. ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರು ಮಾತನಾಡಿ, ಭೌತಿಕ ಸಿರಿ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಜ್ಞಾನ ಸಂಪತ್ತು ನಿಜವಾದ ಸಂಪತ್ತು. ಜನ ಆದರ್ಶಗಳನ್ನು ಮರೆತು ಅಶಾಂತಿ ಬದುಕಿಗೆ ಕಾರಣರಾಗುತ್ತಿದ್ದಾರೆ. ಅಧಿಕಾರ ಅಂತಸ್ತು ದೊರೆತಾಗ ವಿನೀತರಾಗಿ ಬಾಳಿ ಬದುಕಬೇಕು. ನೆಗಳೂರಿನ ಭಕ್ತರು ಅತ್ಯಂತ ಶ್ರದ್ಧೆಯಿಂದ ಮಾಡಿದ ಕಾರ್ಯ ತಮಗೆ ಅತೀವ ಆನಂದ ತಂದಿದೆ ಎಂದರು. ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರು ಮಾತನಾಡಿ, ಭಗವಂತನನ್ನು ಬಿಟ್ಟು ಭಕ್ತನಿರಲು ಸಾಧ್ಯವಾಗದು. ಅನುಭವ ಆದರ್ಶವಿಲ್ಲದ ಬುದ್ಧಿಗೆ ಬೆಲೆ ನೆಮ್ಮದಿ ಸಿಗುವುದಿಲ್ಲ. ಕಲ್ಲಿನಲ್ಲಿಯೇ ಕನಕ ಉದಕ ಹುಟ್ಟಿ ಬರುವುದಂತೂ ಸತ್ಯ. ಕಡಲ ಬಿಟ್ಟು ಅಲೆ ಹೇಗಿಲ್ಲವೋ ಹಾಗೆಯೇ ಭಕ್ತನನ್ನು ಬಿಟ್ಟು ಭಗವಂತನಿಲ್ಲ. ಪರಶಿವನ ಸ್ವರೂಪದಲ್ಲಿ ಪಂಚಾಚಾರ್ಯರನ್ನು ತಾವು ಕಂಡು ಸಂತೋಷಪಡುತ್ತಿರುವುದು ತಮ್ಮೆಲ್ಲರಲ್ಲಿರುವ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದರು. ಕಾಶಿ ನೂತನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರು ಮಾತನಾಡಿ, ಪ್ರತಿಯೊಬ್ಬರಲ್ಲಿ ದೇವರನ್ನು ಅರಿಯುವ ತಿಳಿಯುವ ಅದ್ಭುತ ಶಕ್ತಿಯಿದೆ. ಆದರೆ ಚಂಚಲವಾದ ಮನಸ್ಸನ್ನು ಭಗವಂತನಲ್ಲಿಟ್ಟು ನಡೆದುಕೊಂಡಾಗ ಮಾತ್ರ ಸಾಧ್ಯ. ಮರೆಯುವುದು ಮನುಷ್ಯನ ಸಹಜ ಗುಣ. ನೆನಪು ಮಾಡಿಕೊಡುವುದು ಗುರು ಧರ್ಮ. ನೆಗಳೂರಿನ ಭಕ್ತರು ಮಾಡಿದ ಕಾರ್ಯ ಬಹು ದೊಡ್ಡದೆಂದು ಸಂತಸಪಟ್ಟರು.ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ‘ಶ್ರೀ ಗುರುಶಾಂತೇಶ್ವರ ಜೀವನ ದರ್ಶನ’ ಕೃತಿ ಬಿಡುಗಡೆ ಮಾಡಿದರು. ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಹಲವಾರು ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಂಭಮದಿಂದ ಜರುಗಿದ ಅಡ್ಡಪಲ್ಲಕ್ಕಿ ಉತ್ಸವ: ಸಮಾರಂಭಕ್ಕೂ ಮುನ್ನ ನೆಗಳೂರು ಗ್ರಾಮದಲ್ಲಿ ರಂಭಾಪುರಿ, ಉಜ್ಜಯಿನಿ, ಶ್ರೀಶೈಲ ಮತ್ತು ಕಾಶೀ ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಇದೇ ಪವಿತ್ರ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ನೆಗಳೂರು ಹಿರೇಮಠದ ಕರ್ತೃ ಗುರುಶಾಂತೇಶ್ವರರ ಭವ್ಯ ರಥವನ್ನು ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರು ಮಂಗಲಾಕ್ಷತೆ ಹಾಕಿ ಲೋಕಾರ್ಪಣೆಗೊಳಿಸಿದರು. ನೆರೆದ ಸಕಲ ಸದ್ಭಕ್ತರು ಅತ್ಯಂತ ಭಕ್ತಿ ಭಾವನೆಯಿಂದ ತೇರನ್ನು ಎಳೆದ ದೃಶ್ಯ ಅಪೂರ್ವವಾಗಿತ್ತು.ಸೌಹಾರ್ದಯುತ ಸಮಾಜ ನಿರ್ಮಾಣವೇ ಪಂಚ ಪೀಠಗಳ ಗುರಿ
ಜೀವನ ಸಮೃದ್ಧಿಗೆ ಮತ್ತು ಶಾಂತಿಗೆ ದೈವಿ ಗುಣಗಳ ಅವಶ್ಯಕತೆಯಿದೆ. ದೈವಿ ಗುಣಗಳು ಪ್ರಾಬಲ್ಯಗೊಂಡರೆ ಅಸುರಿ ಗುಣಗಳು ನಾಶವಾಗುತ್ತವೆ. ಸಮಾಜದಲ್ಲಿ ಸಂಘಟನೆಗಳು ನಡೆಯಲಿ ಆದರೆ ಸಂಘರ್ಷಗಳು ನಡೆಯಬಾರದು. ಸೌಹಾರ್ದಯುತ ಸಮಾಜ ನಿರ್ಮಾಣವೇ ಪಂಚಪೀಠಗಳ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.