ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ತನ್ನ ನಿರ್ಧಾರ ಬದಲಿಸಲೇಬೇಕು. ಈ ನಿಟ್ಟಿನಲ್ಲಿ ಚಳುವಳಿ ತೀವ್ರಗೊಳ್ಳಬೇಕು. ಸಮಾಜವನ್ನು ಒಡೆಯುವ ಜಾತಿವಾದಿ, ಕೋಮುವಾದಿ ದಾಳಿಗಳಿಂದ ಸಮಾಜ ರಕ್ಷಣೆ ಶಿಕ್ಷಣದಿಂದ ಮಾತ್ರ ಸಾಧ್ಯ. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಶಿಕ್ಷಣದ ಉಳಿವು. ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಾಹಿತಿ ಯಲ್ಲಪ್ಪ ಹಿಮ್ಮಡಿ ಹೇಳಿದರು.ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು ನಡೆಯುತ್ತಿರುವ ಹೋರಾಟದ ಭಾಗವಾಗಿ ಭಾನುವಾರ ಎಐಡಿಎಸ್ಓ ನೇತೃತ್ವದಲ್ಲಿ ಪೋಷಕರ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಸ್ತುತವಿರುವ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ನೀಡಿ ಬಲಪಡಿಸುವುದರ ಬದಲಾಗಿ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ಧ ಪಾಲಕರು, ಗ್ರಾಮಸ್ಥರು, ಸಾಹಿತಿಗಳು, ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಧ್ಯಾಪಕ ಡಾ.ಎಚ್.ಬಿ.ಕೋಲ್ಕಾರ್ ಮಾತನಾಡಿ, ಖಾಸಗಿ ಸಂಸ್ಥೆಗಳನ್ನು ಬಲಪಡಿಸುವ ತಂತ್ರವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಬಂಡವಾಳಶಾಹಿಗಳೊಂದಿಗೆ ಆಳ್ವಿಕರು ರಾಜಿ ಮಾಡಿಕೊಂಡಿದ್ದಾರೆ. ಖಾಸಗೀಕರಣಕ್ಕೆ ಒತ್ತು ನೀಡಿ ಬಡವರ ಬದುಕನ್ನು ದುಸ್ತರಗೊಳಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವುದು ಅಗತ್ಯ. ಈ ಚಳುವಳಿಯನ್ನು ಮುನ್ನಡೆಸೋಣ ಎಂದು ಹೇಳಿದರು.ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್‌ನ ₹ 2500 ಕೋಟಿ ಸಾಲದ ಹಿಂದೆ ಬಿದ್ದಿರುವ ಸರ್ಕಾರ ಶತಾಯಗತಾಯ ಶಾಲೆಗಳನ್ನು ಮುಚ್ಚಲು ಹವಣಿಸುತ್ತಿದೆ. ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತ, ಸರ್ಕಾರಿ ಶಾಲೆ ಮುಚ್ಚಲು ಪಿತೂರಿ ನಡೆಸಿದ್ದಾರೆ. ಗಡಿನಾಡು ಬೆಳಗಾವಿ ಸಾಂಸ್ಕೃತಿಕವಾಗಿ ಸೂಕ್ಷ್ಮ ಪ್ರದೇಶ. ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ. ದಂಗೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕರವೇಯ ಮಹದೇವ ತಳವಾರ ಮಾತನಾಡಿ, ಕಳೆದ 10 ವರ್ಷದಲ್ಲಿ ದೇಶದಲ್ಲಿ 93000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದರೆ ಬಿಜೆಪಿ ರಾಜ್ಯಗಳಲ್ಲಿ ಶಾಲೆ ಮುಚ್ಚಿರುವ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ಸೇರಿ ಎಲ್ಲ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿವೆ ಎಂದು ಕಿಡಿಕಾರಿದರು.ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯಚಂದ್ರ ಮಾತನಾಡಿ, ಕರ್ನಾಟಕದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ 40 ಸಾವಿರ ಶಾಲೆಗಳನ್ನು ಮುಚ್ಚಲಾಗುತ್ತಿದ್ದರೆ ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.ಈ ವೇಳೆ ಮಲ್ಲೇಶ ಚೌಗಲೆ, ಮನೋಹರ್ ಹುಂಡ್ರೆ, ಸಂಜೀವ ಡೊಂಗರಗಾವಿ, ಗಣೇಶ ಇಳಿಗೇರ, ರಾಜು ಗಾಣಗಿ, ಗೀತಾ ರಾಯಗೋಳ, ಮಹಾಂತೇಶ ರಣಗಟ್ಟಿಮಠ, ವಾಜಿದ ಹಿರೇಕೋಡಿ, ಮಹಾಂತೇಶ ಬಿಳೂರ ಸೇರಿ ಹಲವರು ಇದ್ದರು.