ಈರಪ್ಪ ನಾಯ್ಕರ್

ಹುಬ್ಬಳ್ಳಿ:

ಮಳೆ ಕೊರತೆಯಿಂದ ಹೊಲಗಳಲ್ಲಿ ಬೆಳೆಗಳು ಸೊರಗುತ್ತಿದ್ದರೂ, ರಸ್ತೆ ಅಕ್ಕಪಕ್ಕ ಬೆಳೆಯುವ ಗಿಡ-ಗಂಟಿಗಳಿಗೆ ಕೊರತೆಯಾಗಿಲ್ಲ. ನಗರದ ಹಲವೆಡೆ ಪಾದಚಾರಿ ಮಾರ್ಗ ಸುಗಮವಾಗಿಲ್ಲ. ಕಾಲ್ನಡಿಗೆಯಲ್ಲಿ ಸಾಗುವವರಿಗೆ ಹಲವು ಅಡ್ಡಿಗಳು ಎದುರಾಗುತ್ತವೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸಣ್ಣ ಪ್ರಮಾಣದ ಜಡಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳ ಮೇಲೆ ಗಿಡ-ಗಂಟಿ ಹಾಗೂ ಕಳೆ ಸಮೃದ್ಧವಾಗಿ ಬೆಳೆದು ನಿಂತಿವೆ. ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿವೆ. ಇದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲ, ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳಿಗೆ ತರುಲತೆಗಳು ಹಬ್ಬಿಕೊಳ್ಳುತ್ತಿವೆ. ಮೇಲ್ನೋಟಕ್ಕೆ ಜನರ ಗಮನ ಸೆಳೆದರೂ ಅಪಾಯದ ಸಾಧ್ಯತೆ ಹೆಚ್ಚಿಸುತ್ತಿದೆ.‌ಸದ್ಗುರು ಶ್ರೀಸಿದ್ಧಾರೂಢ ಸ್ವಾಮಿ ಮಹಾದ್ವಾರ ಪಕ್ಕದಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಕೂಡಾ ಫುಟ್‌ಪಾತ್ ಮೇಲೆ ತಂದು ಹಾಕಲಾಗುತ್ತಿದೆ, ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಮಳೆಗಾಲದ ಸಮಯದಲ್ಲಿ ಈ ರೀತಿ ಸಮಸ್ಯೆ ಎದುರಾಗುತ್ತಿದ್ದು, ಹುಳ-ಹುಪ್ಪಟೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಜನ ರಸ್ತೆ ಮೇಲೆ ನಡೆಯಬೇಕಾದ ಅನಿವಾರ್ಯತೆ ಇದೆ. ಈ ವೇಳೆ ವೇಗವಾಗಿ ಬರುವ ವಾಹನಗಳು ಭಯವುಂಟು ಮಾಡುತ್ತವೆ. ನಗರದ ಕಾರವಾರ ರಸ್ತೆ ಫುಟ್‌ಪಾತ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ಘಟಕ ಎದುರು, ಕೆಂಪಗೇರಿ ರಸ್ತೆ, ಭಾರತ್ ಮಿಲ್ ವೃತ್ತ ಪಕ್ಕದ ಮಾರ್ಗ, ಕೋರ್ಟ್ ಹಿಂಭಾಗದ ಫುಟ್‌ಪಾತ್, ತಿಮ್ಮಸಾಗರ ರಸ್ತೆಯ ಫುಟ್‌ಪಾತ್‌ ಇನ್ನು ಹತ್ತಾರು ಸ್ಥಳಗಳಲ್ಲಿ ಪಾದಚಾರಿ ಮಾರ್ಗದಲ್ಲಿ ಓಡಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.


ಪುಟ್‌ಪಾತ್ ಮೇಲೆ ತ್ಯಾಜ್ಯ ಮತ್ತು ಚಾಚಿಕೊಂಡ ಗಿಡ-ಗಂಟಿಗಳ ನಡುವೆ ವಾಸಿಸುವ ವಿಷಕಾರಿ ಜೀವಿಗಳು ಪಾದಚಾರಿಗಳ ಪ್ರಾಣಕ್ಕೆ ಅಪಾಯ ಉಂಟು ಮಾಡಬಲ್ಲವು. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಫುಟ್‌ಪಾತ್‌ಗೆ ಹೊಂದಿಕೊಂಡಿರುವ ಖುಲ್ಲಾ ಜಾಗೆಗಳಲ್ಲಿ ಬೆಳೆದಿರುವ ಪೊದೆಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಫುಟ್‌ಪಾತ್‌ ಸ್ವಚ್ಛವಾಗಿಟ್ಟು ಪಾದಚಾರಿಗಳಿಗೆ ಮುಕ್ತ ಸಂಚಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಫುಟ್‌ಪಾತ್ ಸಮಸ್ಯೆ ಈಗಾಗಲೇ ಗಮನಕ್ಕೆ ಬಂದಿದ್ದು ವಾರದೊಳಗೆ ಬೆಳೆದ ಗಿಡ-ಗಂಟಿ ತೆರವುಗೊಳಿಸಲಾಗುವುದು. ರಸ್ತೆ ಪಕ್ಕ, ಪುಟ್‌ಪಾತ್‌ ಮೇಲೆ ತ್ಯಾಜ್ಯ ಹಾಕಿದವರನ್ನು ಗುರುತಿಸಿ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು.

ವಿಜಯಕುಮಾರ, ಪಾಲಿಕೆ ಉಪ ಆಯುಕ್ತ