ಕನ್ನಡಪ್ರಭ ವಾರ್ತೆ ಚಾಮರಾಜನಗರ
ಒಳ ಮೀಸಲಾತಿ ನೀಡುವಲ್ಲಿ ಬಲಗೈ ಸಮುದಾಯವನ್ನು ತಾತ್ಸಾರ ಮಾಡಿದ ಮಾರನೇ ದಿನವೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶಸ್ವಾಮೀಜಿ ಎಚ್ಚರಿಕೆ ನೀಡಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಗಡಿ ಕಟ್ಟೆ ಯಜಮಾನರುಗಳ ಹಾಗೂ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನ್ಯಾ.ನಾಗಮೋಹನ ದಾಸ್ ರವರ ಒಳಮೀಸಲಾತಿ ವರದಿಯ ಸಾಧಕ - ಬಾಧಕಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಿದ್ದೇ ಬಲಗೈ ಸಮುದಾಯ ಎಂಬುದನ್ನು ಅವರು ಮರೆತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲಲು ಬಲಗೈ ಸಮುದಾಯ ಕಾರಣ. ಇಲ್ಲದಿದ್ದರೆ ರಾಜಕೀಯ ಭವಿಷ್ಯವೇ ಮಾಸಿ ಹೋಗುತ್ತಿತ್ತು. ಅಂದು ಶ್ರೀನಿವಾಸ್ ಪ್ರಸಾದ್ ನಾಯಕತ್ವದಲ್ಲಿ ನಡೆದ ಚುನಾವಣೆಯನ್ನು ಅವರು ನೆನಪು ಮಾಡಿಕೊಳ್ಳಬೇಕು. ಈಗಾಗಲೇ ಸಿದ್ದರಾಮಯ್ಯ ಪೆನ್ನು ಸ್ವಲ್ಪ ಹಿಂದೆ ಸರಿಸಿದೆ. ಮಾ. ೨೫ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ನಮ್ಮ ಬಲಗೈ ಸಮುದಾಯದ ಶಕ್ತಿ ಪ್ರದರ್ಶನವು ಮತ್ತೊಂದು ಎಚ್ಚರಿಕೆ ಗಂಟೆಯಾಗಬೇಕು ಎಂದು ತಿಳಿಸಿದರು.ಅಲ್ಲದೇ ವಿಶೇಷ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಸಚಿವರು ತೆಗೆದುಕೊಳ್ಳುವ ತೀರ್ಮಾನದಲ್ಲಿ ನಿಮ್ಮ ಸರ್ಕಾರ ಉಳಿಯಲಿದೆ ಎಂದು ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದೇನೆ. ಇಷ್ಟಾಗಿಯೂ ಒಳ ಮೀಸಲಾತಿ ವಿಚಾರದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಬಲಗೈ ಮತ್ತು ಎಡಗೈ ಭಿನ್ನ ಮಾಡಿ, ನಮ್ಮಲ್ಲಿಯೇ ವೈಮನಸ್ಸು ಉಂಟು ಮಾಡುವ ಕುತಂತ್ರ ನಡೆದಿದೆ. ಇದನ್ನು ಭೇದಿಸುವ ಶಕ್ತಿ ನಮ್ಮಲ್ಲಿದೆ. ನಾವು ಅಂಬೇಡ್ಕರ್, ಬುದ್ದನ ಅನುಯಾಯಿಗಳು. ಹೀಗಾಗಿ ನಮ್ಮ ಹೋರಾಟ ನಿರಂತರವಾಗಿರಲಿ ಎಂದರು.
ಬಲಗೈ ಸಮುದಾಯದ ಸಚಿವರಿಂದ ರಾಜೀನಾಮೆ ಪತ್ರ ಸಿದ್ಧ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡುವ ಬಿಲ್ ಅನ್ನು ಸದನದಲ್ಲಿ ವಿರೋಧಿಸಿದೆ. ಆದರೆ, ಧ್ವನಿ ಮತಕ್ಕೆ ಹಾಕಿ ವಿಧಾನ ಸಭೆಯಲ್ಲಿ ಚರ್ಚೆ ಇಲ್ಲದೇ ಪಾಸ್ ಆಯಿತು. ಆದರೆ, ಮೇಲ್ಮನೆಯಲ್ಲಿ ಇದು ಚರ್ಚೆ ನಡೆದು, ಕೆಲವು ಮಾರ್ಪಾಡು ಮಾಡಲು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಒಪ್ಪಿಗೆ ಸೂಚಿಸಿದರು. ಇದಕ್ಕೆ ಪ್ರಮುಖ ಕಾರಣರು ನಮ್ಮ ಸಮುದಾಯದ ಅಧಿಕಾರಿ ಡಿ. ಚಂದ್ರಶೇಖಯ್ಯ ಎಂದರೆ ತಪ್ಪಾಗಲಾರದು. ಛಲವಾದಿ ನಾರಾಯಣಸ್ವಾಮಿ ಅವರಿಗೆ ಎಲ್ಲಾ ಪೂರಕವಾದ ಮಾಹಿತಿಯನ್ನು ನೀಡಿದ್ದರು. ಇಂಥ ಅಧಿಕಾರಿಗಳು ನಮ್ಮ ಸಮಾಜದ ಆಸ್ತಿ. ಮಾದಿಗ ಸಮಾಜದ ಸಚಿವರು ರಾಜೀನಾಮೆ ನೀಡಲು ಸಿದ್ಧ ಎನ್ನುತ್ತಿದ್ದಾರೆ. ಆದರೆ, ನಮ್ಮ ಸಮಾಜದ ಮೂವರು ಸಚಿವರು ಸಹ ರಾಜೀನಾಮೆ ಪತ್ರವನ್ನು ಬರೆದು ಸಿದ್ಧಪಡಿಸಿಕೊಂಡಿದ್ದಾರೆ. ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ನ್ಯಾಯ ಸಿಗದಿದ್ದ ದಿನವೇ ರಾಜೀನಾಮೆ ನೀಡುತ್ತಾರೆ ಎಂದು ಕೃಷ್ಣಮೂರ್ತಿ ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ನರೇಗಾವನ್ನು ಬದಲಾಯಿಸಿದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಅಧಿವೇಶ ಕರೆದಿದ್ದು. ಇದರ ಪರ ಹಾಗೂ ವಿರೋಧ ಚರ್ಚೆ ನಡೆಯುತ್ತಿತ್ತು. ಈ ಮಧ್ಯೆಯೇ ಒಳ ಮೀಸಲಾತಿಯನ್ನು ನೀಡುವ ಬಿಲ್ ಅನ್ನು ಈ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳುವ ಹುನ್ನಾರವನ್ನು ಸರ್ಕಾರ ಹಾಗೂ ವಿರೋಧ ಪಕ್ಷಗಳಲ್ಲಿರುವವರು ಮಾಡಿದರು. ಇದರ ಫಲವಾಗಿ ಈ ಬಿಲ್‌ಗೆ ಚರ್ಚೆ ಇಲ್ಲದೇ ಪಾಸ್ ಆಯಿತು. ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದ ವಿರೋಧ ಪಕ್ಷದವರು ಒಳ ಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯದ ಪರವಾಗಿ ಇರಲಿಲ್ಲ. ಇದೊಂದು ಪಿತೂರಿ ಮತ್ತು ಹುನ್ನಾರವಾಗಿದೆ. ಹೀಗಾಗಿ ಬಲಗೈ ಸಮುದಾಯದವರಿಗೆ ಇದು ಎಚ್ಚರಿಕೆಯಾಗಿದೆ. ಇನ್ನಾದರೂ ಯಾರು ನಮ್ಮ ಪರ ಧ್ವನಿಯಾಗುತ್ತಾರೆ ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು ಎಂದು ಕೃಷ್ಣಮೂರ್ತಿ ತಿಳಿಸಿದರು.
ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಮಾತನಾಡಿ, ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಸುಮ್ಮನೆ ಕೂರುವ ಪ್ರಶ್ನೆ ಇಲ್ಲ. ಚಾ.ನಗರದಿಂದ ಹಚ್ಚುವ ಕಿಡಿ ರಾಜ್ಯಾದ್ಯಂತ ಹೋರಾಟ ಶುರುವಾಗುತ್ತದೆ. ಇದನ್ನು ಸರ್ಕಾರ ಗಮನಿಸಬೇಕು. ಸಿದ್ದರಾಮಯ್ಯ ಹಾಗೂ ಮಹದೇವಪ್ಪ, ಪ್ರಿಯಾಂಗ್ ಖರ್ಗೆ, ಡಾ.ಪರಮೇಶ್ವರ ಅವರು ನಮ್ಮ ಸಮಾಜದ ಪರವಾಗಿದ್ದಾರೆ ಎಂದರು.ಸಭೆಯಲ್ಲಿ ಅಂಬೇಡ್ಕರ್ ವಿಚಾರವಾದಿ ಡಾ.ಪಿ.ದೇವರಾಜು ಮಾತನಾಡಿದರು. ಛಲವಾದಿ ಗುರುಪೀಠ ಶ್ರೀ ಬಸವರಾಜ ಸ್ವಾಮೀಜಿ, ನಗರಸಭಾ ಮಾಜಿ ಸದಸ್ಯ ಅರ್.ಪಿ.ನಂಜುಂಡಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವಯ್ಯ, ಯುವ ಮುಖಂಡ ನಲ್ಲೂರು ಮಹದೇವಸ್ವಾಮಿ, ಚಾಮುಲ್ ನಿರ್ದೇಶಕ ರೇವಣ್ಣ, ವಕೀಲ ಪ್ರಸನ್ನಕುಮಾರ್, ಗಡಿ ಯಜಮಾನರಾದ ರವಿಕುಮಾರ್, ವೀರಣ್ಣ, ರಂಗಸ್ವಾಮಿ, ನಾಗರಾಜು, ಕಟ್ಟೆ ಯಜಮಾನರಾದ ಪಾಪಣ್ಣ, ಸೋಮಣ್ಣ, ಸಿದ್ದಯ್ಯ, ಕೆ.ರಂಗಸ್ವಾಮಿ, ಪುಟ್ಟಸ್ವಾಮಿ, ಚೆನ್ನಂಜಯ್ಯ, ಮಹದೇವಯ್ಯ , ಸಮುದಾಯದ ಮುಖಂಡರಾದ ಸೋಮೇಶ್ವರ, ನಾಗಯ್ಯ, ವೀರಭದ್ರಸ್ವಾಮಿ, ಹೆಬ್ಬಸೂರು ರಂಗಸ್ವಾಮಿ, ಗೋವಿಂದರಾಜು, ಸಿದ್ದಪ್ಪಾಜಿ ಸೇರಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗಡಿಕಟ್ಟೆ ಯಜಮಾನರು, ಮುಖಂಡರು ಭಾಗವಹಿಸಿದ್ದರು.