ನರಗುಂದ: ಕೃಷಿಯಲ್ಲಿ ಕೆಲಸವಿಲ್ಲದೆ, ಮನೆಯಲ್ಲಿ ಉಳಿದುಕೊಂಡು ಜೀವನ ಮಾಡಲು ತೊಂದರೆಯಾಗಿದೆ. ಗ್ರಾಪಂವರು ಕೆಲಸ ನೀಡುತ್ತಿಲ್ಲವೆಂದು ಆರೋಪಿಸಿ ಕೂಲಿ ಕಾರ್ಮಿಕರು ಮಂಗಳವಾರ ತಾಲೂಕಿನ ಬನಹಟ್ಟಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿನೆ ಮಾಡಿದರು.
ಕೂಲಿ ಕಾರ್ಮಿಕರು ಮಾತನಾಡಿ, ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿ ಬೇಸಿಗೆಯ ಸಮಯದಲ್ಲಿ ಗುಳೆ ಹೋಗಬಾರದೆಂದು ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ ನರೇಗಾ ಯೋಜನೆ ಜಾರಿಗೆ ತಂದಿದೆ. ಆದರೆ ಗ್ರಾಪಂ ಅಧಿಕಾರಿಗಳು ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಪ್ರಾರಂಭ ಆಗುವ ವರೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಬೇಕು. ಇಲ್ಲದಿದ್ದರೆ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರುದ್ರಪ್ಪ ಗಡ್ಡಿ, ಶಿವಾನಂದ ಈಟಿ, ಬಾಲಪ್ಪ ತಳವಾರ, ಮುತ್ತಪ್ಪ ಕಡ್ಲಿಕೊಪ್ಪ, ಮುತ್ತಪ್ಪ ತಳವಾರ, ಜಗದೀಶ ಪೂಜಾರ, ಹನುಮಂತಗೌಡ ನೀಲಗುಂದ, ಶರಣಪ್ಪ ಮ್ಯಾಗೇರಿ, ನಾಗರಾಜ ಕುರಿ, ನಾಗರಾಜ ಹಿರೇಮಠ, ರಾಜಪ್ಪ ತಳವಾರ, ವಾಸಪ್ಪ ತಿಪ್ಪನ್ನವರ, ಹನುಮಂತಗೌಡ ಪರ್ವತಗೌಡ್ರ, ನಂದಾ ತಳವಾರ, ಈರವ್ವಜೋಗಿ, ಲಲಿತಾ ಕುರವತ್ತಿಮಠ, ಬಸವ್ವ ಬೀರನೂರ, ನೀಲವ್ವ ಗಡ್ಡಿ, ಲಲಿತಾ ಹತ್ತಿಕಾಳ ಇದ್ದರು.ಮಳೆಗಾಗಿ ಮುಗಿಲು ನೋಡುತ್ತಿರುವ ರೈತರು
ನರೇಗಲ್ಲ: ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಮೊದಲ ಮಳೆಯ ಆಸರೆಯ ಮೇಲೆ ಬಿತ್ತನೆ ಕಾರ್ಯ ಕೈಗೊಂಡ ರೈತರು ಇದೀಗ ಮಳೆ ಕೈಕೊಟ್ಟ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ.ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯ ಜಕ್ಕಲಿ, ಅಬ್ಬಿಗೇರಿ, ಬೂದಿಹಾಳ, ಮಾರನಬಸರಿ, ನಿಡಗುಂದಿ, ನಿಡಗುಂದಿಕೊಪ್ಪ ಹಾಗೂ ಹಾಳಕೆರೆ ಗ್ರಾಮಗಳ ರೈತರು ಬೆಳೆ ಉಳಿಸಿಕೊಳ್ಳುವ ಚಿಂತೆಯಲ್ಲಿ ದಿನವೂ ಆಕಾಶದತ್ತ ಚಿತ್ತ ನೆಟ್ಟು ಕುಳಿತಿದ್ದಾರೆ.
ಮೊದಲ ಮಳೆ ಸುರಿದ ಕೂಡಲೇ ರೈತರು ಜಮೀನು ಉಳುಮೆ ಮಾಡಿ, ಬೀಜ ಮತ್ತು ಗೊಬ್ಬರ ಖರೀದಿಸಿ ಸಾವಿರಾರು ರುಪಾಯಿ ವೆಚ್ಚದಲ್ಲಿ ಬಿತ್ತನೆ ನಡೆಸಿದ್ದರು. ಆದರೆ ನಂತರ ಮಳೆ ಕಾಣಿಸದ ಕಾರಣ ಬಿತ್ತಿದ ಬೀಜ ಒಣಗುವ ಭೀತಿ ಎದುರಾಗಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.ಕೃಷಿ ಚಟುವಟಿಕೆಗಳಿಗಾಗಿ ಸಾಲ ಮಾಡಿರುವ ರೈತರು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿಲಿನ ತಾಪಕ್ಕೆ ಭೂಮಿ ಒಣಗುತ್ತಿದ್ದು, ಮೊಳಕೆಯೊಡೆದ ಸಸಿಗಳು ಸಹ ನೀರಿನ ಕೊರತೆಯಿಂದ ಬಾಡಲಾರಂಭಿಸಿವೆ.ಇಂದಲ್ಲ ನಾಳೆ ಮಳೆ ಬರುತ್ತದೆ ಎಂಬ ಭರವಸೆಯೊಂದಿಗೆ ರೈತರು ಪ್ರತಿದಿನ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಆದರೆ ದಿನಗಳು ಕಳೆದರೂ ಮಳೆಯ ಲಕ್ಷಣ ಕಾಣಿಸದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.ಮಳೆರಾಯ ಕೃಪೆ ತೋರಿ ಶೀಘ್ರವೇ ಉತ್ತಮ ಮಳೆಯಾದರೆ ಮಾತ್ರ ಬಿತ್ತಿದ ಬೆಳೆ ಉಳಿಯಲಿದೆ. ಇಲ್ಲವಾದಲ್ಲಿ ಮರುಬಿತ್ತನೆ ಮಾಡುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದ್ದು, ರೈತರು ಆತಂಕ ಮತ್ತು ನಿರೀಕ್ಷೆಯ ನಡುವೆಯೇ ದಿನ ಕಳೆಯುತ್ತಿದ್ದಾರೆ.