ಶಿಕ್ಷಣದ ಗುಣಮಟ್ಟ ಹೆಚ್ಚಳ ಮಾಡಲು ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಹರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆಯುವ ಸಾಮರ್ಥ್ಯ ಇದೆ.

ಗದಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಅಂಕ ಕೊಟ್ಟು ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಸೋಮವಾರ ನಗರದ ಹಾತಲಗೇರಿ ನಾಕಾ ಹತ್ತಿರ ಇರುವ ಜೆಟಿ ಮಹಾವಿದ್ಯಾಲಯದಲ್ಲಿ ಹೆಚ್ಚು ಅಂಕ ಪಡೆದ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೂರು ಬಾರಿ ಬರೆಸುವುದರಲ್ಲಿ ಏನಿದೆ? ಎಲ್ಲರೂ ಪಾಸಾದರೆ ಹೇಗೆ, ಕಷ್ಟಪಟ್ಟು ಓದಿದ ಹುಡುಗರಿಗೆ ಇದರಿಂದ ಡಿಸ್ಕರೇಜ್ ಮಾಡಿದಂತಾಗುತ್ತದೆ. ಪಾಸ್ ಆಗಲು ಮೂವತ್ತು ಮಾರ್ಕ್ ಮಾಡಿದ್ದಾರೆ. ಅದರಲ್ಲಿಯೇ 10 ಪರ್ಸೆಂಟ್ ಇಂಟರ್‌ನಲ್ ಅಂಕ ಕೊಡುತ್ತಾರೆ. ಎಲ್ಲರೂ ಪಾಸ್ ಆದರೆ, ಅವರ ಭವಿಷ್ಯ ಏನು? ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತದೆ. ಶಿಕ್ಷಣದಲ್ಲಿ ಸುಧಾರಣೆ ಆಗಬೇಕೆಂದರೆ ಕಲಿಕೆಯಲ್ಲಿ ಸುಧಾರಣೆಯಾಗಬೇಕು. ಶಿಕ್ಷಣದ ಗುಣಮಟ್ಟ ಹೆಚ್ಚಳ ಮಾಡಲು ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಹರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆಯುವ ಸಾಮರ್ಥ್ಯ ಇದೆ ಎಂದರು.

ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಗುರುಗಳು ಇದ್ದಾರೆ. ಗುರುವನ್ನು ನೆನಪು ಮಾಡಿಕೊಳ್ಳುವುದು ಅತ್ಯಂತ ಶ್ರೇಷ್ಠ ಗುಣ. ತಂದೆ- ತಾಯಿಯನ್ನು ಯಾವ ರೀತಿ ನೆನಪಿಸಿಕೊಳ್ಳುತ್ತೇವೊ ಅದೇ ರೀತಿ ಗುರುಗಳನ್ನು ನೆನಪಿಸಿಕೊಳ್ಳಬೇಕು. ಗುರುಗಳು ಅನುಭವ ಮತ್ತು ಮಾರ್ಗದರ್ಶನ ನೀಡುತ್ತಾರೆ. ಅವರನ್ನು ನೆನಪಿಟ್ಟುಕೊಂಡರೆ ಸದಾ ನಿಮಗೆ ಸರಸ್ವತಿ ಆಶೀರ್ವಾದ ಸಿಗುತ್ತದೆ. ಆ ಯಶಸ್ಸಿನ ಹಿಂದಿರುವ ತ್ಯಾಗವನ್ನು ನಾವು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಯುವ ಮುಖಂಡ ಉಮೇಶಗೌಡ ಪಾಟೀಲ, ಪ್ರಾಚಾರ್ಯ ಪಿ.ಜಿ. ಪಾಟೀಲ, ಅರ್.ಎಸ್. ಬುರಡಿ, ಎಂ.ಕೆ. ಲಮಾಣಿ, ಮಸನಾಯಕ, ಎ.ಎಸ್. ಪಾಟೀಲ, ಬಿ.ಎಫ್. ಪೂಜಾರ, ವೈ.ಸಿ. ಪಾಟೀಲ ಇತರರು ಇದ್ದರು.