ಸರ್ಕಾರದ ಆಡಳಿತ ಯಂತ್ರ ಕುಸಿದಿದೆ

| Published : Oct 03 2025, 01:07 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಡೋಣಿ ನದಿ ಪ್ರವಾಹದಲ್ಲಿ ಸಂತೋಷ ಹಡಪದ ಕೊಚ್ಚಿ ಹೋಗಿ ೮ ದಿನಗಳಾದರೂ ಆ ಕುಟುಂಬಕ್ಕೆ ನ್ಯಾಯ ಸಿಗದಿರುವುದು ಅಧಿಕಾರಿಗಳ ಲೋಪ ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಡೋಣಿ ನದಿ ಪ್ರವಾಹದಲ್ಲಿ ಸಂತೋಷ ಹಡಪದ ಕೊಚ್ಚಿ ಹೋಗಿ ೮ ದಿನಗಳಾದರೂ ಆ ಕುಟುಂಬಕ್ಕೆ ನ್ಯಾಯ ಸಿಗದಿರುವುದು ಅಧಿಕಾರಿಗಳ ಲೋಪ ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಡೋಣಿ ನದಿಯ ಪ್ರವಾಹದಲ್ಲಿ ಕೊಚ್ಚಿಹೋದ ವಡವಡಗಿ ಗ್ರಾಮದ ಸಂತೋಷ ಹಡಪದ ಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂತೋಷ್‌ ಜೊತೆಗೆ ಬೈಕ್ ಮೇಲೆ ಇದ್ದ ಮಹಾಂತೇಶ ಹೊಸಗೌಡರ ಎಂಬಾತ ಅದೃಷ್ಟವಶಾತ್ ಈಜಿ ದಡ ಸೇರಿದ್ದಾನೆ. ಆದರೆ ಸಂತೋಷ ಹಡಪದ ಕೊಚ್ಚಿ ಹೋಗಿದ್ದಾನೆ. ಅಧಿಕಾರಿಗಳು ಯಾವ ಪ್ರಯತ್ನ ಮಾಡಬೇಕಿತ್ತು, ಅದನ್ನು ಮಾಡುವಲ್ಲಿ ವಿಫಲವಾಗಿದ್ದಾರೆ. ಆ ಸಮಯದಲ್ಲಿ ಕೊಚ್ಚಿ ಸಂತೋಷನ ಕುಟುಂಬಕ್ಕೆ ನೀರು ಕಡಿಮೆಯಾದ ನಂತರ ಹುಡುಕುತ್ತೇವೆ ಅಂದರು. ಆದರೆ, ೮ ದಿನಗಳಾದರೂ ಸಂತೋಷನ ಶವ ಹುಡುಕುವ ಪ್ರಯತ್ನ ಮಾಡಿಲ್ಲ. ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವನ್ನು ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಸ್ಥಳೀಯ ಶಾಸಕರಿಗೆ ವಿಷಯ ಗೊತ್ತಿದ್ದರೂ ಯುವಕನ ಶವ ಹುಡುಕುವ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸಿಲ್ಲ. ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು.ಅಪರ ಜಿಲ್ಲಾಧಿಕಾರಿಗಳಿಗೆ ನಾನು ದೂರವಾಣಿಯಲ್ಲಿ ಸಂಪರ್ಕಿಸಿ ಯುವಕ ಕೊಚ್ಚಿ ಹೋದ ವಿಷಯ ಪ್ರಸ್ತಾಪಿಸಿದರೆ ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಎರಡು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸಿಂದಗಿ, ಇಂಡಿ, ತಿಕೋಟಾ, ಬಬಲೇಶ್ವರ ಬಿಟ್ಟರೆ ಉಸ್ತುವಾರಿ ಮಂತ್ರಿಗೆ ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕು ಜಿಲ್ಲೆಯಲ್ಲಿ ಇದೆಯೇ ಎಂಬುದೇ ಅವರಿಗೆ ಗೊತ್ತಿಲ್ಲದಂತೆ ಕಾಣುತ್ತದೆ. ಇಲ್ಲಿ ಡೋಣಿ ನದಿ ಪ್ರವಾಹದಿಂದ ಎಷ್ಟೊಂದು ನಷ್ಟವಾಗಿದೆ. ಬ.ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ ತಾಲೂಕುಗಳ ನದಿ ತೀರದ ಜಮೀನುಗಳಿಗೆ ನೀರು ಹೊಕ್ಕು ಬೆಳೆ ಹಾನಿ ಜೊತೆಗೆ ಜೀವ ಹಾನಿಯೂ ಆಗಿದೆ. ಸಚಿವ ಎಂ.ಬಿ.ಪಾಟೀಲರು ಬೆಳೆ ಹಾನಿ ಬಗ್ಗೆ ಮಾತ್ರ ಮಾತನಾಡಿದ್ದು, ಜೀವ ಹಾನಿ ಆಗಿವೆಂದು ಹೇಳುತ್ತಾರೆ. ಈ ವಿಷಯ ಅಧಿಕಾರಿಗಳೇ ಮುಚ್ಚಿಹಾಕುತ್ತಿದ್ದಾರೋ ಅಥವಾ ಸಚಿವರು ಗೊತ್ತಿದ್ದರೂ ನಟನೆ ಮಾಡುತ್ತಾರೋ ಗೊತ್ತಿಲ್ಲವೆಂದರು.ಯುವಕನ ಜೀವ ಹಾನಿಯ ಬಗ್ಗೆ ತಿಳಿದು ಕೂಡಲೇ ಆ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡುವ ಕೆಲಸ ಮಾಡಬೇಕೆಂದು ಮಾಜಿ ಶಾಸಕ ನಡಹಳ್ಳಿ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಜಿಲ್ಲೆಯನ್ನು ಸುತ್ತಾಡಲಿ. ಮಂತ್ರಿಗಳು ಹೇಳಿದ ಕಡೆ ಹೋಗುತ್ತಾರೆ. ಇಲ್ಲಿ ಜೀವ ಹಾನಿಯಾದರೂ ಭೇಟಿ ನೀಡಿಲ್ಲ. ಆತನನ್ನು ಹುಡುಕಿಸುವ ಪ್ರಯತ್ನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾಗಬೇನಾಳದಲ್ಲಿ ಕುರಿದೊಡ್ಡೆಯಲ್ಲಿ ತೋಳ ಹೊಕ್ಕು ೧೪ ಕುರಿಗಳು ಬಲಿಯಾಗಿವೆ. ಒಂದು ತಿಂಗಳು ಕಳೆದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಈ ಕಾಂಗ್ರೆಸ್‌ ಸರ್ಕಾರ ರೈತರು, ಬಡವರ ಪಾಲಿಗೆ ಸತ್ತಿದೆ. ಉಸ್ತುವಾರಿ ಮಂತ್ರಿಗಳು ಮತ್ತು ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟದಿಂದ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಮಯದಲ್ಲಿ ಮುಖಂಡರಾದ ಸೋಮನಗೌಡ ಕವಡಿಮಟ್ಟಿ, ಶಿವಶಂಕರ ಹಿರೇಮಠ, ಒಳಗೊಂಡು ವಡವಡಗಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.