ಕನಕಗಿರಿ ತಾಲೂಕಿನ ಹುಲಿಹೈದರ ಹೋಬಳಿ ವ್ಯಾಪ್ತಿಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಬರ ವೀಕ್ಷಣೆ ನಡೆಸಿದರು. ಬರ ಇರುವ ತಾಲೂಕುಗಳನ್ನು ತಕ್ಷಣವೇ ಘೋಷಿಸಿದ ನಂತರ ಸಮೀಕ್ಷೆ ಕಾರ್ಯ ಆರಂಭಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕನಕಗಿರಿ: ರಾಜ್ಯಾದ್ಯಂತ ಆವರಿಸಿರುವ ಬರ ವೀಕ್ಷಣೆಗೆ ಬಿಜೆಪಿ ಆರು ತಂಡಗಳ ಮೂಲಕ ಕಾರ್ಯ ಪ್ರವೃತ್ತರಾಗಿದ್ದು, ಕಲ್ಯಾಣ ಕರ್ನಾಟಕದ ಬಹುತೇಕ ತಾಲೂಕುಗಳಲ್ಲಿ ತೀವ್ರ ಬರ ಆವರಿಸಿದ್ದು, ಕೂಡಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಿ ಪರಿಹಾರ ನೀಡಲು ಸರ್ಕಾರ ಕ್ರಮ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದರು.
ಅವರು ಸೋಮವಾರ ಕನಕಗಿರಿ ತಾಲೂಕಿನ ಹುಲಿಹೈದರ ಹೋಬಳಿ ವ್ಯಾಪ್ತಿಯ ಬರ ವೀಕ್ಷಿಸಿ ಸುದ್ದಿಗಾರರ ಜತೆ ಮಾತನಾಡಿದರು.ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಇಲ್ಲಿ ತೀವ್ರ ಬರ ಆವರಿಸಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೊಗರಿ ಬೆಳೆದ ರೈತರ ಸ್ಥಿತಿ ಹೇಳತೀರದಾಗಿದೆ. ತೊಗರಿ ಬದಲಾಗಿ ಪರ್ಯಾಯ ಬೆಳೆ ಬೆಳೆಯಲು ಅವಕಾಶ ಇಲ್ಲವಾಗಿದೆ. ಬರಕ್ಕೆ ಸರ್ಕಾರ ಕಾರಣವಲ್ಲ. ಆದರೆ ಸರ್ಕಾರ ಮಾಡಬೇಕಾದ ಕೆಲಸ ತೀವ್ರಗತಿಯಲ್ಲಿ ಆಗಬೇಕು. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ಬರ ಇರುವ ತಾಲೂಕುಗಳನ್ನು ತಕ್ಷಣವೇ ಘೋಷಿಸಿದ ನಂತರ ಸಮೀಕ್ಷೆ ಕಾರ್ಯ ಆರಂಭಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿಯೇ ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿರುವುದು ನೋವಿನ ಸಂಗತಿಯಾಗಿದ್ದು, ಇದು ಮೊದಲ ಸ್ಥಾನಕ್ಕೆ ಬಾರದಿರಲಿ. ಬಿತ್ತನೆ ಮಾಡಿದ ಬೆಳೆ ಪರಿಶೀಲಿಸಿ, ಸಮೀಕ್ಷೆ ನಡೆಸುವ ಮೂಲಕ ಪರಿಹಾರ ನೀಡುವಂತಾಗಬೇಕು. ಇನ್ನೂ ರೈತರಿಗೆ ಹೊಸ ಬೆಳೆ ಸಾಲ ನೀಡುತ್ತಿಲ್ಲ. ಹೊಸದಾಗಿ ಸಾಲ ನೀಡಲು ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು. ಎಕರೆಗೆ ₹30ರಿಂದ ₹40 ಸಾವಿರ ಖರ್ಚು ಮಾಡಿರುವ ರೈತರಿಗೆ ಮರು ಬಿತ್ತನೆಗೆ ಸರ್ಕಾರ ಬೀಜ, ರಸಗೊಬ್ಬರ ಉಚಿತವಾಗಿ ನೀಡಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್ ಹಾಗೂ ಗೋಶಾಲೆ ಆರಂಭಿಸಬೇಕು, ಬರ ನಿರ್ವಹಣೆಗೆ ಸರ್ಕಾರ ತಾಲೂಕುವಾರು ಟಾಸ್ಕ್‌ಫೋರ್ಸ್ ಸಮಿತಿ ರಚಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರಲ್ಲದೇ, ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ನೀರಿದೆ. ರಾಯಚೂರು, ಕೊಪ್ಪಳದ ರೈತರಿಗೆ ನೀರಿನ ಅವಶ್ಯಕತೆ ಇದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 27 ಟಿಎಂಸಿ ಇದ್ದಾಗಲೂ ರೈತರಿಗೆ ನೀರು ಕೊಡಲಾಗಿತ್ತು. ಮುಖ್ಯಮಂತ್ರಿಗಳು ಬಿಡದಿ ಟೌನ್‌ಶಿಪ್ ನೀಡುವ ಆದ್ಯತೆ ಬರ ಪರಿಹಾರಕ್ಕೆ ಕೊಡಬೇಕು ಎಂದು ಹೇಳಿದರು.ಕೆಪಿಎಸ್‌ಸಿ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಹಾಗೂ ಒಎಂಆರ್ ಶೀಟ್ ತಿದ್ದುಪಡಿಯಾಗಿರುವ ಬಗ್ಗೆ ಗಂಭೀರವಾಗಿ ಆರೋಪಗಳಿವೆ. ತಮ್ಮದಲ್ಲದ ತಪ್ಪಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ, ಕರ್ನಾಟಕದಲ್ಲಿಯೂ ಹಲವಾರು ಬಾರಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆ. ಇತ್ತೀಚೆಗೆ ಸಿದ್ದಾರ್ಥ ಲಾ ಕಾಲೇಜಿನಲ್ಲಿ ಉತ್ತರ ಪತ್ರಿಕೆಗಳನ್ನು ಬದಲು ಮಾಡಿರುವುದು ನಡೆದಿದ್ದು, ಇಲ್ಲಿ ಅಧಿಕಾರಿಗಳ ತಲೆದಂಡ ಸಾಕಾಗುವುದಿಲ್ಲ. ಸರ್ಕಾರ ಹೊಣೆ ಹೊರಬೇಕಾಗುತ್ತದೆ. ಕಾಂಗ್ರೆಸ್ ಕೇಂದ್ರದಲ್ಲಿರುವ ನಿಯಮವನ್ನು ರಾಜ್ಯಕ್ಕೂ ಅನ್ವಯ ಮಾಡಬೇಕು. ಇಲ್ಲವಾದರೆ ಎರಡು ನಾಲಿಗೆಯವರಾಗುತ್ತೀರಿ ಎಂದು ಕೈ ನಾಯಕರ ವಿರುದ್ಧ ಹರಿಹಾಯ್ದರು.
ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಿರಿಯ ಮುಖಂಡ ಬಸವರಾಜ ಕ್ಯಾವಟರ್, ಅಮರನಾಥ ಪಾಟೀಲ್, ನಾಗರಾಜ ಬಿಲ್ಗಾರ, ರಮೇಶ ನಾಡಿಗೇರ, ಮಹಾಂತೇಶ ಸಜ್ಜನ್, ಪ್ರಕಾಶ ಹಾದಿಮನಿ ಇದ್ದರು.ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಲಿ: ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಪರಿಹಾರದ ಹಣ ಬಿಡುಗಡೆಯಾಗಲಿದೆ. ಇದರಿಂದ ರೈತರಿಗೆ ಖರ್ಚು ಮಾಡಿದ ಹಣವೂ ಸಿಗುವುದಿಲ್ಲ. ಹೊಸ ಬೆಳೆ ಸಾಲವೂ ಸಿಗುತ್ತಿಲ್ಲ. ಇತ್ತ ಗ್ಯಾರಂಟಿ ಯೋಜನೆಗಳು ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ. ಬೆಳೆ ಬೆಳೆಯಲು ಲಕ್ಷಾಂತರ ರು. ಕಳೆದುಕೊಂಡು ಕೈ ಸುಟ್ಟುಕೊಂಡಿರುವ ರೈತರ ಸಾಲಮನ್ನಾ ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂದು ವಿಪ ಸದಸ್ಯ ಸಿ.ಟಿ. ರವಿ ಹೇಳಿದರು.
ಮುಲ್ಲಾನಿಗೆ ಬೈದಿರುವೆ, ಹೊರತು ಮುಸ್ಲಿಂ ಸಮಾಜಕ್ಕಲ್ಲ: ಸಿಟಿ ರವಿಈಚೆಗೆ ಮುಲ್ಲಾನ ಟೀಕಿಸಿದ್ದೇನೆಯೇ ಹೊರತು ಮುಸ್ಲಿಂ ಸಮಾಜವನ್ನಲ್ಲ. ಪೊಲೀಸರು ಸುಳ್ಳು ಕೇಸ್ ದಾಖಲಿಸಿಕೊಂಡು ನನ್ನನ್ನು ಬಂಧಿಸಲು ಬಂದಿದ್ದರು. ಅವರಿಗೆ ಕಾನೂನಿನ ಮೂಲಕ ಉತ್ತರ ಕೊಟ್ಟಿದ್ದು, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿದ್ದೇನೆ. ಮುಲ್ಲಾನಿಗೆ ಎದೆ ಸೀಳಿದ್ರೆ ಎರಡಕ್ಷರ ಇಲ್ಲ ಅಂತ ಬೈದಿದ್ದೇನೆ ಹೊರತು ಬೇರೆ ಪದ ಬಳಸಿಲ್ಲ. ನಾನು ಯಾವಾಗಲೂ ನೇರವಾಗಿ ಮಾತನಾಡುತ್ತೇನೆ. ಸತ್ಯವನ್ನೇ ಮಾತನಾಡುತ್ತೇನೆ. ಸತ್ಯ ಹೇಳಲು ಹಿಂಜರಿಯುವುದಿಲ್ಲ. ಈ ಎಲ್ಲ ಸಂಗತಿಗಳನ್ನು ನ್ಯಾಯಾಲಯದಲ್ಲಿ ಮಂಡಿಸುತ್ತೇನೆ ಎಂದರು.