ಜಾತ್ಯಾತೀತ ಸಿದ್ಧಾಂತಗಳಿಗೆ ತಿಲಾಂಜಲಿ ಹಾಡಿದ ಗೌಡ ಕುಟುಂಬ

| Published : Mar 19 2024, 12:46 AM IST

ಜಾತ್ಯಾತೀತ ಸಿದ್ಧಾಂತಗಳಿಗೆ ತಿಲಾಂಜಲಿ ಹಾಡಿದ ಗೌಡ ಕುಟುಂಬ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ಯಾತೀತ ಸಿದ್ಧಾಂತಗಳಿಗೆ ತಿಲಾಂಜಲಿ ಹಾಡಿ ದಲಿತರು, ಹಿಂದುಳಿದ ವರ್ಗ ಮತ್ತು ಬಹುಜನರ ಶೋಷಿತರ ರಾಜಕಾರಣವನ್ನು ನಾಶಗೈಯುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದೆ. ಆ ಕುಟುಂಬದವರ ಹೊಂದಾಣಿಕೆಯ ರಾಜಕೀಯ ಪಕ್ಷಗಳನ್ನು ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸುವಂತೆ ಕನಕಪುರ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮತದಾರರಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಾತ್ಯಾತೀತ ಸಿದ್ಧಾಂತಗಳಿಗೆ ತಿಲಾಂಜಲಿ ಹಾಡಿ ದಲಿತರು, ಹಿಂದುಳಿದ ವರ್ಗ ಮತ್ತು ಬಹುಜನರ ಶೋಷಿತರ ರಾಜಕಾರಣವನ್ನು ನಾಶಗೈಯುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದೆ. ಆ ಕುಟುಂಬದವರ ಹೊಂದಾಣಿಕೆಯ ರಾಜಕೀಯ ಪಕ್ಷಗಳನ್ನು ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸುವಂತೆ ಕನಕಪುರ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮತದಾರರಲ್ಲಿ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮ ಕುಟುಂಬದ ಹಿತಾಸಕ್ತಿಗಾಗಿ ದಲಿತರು, ಹಿಂದುಳಿದ ವರ್ಗ ಮತ್ತು ಬಹುಜನರ ಶೋಷಿತರ ರಾಜಕಾರಣವನ್ನು ದೇವೇಗೌಡ ಮತ್ತು ಅವರ ಕುಟುಂಬದವರು ನಾಶಗೈಯುತ್ತಿದ್ದು, ತಮ್ಮ ಕುಟುಂಬಕ್ಕಷ್ಟೇ ಜೆಡಿಎಸ್ ಪಕ್ಷವನ್ನು ಸೀಮಿತಗೊಳಿಸಿದ್ದಾರೆ. ಅಧಿಕಾರಕ್ಕಾಗಿ ಸಿಕ್ಕ ಸಿಕ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಹಾಗಾಗಿ ಜಾತ್ಯಾತೀತ ಪದ ತೆಗೆಯುವುದು ಸೂಕ್ತ ಎಂದರು.

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡ ದೇವೇಗೌಡರು ರಾಜ್ಯದಲ್ಲಿ ಬಿಎಸ್ಪಿಯ ಖಾತೆಗೆ 10 ವೋಟುಗಳನ್ನು ಹಾಕಿಸಲಿಲ್ಲ. ಆದರೆ, ಬಿಎಸ್ಪಿಯ ಮತಗಳನ್ನು ನಯವಾಗಿ ಪಡೆದುಕೊಂಡರು. ಕೇವಲ 30 ಸೀಟುಗಳನ್ನು ಗೆದ್ದವರು 69 ಸೀಟು ಪಡೆದಿದ್ದ ಕಾಂಗ್ರೆಸ್, ಇತರ ಪಕ್ಷೇತರರ ಬಳಿ ಅಂಗಲಾಚಿ ತಮ್ಮ ಪುತ್ರ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು.

ರಾಜಕೀಯ ದುರ್ಬದ್ಧಿಯನ್ನು ಬಳಸಿ ಬಿಎಸ್ಪಿ ವರಿಷ್ಠರಿಗೆ ಇಲ್ಲದ ವಿಚಾರಗಳನ್ನು ತಲೆಗೆ ತುಂಬಿ ಕಾರ್ಯಕರ್ತರಲ್ಲಿ ಗೊಂದಲು ಸೃಷ್ಟಿಸಿ ಕೊಳ್ಳೇಗಾಲ ಕ್ಷೇತ್ರದಿಂದ ಗೆದ್ದು ಸಚಿವರಾದ ಎನ್ ಮಹೇಶ್ ಅವರನ್ನು ಬಿಎಸ್ಪಿಯಿಂದ ಉಚ್ಛಾಟನೆಗೊಳಿಸುವ ಸನ್ನಿವೇಶ ಸೃಷ್ಟಿಸಿದರು. ಆ ಮೂಲಕ ದಲಿತ ರಾಜಕರಾಣದ ಪ್ರಭಾವಿ ಶಕ್ತಿಯಾಗಿದ್ದ ಮಹೇಶ್ ರವರ ನಾಯಕತ್ವ ಮತ್ತು ಬಿಎಸ್ಪಿಯನ್ನು ಹಾಳು ಮಾಡಿದರು ಎಂದು ಟೀಕಿಸಿದರು. ಸ್ವಂತ ಪಕ್ಷದ ಚಿಹ್ನೆಯ ಮೇಲೆ ತಮ್ಮ ಅಳಿಯ ಡಾ.ಸಿ.ಎನ್ ಮಂಜುನಾಥ್ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಹೀಗಾಗಿ ದೇವೇಗೌಡರು ತಮ್ಮ ರಾಜಕೀಯ ಅವಲಂಬನೆಗಾಗಿ ಸೀಟು ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯೊಂದಿಗೆ ಪರಾವಲಂಬಿ ರಾಜಕಾರಣ ಮಾಡುತ್ತಿರುವುದು ಹಾಸ್ಯಾಸ್ಪದವಾಗಿ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಮಂಜುನಾಥ್ ನಡುವಿನ ಸ್ಪರ್ಧೆ ಅಸಾಮಾನ್ಯರ ನಡುವಿನ ಸ್ಪರ್ಧೆಯಂತಾಗಿದೆ. ಈ ಸ್ಪರ್ಧೆ ಮೋಸ ಮತ್ತು ಅನ್ಯಾಯದ ಪರಾಕಾಷ್ಠೆಯಾಗಿದೆ. ಡಿ ಕೆ ಸಹೋದರರು ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿದ್ದು, ಇವರ ಮೇಲೆ ಸ್ಪರ್ಧಿಸಲು ನರೇಂದ್ರಮೋದಿ, ಅಮಿತ್ ಷಾ, ಪ್ರಹ್ಲಾದ್ ಜೋಶಿ, ಮೋಹನ್ ಭಾಗವತ್, ದೇವೇಗೌಡ, ಕುಮಾರಸ್ವಾಮಿರವರ ಸ್ಪರ್ಧೆ ನ್ಯಾಯ ಸಮ್ಮತವಾಗಿರುತ್ತದೆ ಎಂದು ಹೇಳಿದರು.

ರಾಜಕೀಯ ಗಂಧ ಗಾಳಿ ಗೊತ್ತಿಲ್ಲದ, ರಾಜಕೀಯ ಮಜಲು ಪಟ್ಟುಗಳನ್ನು ಅರಿಯದ ವೈದ್ಯಕೀಯ ಕ್ಷೇತ್ರದ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾ. ಕ್ಷೇತ್ರಕ್ಕೆ ಪರಾವಲಂಬಿ ರಾಜಕಾರಣ ಮೆಚ್ಚಿಕೊಂಡು ಧರ್ಮಯುದ್ಧ ಎಂದು ಘೋಷಿಸಿಕೊಂಡಿರುವುದು ಸೂಕ್ತವಾದ ಕ್ರಮವಲ್ಲ ಎಂದರು.

ದೇವೇಗೌಡರ ಮಗನನ್ನು ಸಿಎಂ ಮಾಡಲು, ಸೊಸೆಯನ್ನು ಶಾಸಕಿಯನ್ನಾಗಿ ಮಾಡಲು, ಮೈತ್ರಿ ಸರ್ಕಾರ ರಚಿಸಿ ಅವರ ಕುಟುಂಬಕ್ಕೆ ಅಧಿಕಾರ ತಂದುಕೊಡಲು ಡಿಕೆ ಸಹೋದರರ ಬೆಂಬಲ ಕೋರಿದಾಗ ಅವರು ಡಾ.ಮಂಜುನಾಥ್ ರವರಿಗೆ ಸಮಾನರಲ್ಲ ಎಂಬ ಅಂಶ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು. ರಾಜಕಾರಣದಲ್ಲಿ ಸಭ್ಯತೆ ಬಹಳ ಮುಖ್ಯ. ಯಾರೇ ಇರಲಿ ಸಭ್ಯತೆಯ ಎಲ್ಲೆ ಮೀರಬಾರದು. ದಲಿತ ಹಿಂದುಳಿದ, ಶೋಷಿತ ಸಮಾಜದ ಮತದಾರರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಹಾಗೂ ಅವರ ಹೊಂದಾಣಿಕೆಯ ರಾಜಕೀಯ ಪಕ್ಷಗಳಿಗೆ ಮತ ನೀಡದಂತೆ ಮನವಿ ಮಾಡಿದರು.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಆದರ್ಶ ರಾಜಕಾರಣ ಮಾಡುವ ಇಚ್ಛಾಶಕ್ತಿ ಇಲ್ಲ. ಮೂರು ಪಕ್ಷಗಳ ಸಿದ್ಧಾಂತಗಳು ಒಂದೇ ಆಗಿವೆ. ದಲಿತ, ಹಿಂದುಳಿದ ಶೋಷಿತ ಸಮಾಜದ ಮತದಾರರು ಮೂರು ಪಕ್ಷಗಳನ್ನು ತಿರಸ್ಕರಿಸಬೇಕು. ನಾನು ಪಕ್ಷೇತರನಾಗಿ ಸ್ಪರ್ಧಿಸಲು ಉದ್ದೇಶಿಸಿದ್ದು, ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಶಿವಮಾದು, ಬಸವರಾಜು, ಮುನಿರಾಜು, ಸಿದ್ದರಾಜು, ಕಾಶಿನಾಥ್ , ಮುನಿಮಲ್ಲಣ್ಣ, ನಿಂಗರಾಜು ಮತ್ತಿತರರಿದ್ದರು.