ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ ಗ್ರಾಪಂ ಸಿಬ್ಬಂದಿ

| Published : Oct 08 2024, 01:02 AM IST

ಸಾರಾಂಶ

ತುಮಕೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಸದಸ್ಯರು ಹಾಗೂ ಅಧಿಕಾರಿ, ಸಿಬ್ಬಂದಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ.

ತುಮಕೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಸದಸ್ಯರು ಹಾಗೂ ಅಧಿಕಾರಿ, ಸಿಬ್ಬಂದಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ, ಹೋರಾಟ ಬೆಂಬಲಿಸಿದರು. ನಿಮ್ಮ ಬೇಡಿಕೆ ನ್ಯಾಯಯುತವಾಗಿವೆ, ಸರ್ಕಾರ ಸ್ಪಂದಿಸಿ ಕೂಡಲೇ ಬೇಡಿಕೆ ಈಡೇರಿಸಬೇಕು. ಈ ಬಗ್ಗೆ ತಾವು ವಿಧಾನ ಸಭೆ ಕಲಾಪದಲ್ಲಿ ನಿಮ್ಮ ಪರ ಧ್ವನಿ ಮಾಡುತ್ತೇನೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಾಷ್ಟ್ರ ಧ್ವಜಾರೋಹಣ ಕಾರ್ಯ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಹೇಳಿದರು.ರಾಜ್ಯದ ಶೇಕಡ 68 ರಿಂದ 70 ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿಗಳಿಂದ ಶೇಕಡ 70 ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಹಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಎಲ್ಲಾ ಸಿಬ್ಬಂದಿಗಳು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ದೊಡ್ಡೇರಿ ವಿಜಯಕುಮಾರ್ ಮಾತನಾಡಿ, ಸಂವಿಧಾನದ ನಿಯಮದಂತೆ ಗ್ರಾಮ ಪಂಚಾಯಿತಿಗಳುಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅಭಿವೃದ್ಧಿ ನಕ್ಷೆ ರಚಿಸಬೇಕು. ಜವಾಬ್ದಾರಿ ನಕ್ಷೆಯಲ್ಲಿರುವಂತೆ ಆಯಾ ಜವಾಬ್ದಾರಿಗೆ ಸಂಬಂಧಿಸಿದ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ ಹಾಗೂ ಜವಾಬ್ದಾರಿ ನಿರ್ವಹಿಸುವ ಸ್ವಾತಂತ್ರವನ್ನು ಪಂಚಾಯಿತಿಗಳಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತಾಗಲು ಪಂಚಾಯಿತಿ ಅಧ್ಯಕ್ಷರು ಕಾರ್ಯನಿರ್ವಾಹಕ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುವಂತಾಗಬೇಕು ಹಾಗೂ ಪಿಡಿಓ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಚೇರಿ ನಿರ್ವಹಣಾ ಕೈಪಿಡಿ ರಚಿಸಬೇಕು. ಗ್ರಾಪಂ ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಾಗಲು ನಿಯಮ ರೂಪಿಸಬೇಕು ಎಂದರು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು. ಗ್ರಾ ಪಂ ವ್ಯಾಪ್ತಿಯಲ್ಲಿ ನಡೆಯುವ ಸರ್ಕಾರದ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು, ಆಹ್ವಾನ ಪತ್ರಿಕೆ, ಶಿಲಾಫಲಕಗಳಲ್ಲಿ ಅವರ ಹೆಸರು ಮುದ್ರಿಸಬೇಕು, ವಿಧಾನಸೌಧ, ಇತರೆ ಕಚೇರಿಗಳಲ್ಲಿ ಹಾಗೂ ಟೋಲ್‌ಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿಜಯಕುಮಾರ್ ಸರ್ಕಾರವನ್ನು ಒತ್ತಾಯಿಸಿದರು. ಇದಲ್ಲದೆ ಗ್ರಾಪಂನ ಕಾರ್ಯದರ್ಶಿಗಳು, ದ್ವಿತೀಯ ದಜೆ ಲೆಕ್ಕ ಸಹಾಯಕರು, ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್, ನೀರಗಂಟಿ, ಜವಾನರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಒಂದು ಆಗ್ರಹಿಸಿದರು.ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಎಸ್‌ಡಿಸಿಗಳ ಸಂಘದ ಅಧ್ಯಕ್ಷ ಶಾಹಿದ್ ಅಫ್ರಿದಿ ಸೇರಿದಂತೆ ಎಲ್ಲಾ ವೃಂದಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ಹೋರಾಟದಲ್ಲಿ ಭಾಗಹಿಸಿದ್ದರು.