ರಾಜ್ಯಪಾಲರಿಗೆ ಇರುವ ಅಧಿಕಾರ ಮತ್ತಷ್ಟು ಮೊಟಕುಗೊಳಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸುಳಿವು

| Published : Dec 05 2024, 12:31 AM IST / Updated: Dec 05 2024, 05:02 AM IST

ರಾಜ್ಯಪಾಲರಿಗೆ ಇರುವ ಅಧಿಕಾರ ಮತ್ತಷ್ಟು ಮೊಟಕುಗೊಳಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸುಳಿವು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ (ಕೆಎಸ್‌ಯು) 2000ಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿ ರಾಜ್ಯಪಾಲರಿಗೆ ಇರುವ ಅಧಿಕಾರ ಮತ್ತಷ್ಟು ಮೊಟಕುಗೊಳಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸುಳಿವು ನೀಡಿದ್ದಾರೆ.

 ಬೆಂಗಳೂರು : ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ (ಕೆಎಸ್‌ಯು) 2000ಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿ ರಾಜ್ಯಪಾಲರಿಗೆ ಇರುವ ಅಧಿಕಾರ ಮತ್ತಷ್ಟು ಮೊಟಕುಗೊಳಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸುಳಿವು ನೀಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್‌ನಲ್ಲಿ ವಿಶ್ವವಿದ್ಯಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಲಾಗಿದೆ. ಅಲ್ಲಿ ಘಟಿಕೋತ್ಸವದ ಅಧ್ಯಕ್ಷತೆ ಸೀಮಿತಗೊಳಿಸುವ ಮೂಲಕ ವಿವಿಗಳ ಕುಲಪತಿಯಾಗಿರುವ ರಾಜ್ಯಪಾಲರ ಪ್ರಮುಖ ಅಧಿಕಾರವನ್ನು ಕಡಿತಗೊಳಿಸಲಾಗಿದೆ.

ತನ್ಮೂಲಕ ಗುಜರಾತ್ ಸರ್ಕಾರಕ್ಕೆ ವಿಶ್ವವಿದ್ಯಾನಿಲಯ ನಿರ್ವಹಣೆ ಮೇಲೆ ಹೆಚ್ಚಿನ ನಿಯಂತ್ರಣ ನೀಡಲಾಗಿದೆ. ಅಲ್ಲಿ ಕುಲಪತಿಗಳ ಆಯ್ಕೆ ಸಮಿತಿ ಅಧ್ಯಕ್ಷರನ್ನು ರಾಜ್ಯಪಾಲರ ಬದಲು ಸರ್ಕಾರ ನಾಮನಿರ್ದೇಶನ ಮಾಡಬಹುದಾಗಿದೆ.

ಅದೇ ಮಾದರಿಯನ್ನು ರಾಜ್ಯದಲ್ಲೂ ಏಕೆ ಅನುಸರಿಸಬಾರದು ಎಂದು ಪ್ರಶ್ನಿಸಿದ ಅವರು, ಕೆಎಸ್‌ಯು ಕಾಯ್ದೆ ತಿದ್ದುಪಡಿ ಸಂಬಂಧ ರಚಿಸಿದ್ದ ಸಮಿತಿ ವರದಿ ನೀಡಿದೆ. ಅದನ್ನು ಕಾನೂನು ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ. ಅಭಿಪ್ರಾಯ ಬಂದ ಬಳಿಕ ಮಸೂದೆ ತಯಾರಿಸಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.

ಕಾಯ್ದೆ ತಿದ್ದುಪಡಿ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ ಡಾ.ಸುಧಾಕರ್‌, ಮಸೂದೆಯಲ್ಲಿ ಪ್ರಸ್ತಾಪಿತ ತಿದ್ದುಪಡಿಗಳು ಕುಲಪತಿಗಳ ಅವಧಿ ಸೇರಿ ಹಲವು ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಡಾ.ಜಿ.ಪರಮೇಶ್ವರ್ ಅವರು ಕೆಎಸ್‌ಯು ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿದ್ದರು. ಆದರೆ ದುರದೃಷ್ಟವಶಾತ್ ಭಾರತದ ರಾಷ್ಟ್ರಪತಿಗಳು ತಿದ್ದುಪಡಿ ಮಸೂದೆ ಅಂಗೀಕರಿಸಲಿಲ್ಲ, ಇದನ್ನು ಪರಿಗಣಿಸಿ ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯ. ವಿವಿಗಳಲ್ಲಿ ಆಡಳಿತಾತ್ಮಕ ಸುಧಾರಣೆ ಆಗಬೇಕಿದೆ ಎಂದರು.

ಪ್ರಧಾನ ಮಂತ್ರಿಗಳು ಸೇರಿ ಬಿಜೆಪಿಯವರು ಎಲ್ಲದಕ್ಕೂ ಗುಜರಾತ್‌ ಮಾದರಿ ಅನ್ನುತ್ತಾರಲ್ವಾ? ವಿವಿಗಳ ಆಡಳಿತ ವಿಚಾರಕ್ಕೆ ನಾವೇಕೆ ಆ ಮಾದರಿ ಅನುಸರಿಸಬಾರದು ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.