ರಾಜ್ಯಪಾಲರಿಗೆ ವಿಶ್ವಾಸದ ಕೊರತೆ: ಪರಂ

| Published : Aug 24 2024, 01:26 AM IST

ಸಾರಾಂಶ

ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರಿಗೆ ವಿಶ್ವಾಸದ ಕೊರತೆ ಇದೆ. ಆದ್ದರಿಂದಲೇ 11 ಮಸೂದೆಗಳನ್ನು ವಾಪಸ್‌ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರಿಗೆ ವಿಶ್ವಾಸದ ಕೊರತೆ ಇದೆ. ಆದ್ದರಿಂದಲೇ 11 ಮಸೂದೆಗಳನ್ನು ವಾಪಸ್‌ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸ್ಪಷ್ಟೀಕರಣ ಕೇಳಿ ಒಂದೆರಡು ಮಸೂದೆಗಳನ್ನು ವಾಪಸ್‌ ಕಳುಹಿಸುತ್ತಿದ್ದರು. ಆದರೆ, ಈವರೆಗೆ ಸಾರಸಗಟಾಗಿ ಇಷ್ಟೊಂದು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಉದಾಹರಣೆಗಳಿರಲಿಲ್ಲ. 11 ಬಿಲ್‌ಗಳನ್ನು ವಾಪಸ್ ಕಳಿಸಿರುವುದು‌ ನೋಡಿದರೆ, ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸದ ಕೊರತೆ ಆಗಿದೆಯೆಂಬ ಸಂದೇಶ ಸಿಗುತ್ತಿದೆ ಎಂದರು.

ಬೇರೆ ರಾಜ್ಯಗಳ ರಾಜ್ಯಪಾಲರ ನಡತೆ ಮತ್ತು ವರ್ತನೆ ಬಗ್ಗೆ ಪ್ರಶ್ನೆಗಳು ಬಂದಿವೆ. ಈ ಬಗ್ಗೆ ಇಂಡಿಯಾ ಒಕ್ಕೂಟ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಗೊತ್ತಿಲ್ಲ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲರ‌ ನಡತೆ, ವರ್ತನೆ ಕುರಿತು ಧ್ವನಿ ಎದ್ದಿವೆ. ಈ ಬಗ್ಗೆ ಚರ್ಚೆ ಆಗುತ್ತದೆಯೇ ಏನೆಂಬುದು ಮಾಹಿತಿ ಇಲ್ಲ‌ ಎಂದು ಹೇಳಿದರು.ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು ಪಕ್ಷದ ರಾಷ್ಟ್ರೀಯ ವರಿಷ್ಟರು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರನ್ನು ಕರೆದಿದ್ದಾರೆ.‌ ಸಚಿವರುಗಳನ್ನು ಆಹ್ವಾನಿಸಿಲ್ಲ. ಕೆಲ ಸಚಿವರು ಸ್ವಯಂ ಪ್ರೇರಿತವಾಗಿ ಹೋಗುತ್ತಿದ್ದೇವೆ. ಇಲಾಖೆಗೆ ಸಂಬಂಧಿಸಿದ ಕೆಲಸಗಳಿದ್ದು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯವರನ್ನು ಭೇಟಿ ಮಾಡಬೇಕಿದೆ. ಹೈಕಮಾಂಡ್‌ ಸಿಎಂ, ಡಿಸಿಎಂ ಕುರಿತ ಅಜೆಂಡಾ ಏನಿದೆ ಗೊತ್ತಿಲ್ಲ. ಆದರೆ ಮುಡಾ ಬಗ್ಗೆ ವಿವರಣೆ ನೀಡಲು ಹೋಗುತ್ತಿಲ್ಲ ಎಂದರು.