ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಶಾಸಕರ ನಿಧಿಯಿಂದ ಬೋರ್ ವೆಲ್ ಕೊರೆಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೋರ್ ವೆಲ್ ಕೊರೆಸಲು ಹಣ ಇಲ್ಲವೆಂದು ಹೇಳುತ್ತೀರಿ. ನಾವೇನು ಮಾಡಬೇಕು ಎಂದು ಪ್ರಶ್ನಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.ಜಿಲ್ಲಾಧಿಕಾರಿ ಯಶವಂತ್ ಮಾತನಾಡಿ, ಶಾಸಕರ ಗ್ರ್ಯಾಂಟ್ ನಲ್ಲಿ ಬೋರ್ ವೆಲ್ ಕೊರೆಸಲು ಅವಕಾಶ ಇಲ್ಲ. ಆರ್ ಡಿಪಿಆರ್ ಇಲಾಖೆಯಿಂದಲೇ ಕೊರೆಸಬೇಕು ಎಂದು ಹೇಳಿದಾಗ ಶಾಸಕ ಬಾಲಕೃಷ್ಣ , ಬೋರ್ ವೆಲ್ ಕೊರೆಸಲು ಜಿಲ್ಲಾಡಳಿತದ ಬಳಿ ಹಣ ಇಲ್ಲ. ಶಾಸಕರ ಗ್ರ್ಯಾಂಟ್ ಬಳಸಲು ಅವಕಾಶ ಇಲ್ಲ. ಜನರು ಕುಡಿಯುವ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶಾಸಕರ ಗ್ರ್ಯಾಂಟ್ ನಲ್ಲಿ ಬೋರ್ ವೆಲ್ ಕೊರೆಸಲು ಅನುಮತಿ ಕೊಡಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ಶಾಸಕರಿಂದಲೇ ನೇರವಾಗಿ ಸರ್ಕಾರಕ್ಕೆ ಶಾಸಕರ ನಿಧಿಯಿಂದ ಬೋರ್ ವೆಲ್ ಕೊರೆಸಲು ಅನುಮತಿ ನೀಡುವಂತೆ ಪತ್ರ ರವಾನೆಯಾದರೆ ಒಳಿತು. ನಾವು ಪತ್ರ ಬರೆದರೆ ಹೈಕೋರ್ಟ್ ನಲ್ಲಿ ದೂರು ದಾಖಲಿಸುತ್ತಾರೆ ಎಂದು ಸಿಇಒ ದಿಗ್ವಿಜಯ್ ಬೋಡ್ಕೆ ಹೇಳಿದಾಗ ಇಕ್ಬಾಲ್ ಹುಸೇನ್ ರವರು, ನನ್ನ ಮನವಿಯನ್ನು ಪ್ರಸ್ತಾವನೆ ಎಂದು ತಿಳಿದು ಪತ್ರ ಕೊಡಿ ಎಂದು ಸಲಹೆ ನೀಡಿದರು.ಕೊನೆಗೆ ಸಚಿವ ರಾಮಲಿಂಗಾರೆಡ್ಡಿರವರು ನೀವು (ಶಾಸಕರು) ಬೋರ್ ವೆಲ್ ಕೊರೆಸಲು ಶಾಸಕರ ನಿಧಿ ಬಳಸುವ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಚರ್ಚೆ ನಡೆಸೋಣ ಎಂದು ಹೇಳಿದರು.ಬೋರ್ ವೆಲ್ ಗೋಲ್ ಮಾಲ್ ನ ತನಿಖೆಯಾಗಲಿ :ಶಾಸಕ ಬಾಲಕೃಷ್ಣರವರು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಎಷ್ಟು ಬೋರ್ ವೆಲ್ ಕೊರೆಸಲಾಗಿದೆ ಎಂದು ಪ್ರಶ್ನಿಸಿದಾಗ ನಿಗಮದ ಅಧಿಕಾರಿ ಸರೋಜಾದೇವಿ, ಸರ್ ನಾನು ದಲಿತ ಅಧಿಕಾರಿ, ಸಮುದಾಯದ ಬಗ್ಗೆ ಬಹಳ ಚಿಂತೆ ಇದೆ ಎಂದು ಹಾರಿಕೆ ಉತ್ತರ ನೀಡಿದರು. ಇದರಿಂದ ಬೇಸರಗೊಂಡ ಬಾಲಕೃಷ್ಣರವರು 2-3 ವರ್ಷವಾದರು ಬೋರ್ ವೆಲ್ ಕೊರೆಸಿಲ್ಲ. ಹಣ ದುರ್ಬಳಕೆ ಆಗುತ್ತಿದ್ದು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದರು.ಈ ವೇಳೆ ಜಿಲ್ಲಾಧಿಕಾರಿ ಯಶವಂತ್ , ನಿಗಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲದೆ, ಗುರುಮೂರ್ತಿ ಹೇಳುತ್ತಿರುವ ಮಾತಿನಲ್ಲಿ ಸತ್ಯಾಂಶವಿದೆ ಎಂದಾಗ ಬಾಲಕೃಷ್ಣರವರು, ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಎಷ್ಟು ಬೋರ್ ವೆಲ್ ಕೊರೆಯಬೇಕಿತ್ತು, ಎಷ್ಟು ಕೊರೆದಿದ್ದರೆ ಎಂಬುದರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು ಎಂದರು.