ಹಾರವಾಡದಲ್ಲಿ ಕಡಲ್ಕೊರೆತಕ್ಕೆ ಮನೆ, ತೆಂಗಿನ ಮರಗಳು ಸಮುದ್ರದ ಪಾಲು

| Published : Aug 24 2024, 01:26 AM IST

ಹಾರವಾಡದಲ್ಲಿ ಕಡಲ್ಕೊರೆತಕ್ಕೆ ಮನೆ, ತೆಂಗಿನ ಮರಗಳು ಸಮುದ್ರದ ಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ಕಡಲ ತಟಕ್ಕೆ ಹೊಂದಿಕೊಂಡಿರುವ ೩೦ಕ್ಕೂ ಹೆಚ್ಚು ಮನೆಗಳಲ್ಲಿ ಆತಂಕದ ಛಾಯೆ ಆವರಿಸಿದೆ. ಗುರುವಾರ ಬೆಳಗ್ಗೆ ಏಕಾಏಕಿ ಕಾಣಿಸಿಕೊಂಡ ಕಡಲಬ್ಬರಕ್ಕೆ ಸಮುದ್ರದ ಅಂಚಿನ ಮನೆ ನೋಡ ನೋಡುತ್ತಲೇ ಸಮುದ್ರ ಪಾಲಾದರೆ ಹೊಂದಿಕೊಂಡಿರುವ ಏಳೆಂಟು ತೆಂಗಿನ ಮರಗಳು ನೆಲಕ್ಕೊರಗುವಂತಾಗಿದೆ.

ಅಂಕೋಲಾ: ತಾಲೂಕಿನ ಹಾರವಾಡ ಕಡಲ ಕಿನಾರೆಯ ತರಂಗ ಮೇಟದಲ್ಲಿ ಕಾಣಿಸಿಕೊಂಡ ಅಬ್ಬರದ ಕಡಲ್ಕೊರೆತಕ್ಕೆ ಮನೆ ಸೇರಿದಂತೆ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ.ಹಾರವಾಡದ ಅಶೋಕ ಭಾನು ಹರಿಕಂತ್ರ ಎಂಬವರ ಮನೆ ಸಮುದ್ರ ಪಾಲಾಗಿದೆ. ಗಣಪತಿ ನ್ಯಾಮಾ ದುರ್ಗೇಕರ ಎಂಬವರ ಮನೆಯ ಮಾಡು ಕಡಲಿನಬ್ಬರಕ್ಕೆ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ತೀಳಾ ಥಾಕು ಹರಿಕಂತ್ರ ಎಂಬವರಿಗೆ ಸೇರಿದ ದೋಣಿ ನಿಲುಗಡೆಗೊಳಿಸುವ ಶೆಡ್ ಸಮುದ್ರ ಪಾಲಾಗಿದೆ.

ಕಡಲ ತಟಕ್ಕೆ ಹೊಂದಿಕೊಂಡಿರುವ ೩೦ಕ್ಕೂ ಹೆಚ್ಚು ಮನೆಗಳಲ್ಲಿ ಆತಂಕದ ಛಾಯೆ ಆವರಿಸಿದೆ. ಗುರುವಾರ ಬೆಳಗ್ಗೆ ಏಕಾಏಕಿ ಕಾಣಿಸಿಕೊಂಡ ಕಡಲಬ್ಬರಕ್ಕೆ ಸಮುದ್ರದ ಅಂಚಿನ ಮನೆ ನೋಡ ನೋಡುತ್ತಲೇ ಸಮುದ್ರ ಪಾಲಾದರೆ ಹೊಂದಿಕೊಂಡಿರುವ ಏಳೆಂಟು ತೆಂಗಿನ ಮರಗಳು ನೆಲಕ್ಕೊರಗುವಂತಾಗಿದೆ. ಕಮಲಾ ಸಾತಪ್ಪ ಹರಿಕಂತ್ರ ಎಂಬವರ ಮನೆ ಸಮುದ್ರ ಪಾಲಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ.

ಕಳೆದೆರಡು ತಿಂಗಳ ಹಿಂದೆ ಸಂಭವಿಸಿದ ಕಡಲ್ಕೊರೆತದಲ್ಲಿ ಸುಮಾರು ೧೫ ತೆಂಗಿನ ಮರಗಳು ಸಮುದ್ರಕ್ಕೆ ಕೊಚ್ಚಿ ಹೋಗಿದ್ದವು. ಶಾಸಕ ಸತೀಶ ಸೈಲ್ ಪರಿಶೀಲಿಸಿ ಉಸುಕಿನ ಚೀಲಗಳ ರಕ್ಷಣಾ ಗೋಡೆಯನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದರು. ಆದರೆ ಗುರುವಾರ ಕಾಣಿಸಿಕೊಂಡ ಭೀಕರ ಕಡಲಬ್ಬರದಲ್ಲಿ ಉಸುಕಿನ ಚೀಲದ ತಡೆಗೋಡೆ ನೀರಿನಲ್ಲಿ ಕೊಚ್ಚಿ ಹೋಗುವಂತಾಗಿದೆ. ಕಳೆದೊಂದು ತಿಂಗಳ ಹಿಂದೆ ಸ್ಥಳಕ್ಕಾಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಗ್ರಾಮಸ್ಥರು ಹಾರವಾಡದಲ್ಲಿ ಸಂಭವಿಸುತ್ತಿರುವ ಕಡಲ್ಕೊರೆತದಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಕೇಳಿಕೊಂಡಿದ್ದರು. ಇವೆಲ್ಲವುಗಳ ನಡುವೆ ಮತ್ತೆ ಸಮುದ್ರದುಬ್ಬರ ಹಾರವಾಡ ಕಡಲ ಪ್ರದೇಶವನ್ನು ತತ್ತರಿಸುವಂತೆ ಮಾಡಿದ್ದು, ನಿವಾಸಿಗಳಲ್ಲಿ ಕಾರ್ಮೋಡ ಮನೆ ಮಾಡಿಕೊಂಡಿದೆ. ಸಂಜೆಯಾಗುತ್ತಿದ್ದಂತೆ ಕಡಲಬ್ಬರದ ಪ್ರಮಾಣ ಕೊಂಚ ತಣ್ಣಗಾಗಿದ್ದು, ಮತ್ತೆ ಉದ್ಭವಿಸಬಹುದಾದ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಅನಂತ ಶಂಕರ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಸುನೀಲ್ ಎಂ. ಹಾರವಾಡ ಗ್ರಾಪಂ ಅಧ್ಯಕ್ಷೆ ಶೀಲಾ ಜಗದೀಶ ಹಾರವಾಡೇಕರ್, ಉಪಾಧ್ಯಕ್ಷ ಸಂತೋಷ ರಾಮಾ ದುರ್ಗೇಕರ, ಸದಸ್ಯೆ ಮಲ್ಲಿಕಾ ಬಲೆಗಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಗೌಡ ಸೇರಿದಂತೆ ಹಲವರು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.