ದೇವರ ಕಾನು ರಕ್ಷಣೆಗೆ ಸರ್ಕಾರ ಮುಂದಾಗಬೇಕು

| Published : Nov 17 2024, 01:17 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯ 60 ಹಳ್ಳಿಗಳಲ್ಲಿ ದೇವರ ಕಾನು ಸಂರಕ್ಷಣಾ ಯೋಜನೆ ಜಾರಿ ಮಾಡಲು ಜೀವ ವೈವಿಧ್ಯ ಮಂಡಳಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಸರ್ಕಾರ ಕೂಡಲೇ ಅನುಮೋದಿಸುವ ಮೂಲಕ ಕಾಡು ರಕ್ಷಣೆ ಮುಂದಾಗಬೇಕು ಎಂದು ಜೀವ ವೈವಿದ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಶಿವಮೊಗ್ಗ ಜಿಲ್ಲೆಯ 60 ಹಳ್ಳಿಗಳಲ್ಲಿ ದೇವರ ಕಾನು ಸಂರಕ್ಷಣಾ ಯೋಜನೆ ಜಾರಿ ಮಾಡಲು ಜೀವ ವೈವಿಧ್ಯ ಮಂಡಳಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಸರ್ಕಾರ ಕೂಡಲೇ ಅನುಮೋದಿಸುವ ಮೂಲಕ ಕಾಡು ರಕ್ಷಣೆ ಮುಂದಾಗಬೇಕು ಎಂದು ಜೀವ ವೈವಿದ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು.ತಾ.ಪಂ. ಸೊರಬ, ಜೀವ ವೈವಿಧ್ಯ ಸಮಿತಿ, ವೃಕ್ಷಲಕ್ಷ ಆಂದೋಲನ, ಪರಿಸರ ಜಾಗೃತಿ ಟ್ರಸ್ಟ್, ಸೊರಬ ಸಂಘಟನೆಗಳ ಪರವಾಗಿ ಬೆಂಗಳೂರಿನ ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಜಗತ್‌ರಾಮ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಜಿಲ್ಲೆಯ 90 ಗ್ರಾಮಗಳ ದೇವರ ಕಾನು ಸಾಗರ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ. ಹಾಗಾಗಿ ಇಲಾಖೆ ಮೂಲಕ ಈ ಕಾನು ಅಭಿವೃದ್ಧಿಗೆ ಮುಂದಾಗಬೇಕು. ಅರಣ್ಯ ಇಲಾಖೆ ₹5 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿದರು.ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಮಿರಿಸ್ಟಿಕಾಸ್ವಾಂಪ್ಸ (ರಾಮಪತ್ರೆ ಜಡ್ಡಿಗಳು) ವಿನಾಶದ ಅಂಚಿಗೆ ಬಂದಿವೆ. ಸುಮಾರು 110 ಸ್ಥಳಗಳಲ್ಲಿ ಒಟ್ಟು 2100 ಎಕರೆ ಪ್ರದೇಶದಲ್ಲಿ ಮಿರಿಸ್ಟಿಕಾಸ್ವಾಂಪ್ಸಗಳಿವೆ. ಇವುಗಳ ಬಗ್ಗೆ ಪಶ್ಚಿಮ ಘಟ್ಟದ ಅರಣ್ಯ ವಿಭಾಗಗಳ ಕಚೇರಿಗಳಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಅಧ್ಯಯನಗಳೂ ನಡೆದಿವೆ. ಇವುಗಳಿಗೆ ಸಂಪೂರ್ಣ ರಕ್ಷಣೆ ಬೇಲಿ, ಕಂದಕ, ನಾಮಫಲಕ ಅಳವಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು. ಜೀವ ವೈವಿಧ್ಯ ಮಂಡಳಿ ಈ ಎಲ್ಲ ಮಿರಿಸ್ಟಿಕಾಸ್ವಾಂಪ್ಸ ಸ್ಥಳಗಳನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕೋಲಾರದ ಅಂತರಗಂಗೆ ಬೆಟ್ಟಕ್ಕೆ ಪಾರಂಪರಿಕ ಜೀವಜಲತಾಣ ಎಂದು ಮಾನ್ಯತೆ ನೀಡಬೇಕು. ಗೋಗಿ ಗ್ರಾಮ ಯಾದಗಿರಿ ಜಿಲ್ಲೆ ಷಹಾಪುರ ತಾಲೂಕಿನ ಯುರೇನಿಯಂ ಗಣಿಗಾರಿಕೆಯಿಂದ ಕೆರೆಗಳು ವಿಷಕಾರಿ ಆಗಿದ್ದವು. 10 ವರ್ಷ ಹಿಂದೆ ಜನತೆಯ ಪ್ರತಿಭಟನೆಯ ನಂತರ ಗಣಿಗಾರಿಕೆ ಸ್ಥಗಿತಗೊಂಡಿದೆ. ಆದರೆ ಯುರೇನಿಯಂ ಗಣಿಗಾರಿಕೆ ಮತ್ತೆ ಪ್ರಾರಂಭಿಸುವ ಸಿದ್ಧತೆ ನಡೆದಿದೆ. ಈ ಬಗ್ಗೆ ಜೀವ ವೈವಿಧ್ಯ ಮಂಡಳಿ ತಂಡ ಸ್ಥಳಕ್ಕೆ ಭೇಟಿ ನೀಡಿ ತಜ್ಞ ವರದಿಯನ್ನು ಪರಿಸರ ಇಲಾಖೆಗೆ ಸಲ್ಲಿಸಬೇಕು. ಯಲ್ಲಾಪುರ ತಾಲೂಕಿನಲ್ಲಿ ತಾಲೂಕು ಪಂಚಾಯತಿ ಬಿ.ಎಮ್.ಸಿಯಿಂದ 4 ಜೀವ ವೈವಿಧ್ಯ ತಾಣ ಗುರುತಿಸಲಾಗಿದೆ. ಇವುಗಳಿಗೆ ಜೀವ ವೈವಿಧ್ಯ ಮಂಡಳಿ ಮಾನ್ಯತೆ ನೀಡಬೇಕು ಎಂದರು.ಡೀಮ್ಡ್ ಅರಣ್ಯಗಳ ವ್ಯಾಪ್ತಿಯನ್ನು ಈಗಾಗಲೇ 10 ಲಕ್ಷ ಹೆಕ್ಟೇರ್‌ನಿಂದ 3.30 ಲಕ್ಷ ಹೆಕ್ಟೇರ್‌ಗೆ ಸರ್ಕಾರ ಇಳಿಸಿದೆ. ಯಾವುದೇ ಕಾರಣಕ್ಕೆ ಅರಣ್ಯ ಇಲಾಖೆ ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿ ಮರಗಳ ಕಡಿತಲೆ ಮಾಡಬಾರದು. ಮಲೆನಾಡಿನ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯ ಕ್ಷೇತ್ರಗಳಲ್ಲಿ ಜೀವ ವೈವಿಧ್ಯತೆ ಕಾಪಾಡಲು ಮಲೆನಾಡು ಸುಸ್ಥಿರ ಅಭಿವೃದ್ಧಿ ಅಜೆಂಡಾ ಜಾರಿ ಮಾಡಬೇಕು. ಈ ಸುಸ್ಥಿರ ಅಭಿವೃದ್ಧಿ ಅಜೆಂಡಾ ಜಾರಿಗೆ ರಾಜ್ಯ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕು. ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರವನ್ನು ಕ್ರಿಯಾಶೀಲಗೊಳಿಸಬೇಕು. ಜೌಗು ಭೂಮಿ, ಅಳಿವೆಗಳು, ಚಿಕ್ಕ ಚಿಕ್ಕ ಲಕ್ಷಾಂತರ ಕೆರೆಗಳ ರಕ್ಷಣೆಗೆ ಪರಿಸರ ಇಲಾಖೆ ಮುಂದಾಗಬೇಕು. ಜೀವ ವೈವಿಧ್ಯ ಮಂಡಳಿ ಈ ಬಗ್ಗೆ ತಜ್ಞ ವರದಿ ನೀಡಬೇಕು ಎಂದು ಒತ್ತಾಯಿದರು.ಈ ಸಂದರ್ಭದಲ್ಲಿ ಪರಿಸರ ತಜ್ಞ ಕೇಶವ ಕೊರ್ಸೆ, ಮಂಡಳಿಯ ಸದಸ್ಯ ಕೆ ವೆಂಕಟೇಶ್ ಸಾಗರ, ಜೀವ ವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ವೃಕ್ಷಲಕ್ಷ ಆಂದೋಲನ ಸಂಚಾಲಕ ಗಣಪತಿ ಕೆ. ಬಿಸಲಕೊಪ್ಪ, ಯಲ್ಲಾಪುರ ಬಿಎಂಸಿ ಸದಸ್ಯರಾದ ನರಸಿಂಹ ಸಾತೊಡ್ಡಿ, ಕೆ.ಎಸ್. ಭಟ್ಟ, ತಿಮ್ಮಣ್ಣ ತೊಂಡೆಕೆರೆ ಸೇರಿದಂತೆ ಮಂಡಳಿ ಅಧಿಕಾರಿಗಳು ಹಾಜರಿದ್ದರು.