ಕಾರ್ಮಿಕರ ಹಿತ ಕಾಯಲು ಸರ್ಕಾರ ವಿಫಲ: ಎ. ದೇವದಾಸ್

| Published : Aug 13 2024, 12:56 AM IST

ಸಾರಾಂಶ

ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ, ಸಂವಿಧಾನಾತ್ಮಕ ಹಕ್ಕುಗಳನ್ನು ದಮನಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಮುಖಂಡ ಎ. ದೇವದಾಸ್ ಆರೋಪಿಸಿದ್ದಾರೆ.

ಬಳ್ಳಾರಿ: ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ದುಡಿಯುವ ಜನರ ಬದುಕು ದುರ್ಬರವಾಗಿದೆ ಎಂದು ಕಾರ್ಮಿಕ ಮುಖಂಡ ಎ. ದೇವದಾಸ್ ಆತಂಕ ವ್ಯಕ್ತಪಡಿಸಿದರು.

ನಗರದ ಗಾಂಧಿಭವನದಲ್ಲಿ ಜರುಗಿದ ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಸಮ್ಮೇಳನ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಮಿಕರ ಹಿತ ಕಾಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ದೊಡ್ಡ ದೊಡ್ಡ ಬಂಡವಾಳಗಾರರ ಹಿತ ಕಾಯಲು ಹವಣಿಸುತ್ತಿರುವ ಸರ್ಕಾರಗಳು, ಕೃಷಿ ಕಾರ್ಮಿಕರು ಸೇರಿದಂತೆ ದುಡಿಯುವ ಜನರ ಹಿತಗಳನ್ನು ರಕ್ಷಣೆ ಮಾಡುವ ಯಾವುದೇ ಕಾಳಜಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ, ಸಂವಿಧಾನಾತ್ಮಕ ಹಕ್ಕುಗಳನ್ನು ದಮನಗೊಳಿಸಲಾಗುತ್ತಿದೆ.

ಹೀಗಾಗಿಯೇ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತರು ಅನೇಕ ವರ್ಷಗಳಿಂದ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದರಲ್ಲದೆ, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಒಗ್ಗೂಡಬೇಕು. ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಸಂಘದ ಅಧ್ಯಕ್ಷೆ ಲಕ್ಷ್ಮಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಗೀತಾ, ಯಶೋದಾ, ಎರ್ರೆಮ್ಮ ಉಪಸ್ಥಿತರಿದ್ದರು.

ಜಂಟಿ ಕಾರ್ಯದರ್ಶಿ ಸಹನಾ, ಸಹಜಾನ್ ಬೀ, ರೇಖಾ ಹಾಗೂ ವನಿತಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಮ್ಮೇಳನದ ಪ್ರತಿನಿಧಿಗಳು ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮುಂದಿನ ಹಂತದ ಹೋರಾಟಗಳ ಕುರಿತು ಚರ್ಚಿಸಿ, ನಿರ್ಣಯಿಸಿದರು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.