ಸಾರಾಂಶ
ರಾಜ್ಯದಲ್ಲಿ ಅಪಘಾತಗಳಲ್ಲಿ ಸಾವು-ನೋವಿನ ಪ್ರಮಾಣ ತಗ್ಗಿಸಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರನ್ನು ಅಭ್ಯರ್ಥಿಗಳಿಲ್ಲದೆ ಖಾಲಿಯಾಗಿರುವ ಪೊಲೀಸ್ ತರಬೇತಿ ವಿಭಾಗದ ಮುಖ್ಯಸ್ಥರಾಗಿ ನೇಮಿಸಿದ ಸರ್ಕಾರದ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಅಪಘಾತಗಳಲ್ಲಿ ಸಾವು-ನೋವಿನ ಪ್ರಮಾಣ ತಗ್ಗಿಸಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರನ್ನು ಅಭ್ಯರ್ಥಿಗಳಿಲ್ಲದೆ ಖಾಲಿಯಾಗಿರುವ ಪೊಲೀಸ್ ತರಬೇತಿ ವಿಭಾಗದ ಮುಖ್ಯಸ್ಥರಾಗಿ ನೇಮಿಸಿದ ಸರ್ಕಾರದ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿವೆ.ಕಳೆದ 3 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಡೆಯದ ಪರಿಣಾಮ ರಾಜ್ಯದ ಎಲ್ಲ ಪೊಲೀಸ್ ತರಬೇತಿ ಕೇಂದ್ರಗಳು ಅಭ್ಯರ್ಥಿಗಳಿಲ್ಲದೆ ಭಣಗುಟ್ಟುತ್ತಿವೆ. ಇದರಿಂದ ತರಬೇತಿ ಕೇಂದ್ರಗಳ ಅಧಿಕಾರಿ-ಸಿಬ್ಬಂದಿ ಕೆಲಸವಿಲ್ಲದೆ ಕಾಲ ಕಳೆಯಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ತರಬೇತಿ ವಿಭಾಗದ ಮುಖ್ಯಸ್ಥ ಹುದ್ದೆಯನ್ನು ಮಹತ್ವದ ಹುದ್ದೆ ಎಂದು ಹೇಳಿ ಅಲೋಕ್ ಕುಮಾರ್ ಅವರನ್ನು ದಿಢೀರನೇ ನಿಯೋಜಿಸಿದ್ದ ಔಚಿತ್ಯವೇನು ಎಂಬ ಪ್ರಶ್ನೆಗಳು ಮೂಡಿವೆ.
ತರಬೇತಿ ಜತೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪ್ರಭಾರ ಹೊಣೆಗಾರಿಕೆಯನ್ನು ಅಲೋಕ್ ಕುಮಾರ್ ರವರಿಗೆ ಸರ್ಕಾರ ನೀಡಿತ್ತು. ಹೀಗಾಗಿ ತರಬೇತಿ ವಿಭಾಗದಲ್ಲಿ ಕಾರ್ಯದೊತ್ತಡ ಕಡಿಮೆ ಇದ್ದ ಕಾರಣ ರಸ್ತೆ ಸುರಕ್ಷತೆ ಕಡೆ ಅವರು ಹೆಚ್ಚಿನ ಗಮನ ಹರಿಸಿದ್ದರು. ಈಗ ತರಬೇತಿ ವಿಭಾಗದ ಮುಖ್ಯಸ್ಥೆ ಹುದ್ದೆಯಲ್ಲಿ ಮಾತ್ರ ಅವರು ಮುಂದುವರೆದಿದ್ದಾರೆ.ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಹುದ್ದೆಯಲ್ಲಿದ್ದಾಗ ಅಲೋಕ್ ಕುಮಾರ್ ಅವರು, ರಾಜ್ಯದಲ್ಲಿ ಅಪಘಾತ ಪ್ರಮಾಣಗಳ ಇಳಿಕೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಜನರೊಂದಿಗೆ ನಿಕಟ ಸಂಪರ್ಕವನ್ನು ಅವರು ಹೊಂದಿದ್ದರು. ಈ ಕ್ರಮಗಳ ಪರಿಣಾಮ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಸೇರಿ ರಾಜ್ಯದ ಬಹುತೇಕ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಿದ್ದು ಅಂಕಿ ಅಂಶಗಳೇ ಹೇಳಿದ್ದವು.