ಸಾರಾಂಶ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿಗಳಿಂದ ಹೊರಸೂಸುತ್ತಿರುವ ವಿಷಗಾಳಿ -ತ್ಯಾಜ್ಯ ಘಾಟು ಆರೋಪ- ಆತಂಕದ ಕುರಿತು, ಈ ಭಾಗದ ಜನರ ಜೀವನದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ "ಕನ್ನಡಪ್ರಭ " ಪ್ರಕಟಿಸುತ್ತಿರುವ ಸರಣಿ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಯಾದಗಿರಿ : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿಗಳಿಂದ ಹೊರಸೂಸುತ್ತಿರುವ ವಿಷಗಾಳಿ -ತ್ಯಾಜ್ಯ ಘಾಟು ಆರೋಪ- ಆತಂಕದ ಕುರಿತು, ಈ ಭಾಗದ ಜನರ ಜೀವನದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ "ಕನ್ನಡಪ್ರಭ " ಪ್ರಕಟಿಸುತ್ತಿರುವ ಸರಣಿ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಈ ಕುರಿತು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು, ಕೈಗೊಂಡ ಕ್ರಮದ ಬಗ್ಗೆ 7 ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
*ಸಚಿವ ಈಶ್ವರ ಖಂಡ್ರೆಯವರ ಪತ್ರ : "ಕನ್ನಡಪ್ರಭ "ದಲ್ಲಿ ''''''''ಕಡೇಚೂರು: ಬದುಕು ಚೂರು ಚೂರು..! ವಿಷ ಗಾಳಿಯ ಆಪತ್ತು, ಜೀವಕ್ಕೆ ಕುತ್ತು, ಕಡೇಚೂರು -ಬಾಡಿಯಾಳ ಕೈಗಾರಿಕಾ ಪ್ರದೇಶದ ಗ್ರಾಮಸ್ಥರ ಬದುಕು-ಬವಣೆ'''''''' ಹಾಗೂ ಕೂಸು ಬೆಳೆದಿಲ್ಲ, ಅಬಾರ್ಷನ್ ಮಾಡಿಸಿ ಬಿಡಿ... ! ಗರ್ಭದಲ್ಲೇ ಶಿಶುಗಳ ಬೆಳವಣಿಗೆ ಕುಂಠಿತ, ಬಾಣಂತಿಯರ ಬದುಕು ಸೂಜಿ ಮೇಲಿನ ನಡಿಗೆಯಂತೆ, ಕಮಿಕಲ್ ಫ್ಯಾಕ್ಟರಿ ಎಫೆಕ್ಟ್ ಆರೋಪ... ಎಂಬ ಶೀರ್ಷಿಕೆಯಡಿ ಸಚಿತ್ರ ಲೇಖನ ಸರಣಿಗಳು ಪ್ರಕಟವಾಗಿದ್ದು, ಇದರಲ್ಲಿ ಯಾದಗಿರಿ ತಾಲೂಕು, ಗುರುಮಠಕಲ್ ವ್ಯಾಪ್ತಿಯ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಸುತ್ತಲ ಗ್ರಾಮಸ್ಥರು ಮಾಲಿನ್ಯದಿಂದ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವರದಿ ಪ್ರಕಟವಾಗಿರುದ್ದು, ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ನಿಜಕ್ಕೂ ಮಾಲಿನ್ಯ ಉಂಟಾಗುತ್ತಿದೆಯೇ? ಗಂಭೀರ ಸ್ವರೂಪದ ದುಷ್ಪರಿಣಾಮ ಬೀರುತ್ತಿದೆಯೇ? ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ವಾಯುಗುಣಮಟ್ಟ, ಜಲ ಗುಣಮಟ್ಟದ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತಿದೆಯೇ? ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕೈಗಾರಿಕಾ ಪ್ರದೇಶದಲ್ಲಿ ಎಷ್ಟು ಕಾರ್ಖಾನೆಗಳಿಗೆ ಈವರೆಗೆ ನೋಟಿಸ್ ನೀಡಿದೆ. ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಹಿರಿಯ ಪರಿಸರ ಅಧಿಕಾರಿಯಿಂದ ತನಿಖೆ ನಡೆಸಿ, ಕೈಗೊಂಡ ಕ್ರಮದ ವಿವರದೊಂದಿಗೆ 7 ದಿನಗಳ ಒಳಗಾಗಿ ಈ ಕಚೇರಿಗೆ ವರದಿ ಸಲ್ಲಿಸಲು ಸೂಚಿಸಿದೆ.