ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ಅಯೋಧ್ಯೆಯ ಬಳಿಕ ಅಂಜನಾದ್ರಿ ಅಭಿವೃದ್ಧಿಗೆ ಮುಹೂರ್ತ ಎನ್ನುವ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ರಾಮನ ಬಂಟ ಹನುಮ ಜನಿಸಿದ ನಾಡು ಅಂಜನಾದ್ರಿ ಅಭಿವೃದ್ಧಿ ಮಾಡಬೇಕು ಎನ್ನುವ ಕೂಗು ಅಯೋಧ್ಯೆಯಲ್ಲಿಯೇ ಕೇಳಿ ಬಂದಿದೆ. ಹೀಗಾಗಿ ಅಂಜನಾದ್ರಿಯ ಕುರಿತು ಚರ್ಚೆ ಎಲ್ಲೆಡೆ ಶುರುವಾಗಿದೆ.ಅಂಜನಾದ್ರಿಯ ಅಭಿವೃದ್ಧಿ ಕುರಿತು ಚುನಾವಣೆಯ ವೇಳೆ ರಾಜಕೀಯ ನಾಯಕರು ಪೈಪೋಟಿಯ ಮೇಲೆ ಹೇಳಿಕೆ ನೀಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಘೋಷಣೆಗೂ ಮುನ್ನ ₹120 ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿತು. ಆದರೆ, ಅದಾದ ನಂತರ ಅದು ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಜನಾದ್ರಿ ಅಭಿವೃದ್ಧಿಗೆ ₹500 ಕೋಟಿ ಅನುದಾನ ನೀಡಲಾಗುತ್ತದೆ ಎಂದು ಚುನಾವಣೆ ಸಂದರ್ಭದಲ್ಲಿ ಶಿವರಾಜ ತಂಗಡಗಿ ಹೇಳಿದ್ದರು. ಈಗ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಶಿವರಾಜ ತಂಗಡಗಿ ಉಸ್ತುವಾರಿ ಸಚಿವರಾಗಿದ್ದು, ಅಂಜನಾದ್ರಿ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸುವುದೇ ಎನ್ನುವುದೇ ಸದ್ಯದ ಕುತೂಹಲ.
ರಾಜಕೀಯ ಬದಿಗಿಟ್ಟು ಚರ್ಚೆ ಮಾಡುವುದಾದರೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇವೆ. ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಸರ್ಕಾರದ ಗಮನ ಸೆಳೆಯಬೇಕಾಗಿದೆ.ಆಂಜನೇಯ ಜನಿಸಿದ ಅಂಜನಾದ್ರಿ ಅಷ್ಟೇ ಅಲ್ಲ, ರಾಮಾಯಣ, ಮಹಾಭಾರತದ ಅನೇಕ ಐತಿಹ್ಯಗಳು ಇಲ್ಲಿ ಇವೆ. ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಅಂಜನಾದ್ರಿ ಆಂಜನೇಯನ ಭಕ್ತರನ್ನು ಸೆಳೆಯುತ್ತಿದೆ. ಹೀಗಾಗಿ, ಇದರ ಅಭಿವೃದ್ಧಿ ಸೇರಿದಂತೆ ರಾಮಾಯಣ, ಮಹಾಭಾರತದ ತಾಣಗಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಪ್ರವಾಸೋದ್ಯಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ನೀಡುವ ಅಗತ್ಯವಿದೆ.
ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದೇವಾಲಯ, ಕೋಟಿಲಿಂಗಗಳ ಪುರ, ಚಂದಾಲಿಂಗೇಶ್ವರ, ಆನೆಗೊಂದಿ, ಹಿರೇಬೆಣಕಲ್ ಮೋರೇರ ತಟ್ಟೆಗಳು, ಹುಲಿಗೆಮ್ಮ ದೇವಸ್ಥಾನ, ಕನಕಗಿರಿ ಸೇರಿದಂತೆ ಹತ್ತು ಹಲವು ತಾಣಗಳು ಇವೆ.ಇದಲ್ಲದೆ ಅರಣ್ಯ ಪ್ರದೇಶ, ಕಾಡು ಪ್ರಾಣಿಗಳು, ನದಿ, ಕೆರೆ ಸೇರಿದಂತೆ ಹತ್ತು ಹಲವು ಇದ್ದು, ಅವುಗಳನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಅಗತ್ಯವಿದೆ. ಈ ದಿಸೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇ ಆದಲ್ಲಿ ಕೊಪ್ಪಳ ಜಿಲ್ಲೆ ಬಹುದೊಡ್ಡ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ.
ತುಂಗಭದ್ರಾ ನದಿಯುದ್ದಕ್ಕೂ ಇರುವ ನೀರು ನಾಯಿಗಳ ಸಂರಕ್ಷಣೆಯಾಗಬೇಕಾಗಿದೆ. ಕರಡಿ ಧಾಮ ಆಗಬೇಕಾಗಿದ್ದು, ಈಗ ಕರಡಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಲಾಗಿದೆ. ಜಿಂಕೆ ವನ ಸ್ಥಾಪನೆ ಮಾಡುವ ಬೇಡಿಕೆ ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದನ್ನು ಅಭಿವೃದ್ಧಿ ಪಡಿಸಿದಲ್ಲಿ ಜಿಂಕೆಗಳ ಸಂತಾನ ವೃದ್ಧಿಗೆ ಅನುಕೂಲವಾಗುತ್ತದೆ ಹಾಗೂ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಮಾಡಬಹುದಾಗಿದೆ.ಪ್ರಾಣಿ ಪ್ರಪಂಚ: ಕೊಪ್ಪಳ ಜಿಲ್ಲೆಯಲ್ಲಿ ಪ್ರಾಣಿ ಪ್ರಪಂಚವೇ ಇವೆ. ಕರಡಿ, ಜಿಂಕೆ, ಚಿರತೆ, ನೀರು ನಾಯಿ, ಕತ್ತೆಕಿರುಬ ಸೇರಿದಂತೆ ವೈವಿಧ್ಯಮ ಪ್ರಾಣಿ ಪ್ರಪಂಚ ಕುರುಚಲ ಕಾಡಿನಲ್ಲಿದ್ದು, ಅವುಗಳ ಸಂರಕ್ಷಣೆ ಮತ್ತು ಸಫಾರಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಕಾರ್ಯ ಆಗಬೇಕಾಗಿದೆ.
ಸ್ಟೀಲ್ ಸಿಟಿ : ಕೊಪ್ಪಳ ಬಳಿ ಸ್ಟೀಲ್ ಸಿಟಿ ಮತ್ತು ಸ್ಟೀಲ್ ಕಾರಿಡಾರ್ ಮಾಡುವ ಕುರಿತು ಸಹ ಈ ಹಿಂದೆಯೇ ಅನೇಕ ಭಾರಿ ಚರ್ಚೆಯಾಗಿವೆ. ಕೆಲ ಸಚಿವರು ಸಹ ಈ ಘೋಷಣೆ ಮಾಡಿದ್ದಾರೆ. ಆದರೆ, ಅದ್ಯಾವುದೂ ಜಾರಿಯಾಗಿಯೇ ಇಲ್ಲ.ಕೊಪ್ಪಳ ಬಳಿ ತಲೆ ಎತ್ತಿರುವ ಬೃಹತ್ ಕೈಗಾರಿಕೆಗಳನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿ ಮಾಡುವ ದಿಸೆಯಲ್ಲಿ ಪ್ರಯತ್ನ ಆಗಬೇಕಾಗಿದೆ. ಸ್ಥಳೀಯರಿಗೆ ಉದ್ಯೋಗ ದೊರೆಯುವಂತಾಗಬೇಕಾಗಿದೆ.