ಸಾರಾಂಶ
ಕೊಳ್ಳೇಗಾಲ : 1983ರಲ್ಲಿ ಶಾಸಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದಿನಿಂದಲೂ ಸಹ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೆ ಕಳಂಕ ರಹಿತ ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆ. ಅಂತಹವರ ಬಗ್ಗೆ ರಾಜ್ಯದ ಜನತೆ ಹಾಗೂ ವಿಪಕ್ಷಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ವಾಸ್ತವ ಅರಿತುಕೊಳ್ಳಬೇಕಿದೆ ಎಂದು ಶಾಸಕ ಎ.ಆರ್.ಕೃಷ್ಣಮೂತಿ೯ ಹೇಳಿದರು.
ತಾಲೂಕಿನ ಟಗರಪುರದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕನಕ ಭವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದ ಅವರು, ಸಿದ್ದರಾಮಯ್ಯ ಅವರು ಬಡವರು, ಪರಿಶಿಷ್ಟ ಜನಾಂಗ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮಾಜಗಳ ಅಭಿವೃದ್ಧಿಗೆ ಸ್ಪಂದಿಸಿದವರು, ರಾಜ್ಯದ ಜನತೆಗೆ ಭಾಗ್ಯಗಳನ್ನು ಕರುಣಿಸಿದ ಹೆಗ್ಗಳಿಕೆ ಅವರದ್ದು. ಅಂತಹ ಧೀಮಂತ ನಾಯಕರ ಬಗ್ಗೆ ಹಸಿ ಸುಳ್ಳು ಹೇಳಿಕೊಂಡು ಮುಡಾ ಪ್ರಕರಣಲ್ಲಿ ಅವರ ವಿರುದ್ಧ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಈ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.
ಇದನ್ನು ವಿಪಕ್ಷಗಳು ಸೂಕ್ಷ್ಮವಾಗಿ ಪರಿಗಣಿಸಬೇಕಿತ್ತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ದಂಡ ಕಟ್ಟಿದ್ದ ವ್ಯಕ್ತಿಯ ದೂರನ್ನೆ ಆಧಾರವಾಗಿಟ್ಟುಕೊಂಡು ರಾಜ್ಯಪಾಲರು ರಾಜಕೀಯ ದುರುದ್ದೇಶದಿಂದಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ, ಇದರಿಂದ ಜನರಿಗೆ ತಪ್ಪು ಸಂದೇಶ ಸಾರಲಾಗುತ್ತಿದೆ. ಕಳೆದ 40 ವರ್ಷಗಳಲ್ಲಿ ಅವರು ಜನತೆಗೆ ಸಲ್ಲಿಸಿದ ಸೇವೆ ಅಮೂಲ್ಯವಾದುದು, ಅಂತಹವರ ಬಗ್ಗೆ ಲಘು ಹೇಳಿಕೆ ನೀಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ತಿಳಿಸಿದರು.
ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ರಾಜಕೀಯ ಪುನರ್ ಜನ್ಮ ನೀಡಿದ್ದು ಅವರೇ, ಪುನಃ 2023ರ ಚುನಾವಣೆಯಲ್ಲೂ ಟಿಕೆಟ್ ನೀಡಿ ಸ್ಪಂದಿಸಿದವರು. ಅವರ ಬಗ್ಗೆ ಇಂದು ಮಾದ್ಯಮಗಳಲ್ಲಿ ನಾನಾ ರೀತಿಯಲ್ಲಿ ಚರ್ಚಿಸಲಾಗುತ್ತಿದೆ. ವಿಪಕ್ಷಗಳು ವಾಸ್ತವ ಮರೆಮಾಚಿ ಲಘು ಪದಗಳಿಂದ ನಿಂದಿಸುತ್ತಿದ್ದಾರೆ. ಇಂತಹ ಬೆಳವಣಿಗೆ ಸರಿಯಾದುದಲ್ಲ ಎಂದು ಆಕ್ಷೇಪಿಸಿದರು. ಟಗರಪುರ ಗ್ರಾಪಂ ಅಧಕ್ಷ ಮಹದೇವಸ್ವಾಮಿ, ಮಾಲಂಗಿ ಮಹೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲೇಶ್, ಆಲಹಳ್ಳಿ ತೋಟೇಶ್ ಇದ್ದರು.