ಸಾರಾಂಶ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರ ಹೇಳಿಕೆ
ಕನ್ನಡಪ್ರಭ ವಾರ್ತೆ ಕೊಪ್ಪಳಈ ಹಿಂದಿನ ಸರ್ಕಾರ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದನ್ನು ಸಹ ಮರೆತಿತ್ತು. ಸಾಹಿತಿಗಳನ್ನು ಗೌರವಿಸುವುದಕ್ಕೆ ಪುನಃ ನಮ್ಮ ಸರ್ಕಾರವೇ ಬರಬೇಕಾಯಿತು. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಕಳಕಳಿಯಿಂದ ಬಾಕಿ ಇದ್ದ ಎಲ್ಲ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ 2021, 22ನೇ ವರ್ಷ ಗೌರವ ಪ್ರಶಸ್ತಿ ಮತ್ತು ಸಾಹಿತ್ಯಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದರು.ನಾಲ್ಕು ವರ್ಷಗಳ ಹಿಂದೆಯೇ ಕೊಡಬೇಕಾಗಿದ್ದ ಪ್ರಶಸ್ತಿಗಳನ್ನು ಈ ಹಿಂದೆ ಇದ್ದ ಸರ್ಕಾರ(ಬಿಜೆಪಿ) ಕೊಡಲೇ ಇಲ್ಲ. ಸಾಹಿತಿಗಳನ್ನು ಗೌರವಿಸುವುದಕ್ಕೂ ಆಗಲಿಲ್ಲ. ಅಷ್ಟೇ ಅಲ್ಲ, ಈ ಹಿಂದೆ ನಮ್ಮ ಸರ್ಕಾರ ಇದ್ದ ವೇಳೆಯಲ್ಲಿ ಅಕಾಡೆಮಿಗಳಿಗೆ ನೀಡುತ್ತಿದ್ದ ಅನುದಾನವನ್ನು ₹1. 20 ಕೋಟಿಯಿಂದ ₹60 ಲಕ್ಷಕ್ಕೆ ಇಳಿಸಿದರು. ಈಗ ನಮ್ಮ ಸರ್ಕಾರ ಬಂದ ಮೇಲೆ ₹ 80 ಲಕ್ಷ ನಿಗದಿ ಮಾಡಿದ್ದು, ಹಂತ ಹಂತವಾಗಿ ಹೆಚ್ಚಳ ಮಾಡುವುದಾಗಿ ಹೇಳಿದರು.
ಈ ಹಿಂದೆ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದು, ಪ್ರಶಸ್ತಿಗಳು, ಅಕಾಡೆಮಿ ಸದಸ್ಯರು, ಅಧ್ಯಕ್ಷರ ನೇಮಕದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿತ್ತು. ಆದರೆ, ನಾವು ಬಂದ ಮೇಲೆ ಅದನ್ನು ಸರಿಪಡಿಸಿದ್ದೇವೆ ಮತ್ತು ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡುತ್ತಿದ್ದೇವೆ. ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮೆರಡು ಕಣ್ಣು ಇದ್ದಂತೆ, ಅವುಗಳನ್ನು ಕಾಪಾಡಬೇಕಾಗಿದೆ ಎಂದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕನ್ನಡ ಸಂಕಷ್ಟದಲ್ಲಿದೆ. ಅದನ್ನು ಬೆಳೆಸುವ ಕಾರ್ಯವನ್ನು ಸರ್ಕಾರ ಮತ್ತು ಅಕಾಡೆಮಿಗಳು ಮಾಡಬೇಕಾಗಿದೆ. ಕೊಪ್ಪಳದಲ್ಲಿ ಸಮಾರಂಭ ಆಯೋಜನೆ ಮಾಡಿರುವ ಸಂತೋಷದ ವಿಷಯ. ಆದರೆ, ಅಕಾಡೆಮಿಗಳು ಕೇವಲ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುವುದು ಅಷ್ಟೇ ಅಲ್ಲ, ಸಂದಿಗ್ದ ಸ್ಥಿತಿಯಲ್ಲಿರುವ ಕನ್ನಡವನ್ನು ಕಾಪಾಡುವುದಕ್ಕಾಗಿ ಚಿಂತಿಸಬೇಕಾಗಿದೆ. ಖಾಸಗಿ ಶಾಲೆಗಳು ಹೆಚ್ಚುತ್ತಿರುವುದರಿಂದ ಕನ್ನಡ ಕಲಿಸುವ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ, ಇವುಗಳನ್ನು ಉಳಿಸುವ ಅಗತ್ಯವಿದೆ ಎಂದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿನಂದನಾ ನುಡಿಗಳನ್ನಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಅಗ್ರಹಾರ ಕೃಷ್ಣಮೂರ್ತಿ ಹಾಗೂ ಡಾ. ಅನುಸೂಯಾ ಕಾಂಬಳೆ ಮಾತನಾಡಿದರು. ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಸಾಹಿತಿ ಅಜಮೀರ ನಂದಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೆಡಿ ಬಸವರಾಜ ಹೂಗಾರ, ರಿಜಿಸ್ಟಾರ್ ಕರಿಯಪ್ಪ ಉಪಸ್ಥಿತರಿದ್ದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತ್ಯ ಶ್ರೀ, ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಪ್ರದಾನ:ನಾಲ್ಕೈದು ವರ್ಷಗಳಿಂದ ಬಾಕಿ ಇದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಕೊನೆಗೂ ನೀಡಿ, ಸಾಹಿತಿಗಳನ್ನು ಗೌರವಿಸಲಾಯಿತು.
ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಆಚೆ ಕೊಪ್ಪಳ ನಗರದ ಶಿವಶಾಂತ ಮಂಗಲಭವನದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವ ಪ್ರಶಸ್ತಿ-2022, ಸಾಹಿತ್ಯಶ್ರೀ ಪ್ರಶಸ್ತಿ-2022 ಹಾಗೂ ಪುಸ್ತಕ ಬಹುಮಾನ-2021 ಪ್ರಧಾನ ಮಾಡಲಾಯಿತು.2022ನೇ ವರ್ಷದ ಗೌರವ ಪ್ರಶಸ್ತಿಯನ್ನು ಪ್ರೊ. ಆರ್.ಕೆ. ಹುಡುಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಸ್ವೀಕಾರ ಮಾಡಿದರೆ ತುಂಬಾಡಿ ರಾಮಯ್ಯ ಗೈರಾಗಿದ್ದರು. 2022ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಡಾ. ಬಂಜಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ದಾಸನೂರು ಕೂಸಣ್ಣ, ಡಾ. ಅನುಸೂಯಾ ಕಾಂಬಳೆ, ಬಿ. ಮಹೇಶ ಹರವೇ, ಎಚ್. ಎನ್. ಆರತಿ, ಚಲಂ ಹಾಡ್ಲಹಳ್ಳಿ, ರೂಮಿ ಹರೀಶ್ ಹಾಗೂ ಡಾ. ಸಾರಿಕಾದೇವಿ ಎಲ್. ಕಾಳಗಿ ಸ್ವೀಕರಿಸಿದರು. ಇದರ ಜೊತೆಗೆ 2021ನೇ ವರ್ಷದ ಪುಸ್ತಕ ಬಹುಮಾನವನ್ನು 17 ಸಾಹಿತಿಗಳಿಗೆ ಕೊಡಮಾಡಲಾಯಿತು.ಹಿಂದಿ ಹೇರಿಕೆ ಸಹಿಸಲ್ಲ:
ಕೊಪ್ಪಳ: ನಾವು ಹಿಂದಿ ಹೇರಿಕೆ ಸಹಿಸುವುದಿಲ್ಲ. ಇದರ ವಿರುದ್ಧ ಸರ್ಕಾರ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ರಾಜ್ಯಗಳ ಸಚಿವರ ಸಭೆ ಕರೆದು, ಒಗ್ಗೂಡಿ ಹೋರಾಟ ರೂಪಿಸಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, 22 ರಾಜ್ಯ ಭಾಷೆಗಳಿದ್ದು, ಅವರೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ನೀಡಿರುವ ಭಾಷಾ ಆಯ್ಕೆ ಪಾಲಕರು ಮತ್ತು ವಿದ್ಯಾರ್ಥಿಗಳದ್ದು ಎನ್ನುವುದರ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದರು.
ವಿಚಾರವಾದಿಗಳನ್ನು ಕೊಲ್ಲುವ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಸಂವಿಧಾನಕ್ಕೆ ಧಕ್ಕೆಯಾದರೆ ಸಾಹಿತಿಗಳೆಲ್ಲರೂ ಎದ್ದು ನಿಲ್ಲಬೇಕಾಗಿದೆ ಎಂದರು.