ಬರದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಿದೆ ಸರ್ಕಾರ

| Published : Feb 15 2024, 01:31 AM IST

ಬರದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಿದೆ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.16ರಂದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ ಮೇಲೆ ಜಿಲ್ಲೆಯ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಫೆ.16ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ ಮೇಲೆ ನಿರೀಕ್ಷೆ

ರೈತರಿಗೆ ನೆರವಾಗುವ ಯೋಜನೆ ಜಾರಿಯಾಗಬೇಕೆಂಬ ಒತ್ತಾಯನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಬರಗಾಲದಿಂದ ಈ ಸಲ ರೈತರು ಬೆಂದು ಬಸವಳಿದಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ಫೆ.16ರಂದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ ಮೇಲೆ ಜಿಲ್ಲೆಯ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕೃಷಿ ಪ್ರಧಾನ ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ವೈಫಲ್ಯದಿಂದ ರೈತರು ಬೆಳೆಯಿಲ್ಲದೇ ನಷ್ಟ ಅನುಭವಿಸಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ₹2 ಸಾವಿರ ಜಮೆ ಮಾಡಿದ್ದು ಬಿಟ್ಟರೆ ಬೇರೆ ಯಾವ ರೀತಿಯ ನೆರವೂ ಸಿಕ್ಕಿಲ್ಲ. ಬೆಳೆ ಹಾನಿಗೆ ಹೆಚ್ಚಿನ ಪರಿಹಾರ, ಸಾಲ ಮನ್ನಾದಂತಹ ನಿರ್ಧಾರ ಪ್ರಕಟಿಸುವ ಮೂಲಕ ಅನ್ನದಾತನ ಕೈಹಿಡಿಯುವ ಕೆಲಸ ಸರ್ಕಾರದಿಂದ ಆಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ಜತೆಗೆ, ನೀರಾವರಿ ಯೋಜನೆ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಕೆರೆ ತುಂಬಿಸುವ ಯೋಜನೆ ಸೇರಿದಂತೆ ಕೃಷಿಗೆ ಪೂರಕ ಯೋಜನೆ ಘೋಷಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ ಮೇಲೆ ರೈತರ ನಿರೀಕ್ಷೆ ಹೆಚ್ಚಿದೆ.

ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿ:

ಜಿಲ್ಲೆಯ ಪ್ರವಾಸಿ ತಾಣಗಳಾದ ಭಕ್ತಶ್ರೇಷ್ಠ ಕನಕದಾಸರ ಕಾಗಿನೆಲೆಯನ್ನು ಕೂಡಲ ಸಂಗಮದ ಮಾದರಿಯಲ್ಲಿ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ಕಾರ್ಯ ನಡೆದಿದೆ. ಇದರ ಜೊತೆಗೆ ಕನಕದಾಸರ ಜನ್ಮಭೂಮಿ ಬಾಡ, ಶಿಶುನಾಳ ಶರೀಫ ಗಿರಿ, ರಾಣಿಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರದ ನವಿಲುಧಾಮ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಸ್ಥಳಗಳಲ್ಲಿ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕಿದೆ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಿದೆ.

ಹಾವೇರಿ ವಿವಿ, ಕಜಾವಿವಿಗೆ ಬೇಕಿದೆ ಸಂಪನ್ಮೂಲ:

ಕಳೆದ ವರ್ಷ ಆರಂಭವಾಗಿರುವ ನೂತನ ಹಾವೇರಿ ವಿಶ್ವವಿದ್ಯಾಲಯ ಆರಂಭಿಕವಾಗಿ ಘೋಷಿಸಿರುವ ₹೨ ಕೋಟಿ ಅನುದಾನ ಬಿಟ್ಟರೆ ಸಂಪನ್ಮೂಲ ಕೊರತೆಯಿಂದ ಸೊರಗುತ್ತಿದೆ. ಇನ್ನು ೨೦೧೧ರಲ್ಲಿ ಶಿಗ್ಗಾಂವಿಯ ಗೊಟಗೋಡಿಯಲ್ಲಿ ಆರಂಭವಾದ ಜಾನಪದ ವಿಶ್ವವಿದ್ಯಾಲಯ ವಿಶ್ವದಲ್ಲಿಯೇ ಮೊಟ್ಟ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಹಿರಿಮೆ ಹೊಂದಿದೆ. ಈ ವಿಶ್ವವಿದ್ಯಾಲಯ ಮೂಲಕ ನಮ್ಮ ಜನಪದೀಯರ ಜೀವನ, ಅಕ್ಷರ ದಾಖಲೆಗೆ ಮತ್ತು ಕಲೆಯ ಪುನರುತ್ಥಾನ, ರಂಗೋಲಿ, ಕಸೂತಿ, ನಾಟಿ ವೈದ್ಯ ಪದ್ಧತಿಯಂತಹ ಪರಂಪರಾಗತ ಕಲೆಗಳು ಮರುಜೀವ ನೀಡುವ ಕೆಲಸ ಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಸೊರಗುತ್ತಿದೆ. ಸರ್ಕಾರ ವಿಶೇಷ ಪ್ಯಾಕೇಜ್ ನೀಡಿ ಜಾನಪದ ವಿಶ್ವವಿದ್ಯಾಲಯ ಹಾಗೂ ಹಾವೇರಿ ವಿವಿ ಅಭಿವೃದ್ಧಿ ಕ್ರಮ ಕೈಗೊಳ್ಳಬೇಕಿದೆ.

ಹೈಟೆಕ್ ಆಸ್ಪತ್ರೆಗಳ ನಿರ್ಮಾಣ:

ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವತ್ತ ಆದ್ಯತೆ ನೀಡಬೇಕಿದೆ. ಜಿಲ್ಲಾ ಕೇಂದ್ರವಾಗಿ ಎರಡುವರೆ ದಶಕ ಕಳೆದಿದ್ದರೂ ತರ್ತು ಸಂದರ್ಭದಲ್ಲಿ ರೋಗಿಗಳನ್ನು ಹುಬ್ಬಳ್ಳಿ, ದಾವಣಗೆರೆಗೆ ಕರೆದುಕೊಂಡು ಹೋಗುವ ಸ್ಥಿತಿ ಇದೆ. ಈ ಹಿನ್ನೆಲೆ ಜಿಲ್ಲೆ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಹೈಟೆಕ್ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಬೇಕಿದೆ.

ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿ:

ಜಿಲ್ಲೆಯಲ್ಲಿ ಮಂಜೂರಾಗಿ ಶುರುವಾಗಿದ್ದ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಮಂದಗತಿಯಲ್ಲಿ ಸಾಗಿವೆ. ಹಿರೇಕೆರೂರ ತಾಲೂಕಿನ ಬಾಳಂಬೀಡ ಏತ ನೀರಾವರಿ ಯೋಜನೆ, ರಾಣಿಬೆನ್ನೂರ ತಾಲೂಕಿನ ಮೆಡ್ಲೇರಿ ಮತ್ತು ಇತರೆ ೧೯ ಕೆರೆ ತುಂಬಿಸುವುದು, ಬುಳ್ಳಾಪುರ-ಹಾಡೆ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ವಿವಿಧ ನೀರಾವರಿ ಯೋಜನೆ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಅವು ತ್ವರಿತವಾಗಿ ಪೂರ್ಣಗೊಳ್ಳಬೇಕಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆಯಿದೆ.

ರಟ್ಟಿಹಳ್ಳಿ ಅಭಿವೃದ್ಧಿಗೆ ಬೇಕಿದೆ ಟಾನಿಕ್:

ಜಿಲ್ಲೆಯಲ್ಲಿ ನೂತನ ತಾಲೂಕಾಗಿ ರಚನೆಗೊಂಡ ರಟ್ಟಿಹಳ್ಳಿ ನಾಲ್ಕು ವರ್ಷ ಕಳೆದಿದ್ದು, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಗೊಂಡಿಲ್ಲ. ಇದುವರೆಗೆ ಬೆರಳಣಿಕೆಯಷ್ಟೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ತುಂಗಾ ಮೇಲ್ದಂಡೆ ಯೋಜನೆಯ ಕಚೇರಿಯಲ್ಲಿ ತಾಲೂಕಾ ಕೇಂದ್ರ ಕಾರ್ಯಾರಂಭಗೊಂಡಿದೆ. ಕೆಲವು ಇಲಾಖೆಗಳಿಗೆ ಸಿಬ್ಬಂದಿ ನಿಯೋಜನೆ ಮಾಡದ ಹಿನ್ನೆಲೆ ಕಚೇರಿಗಳು ಆರಂಭಗೊಂಡಿಲ್ಲ. ಇನ್ನೂ ಕೂಡ ರಟ್ಟಿಹಳ್ಳಿ ಜನರು ಸರ್ಕಾರಿ ಸೇವೆ ಪಡೆಯಲು ಹಿರೇಕೆರೂರಿಗೆ ಅಲೆದಾಡುವಂತ ಸ್ಥಿತಿ ಇದೆ. ಹೀಗಾಗಿ ನೂತನ ರಟ್ಟಿಹಳ್ಳಿ ತಾಲೂಕು ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಟಾನಿಕ್ ನೀಡಬೇಕಾದ ಅಗತ್ಯವಿದೆ.

ತುಂಗಭದ್ರಾ ನದಿಗೆ ಬೇಕು ಬ್ಯಾರೇಜ್:

ಜಿಲ್ಲಾ ಕೇಂದ್ರವಾದ ಹಾವೇರಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಹಿನ್ನೆಲೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಕಂಚಾರಗಟ್ಟಿ ಬಳಿಯಲ್ಲಿರುವ ಕುಡಿಯುವ ನೀರಿನ ಜಾಕವೆಲ್ ಬಳಿಯಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣದ ಅಗತ್ಯವಿದೆ. ಇಲ್ಲಿ ಬ್ಯಾರೇಜ್ ನಿರ್ಮಿಸಿದರೆ ಬೇಸಿಗೆ ದಿನಗಳಲ್ಲಿ ನೀರಿನ ಬವಣೆಗೆ ಮುಕ್ತಿ ನೀಡಬಹುದಾಗಿದೆ.

ಇದಲ್ಲದೇ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೂಲಸೌಕರ್ಯ ಕಲ್ಪಿಸಬೇಕಿದೆ. ಸ್ಪೈಸ್ ಪಾರ್ಕ್ ಸ್ಥಾಪನೆ, ಬ್ಯಾಡಗಿ ಮೆಣಸಿನ ತಳಿ ಸಂವರ್ಧನೆ, ಮೌಲ್ಯವರ್ಧನೆಗೆ ಕ್ರಮ ಕೈಗೊಳ್ಳಬೇಕಿದೆ.