ಕನ್ನಡಪ್ರಭ ವಾರ್ತೆ ತುಮಕೂರುಜನಪದವೆಂಬುದು ನಮ್ಮ ಪೂರ್ವಜರು ನಮಗೆ ನೀಡಿರುವ ಬಹುದೊಡ್ಡ ಕೊಡುಗೆ. ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್, ಜಮ್ ತಿಳಿಸಿದರು.ನಗರದ ಎಸ್.ಎಸ್.ಪುರನ ಶ್ರೀವಾಸವಿ ದೇವಾಲಯದ ಆವರಣದಲ್ಲಿರುವ ಶ್ರೀವಾಸವಿ ಸುಜ್ಞಾನ ಕೇಂದ್ರದ ಸಭಾಂಗಣದಲ್ಲಿ ಸ್ವರ ಸಿಂಚನ ಸುಗಮ ಸಂಗೀತ ಜನಪದ ಕಲಾಸಂಸ್ಥೆ ತುಮಕೂರು, ಇವರು ಜ್ಞಾನಬುತ್ತಿ ಸತ್ಸಂಗ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಕೊರಳ ಕೊಳಲ ದನಿಗೆ ಗೆಜ್ಜೆಯ ನಾದವಾಲಿಸೇ ಓ ಮನಸೇ ಎಂಬ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನಪದದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಶಸ್ತವಿದೆ. ಎಲ್ಲದಕ್ಕೂ ಹೆಣ್ಣೆ ಮೊದಲು ಎಂಬುದನ್ನು ನಮ್ಮ ಪುರಾಣಗಳಲ್ಲಿ ಕಾಣಬಹುದಾಗಿದೆ. ಹಾಗಾಗಿ ಇಂತಹ ಪ್ರಮುಖ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.ಅಧುನಿಕತೆಯ ಹೆಸರಿನಲ್ಲಿ ಪ್ರಾಶ್ಚಿಮಾತ್ಯ ಪರಂಪರೆಯನ್ನು ಅನುಸರಿಸುತ್ತಾ ಬಂದಿರುವ ನಮಗೆ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಜನಪದದ ಮಹತ್ವವನ್ನು ಅರಿತು, ಅದನ್ನು ಉಳಿಸಿ, ಬೆಳೆಸುವತ್ತ ಕಾರ್ಯೋನ್ಮುಖರಾಗಬೇಕಿದೆ ಎಂದು ನುಡಿದರು. ನಗರಪಾಲಿಕೆ ಉಪ ಆಯುಕ್ತರಾದ ಸುಪ್ರಿಯ ಬಾಣಗಾರ್ ಮಾತನಾಡಿ, ಜನಸಾಮಾನ್ಯರು ತಮ್ಮ ಮನದ ನೋವು, ನಲಿವುಗಳನ್ನು ವ್ಯಕ್ತಪಡಿಸಲು ಕಂಡುಕೊಂಡ ದಾರಿಯೇ ಜನಪದ. ಉತ್ತರ ಕರ್ನಾಟಕದಲ್ಲಿ ಜನಪದ ಬಹಳ ಉತ್ತುಂಗದಲ್ಲಿದೆ.ದೇವರ ಚರಿತ್ರೆಗಳು ಸಹ ಜನಪದವನ್ನೇ ಅವಲಂಬಿಸಿವೆ. ಸರ್ಕಾರ ಒಂಭತ್ತನೇ ತರಗತಿಯಲ್ಲಿ ಜನಪದ ಕುರಿತು ಪಠ್ಯ ನೀಡಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿರುವುದು ಸ್ವಾಗತಾರ್ಹ ಎಂದರು.ನಿವೃತ್ತ ಎಇಇ ಜಿ.ಎಚ್.ಷಣ್ಮುಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಮುರ್ಜಿ ಸಂಸ್ಥೆ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಮುರುಳಿಕೃಷ್ಣಪ್ಪ ವಹಿಸಿದ್ದರು.ವೇದಿಕೆಯಲ್ಲಿ ಜ್ನಾನ ಬುತ್ತಿ ಸತ್ಸಂಗ ಕೇಂದ್ರದ ಆರ್.ಎಲ್. ರಮೇಶ್ ಬಾಬು, ನಾರಾಯಣ್, ವಿ.ಪಿ. ಕೃಷ್ಣಮೂರ್ತಿ,ಸಾಮಾಜಿಕ ಚಿಂತಕ ಸಾ.ಚಿ.ರಾಜಕುಮಾರ್, ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟಾರ್ ನೀಲಮ್ಮ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಪದ ದೇವರಾಜು, ರಾಜ್ಯಮಟ್ಟದ ಕಲಾವಿದರಾದ ಕೋಲಾರ ರಮೇಶ್, ಗಾಯಕರಾದ ಬಾಣಸಂದ್ರ ರವಿಕುಮಾರ್ ಇತರರಿರಿದ್ದರು.ಕೊರಳ ಕೊಳಲ ದ್ವನಿಗೆ ಗೆಜ್ಜೆಯ ನಾದವಾಲಿಸೇ ಓ ಮನವೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಸಿದ್ದ ಅಂತಾರಾಷ್ಟ್ರೀಯ ನೃತ್ಯ ಕಲಾವಿದರಾದ ವಿದ್ವಾನ್ ಕೋಲಾರ ರಮೇಶ್ ಮತ್ತು ತಂಡದಿಂದ ಜಾನಪದ ನೃತ್ಯ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದಸ್ಯರಾದ ಪದ ದೇವರಾಜು, ವನಿತ ಹಿರೇಮಠ, ವೈ.ಎನ್.ಶಶಿಕುಮಾರ್ ತಂಡದಿಂದ ಗೀತ ವೈವಿದ್ಯ ಹಾಗೂ ಜನಪದ ಗಾಯನ, ಬೆಂಗಳೂರಿನ ಸಮೃದ್ದಿ ಸಂಗೀತ ಶಾಲೆಯ ಮಂಜುಳ ಮತ್ತು ತಂಡದಿಂದ ಸುಗಮ ಸಂಗೀತ ಗಾಯನ, ಚಿಕ್ಕನಾಯಕನಹಳ್ಳಿ ತಾಲೂಕು ಎಳನಡುವಿನ ಶ್ರೀಗುರು ರಾಜಯೋಗಿ ಸಾಂಸ್ಕೃತಿಕ ಕಲಾ ಸಂಸ್ಥೆಯ ರಘು ಪೂಜಾರ್ ಮತ್ತು ತಂಡದಿಂದ ತತ್ವಪದಗಳ ಗಾಯನ ನಡೆಯಿತು. ಪಂಡಿತ್ ನಾಗರಾಜ ಶ್ಯಾವಿ ಕೊಪ್ಪಳ ಇವರ ಕೊಳಲು ನಾದನ ಪ್ರೇಕ್ಷಕರ ಮನ ಸೂರೆಗೊಂಡಿತು.ಹಿನ್ನೆಲೆ ಸಂಗೀತದ ವಾದ್ಯ ಸಹಕಾರದಲ್ಲಿ ಕೀ ಬೋರ್ಡ್ ಗಣೇಶ್ ಪ್ರಸಾದ್, ತಬಲ ಲೋಕೇಶ್ ಬಾಬು, ಡೋಲಕ್ ರಾಜೇಶ್ ರಂಗನಾಥ್, ರಿದಮ್ ಪ್ಯಾಡ್ ನಿರಂಜನ್, ಕೊಳಲು ವಾದ ಪಂಡಿತ್ ನಾಗರಾಜ ಶ್ಯಾವಿ ಕೊಪ್ಪಳ ಅವರುಗಳು ಸಾಥ್ ನೀಡಿದರು. ಜನಪದ ಮತ್ತು ಭಾವಗೀತೆಗಳು ನೋಡುಗರ , ಕೇಳುಗರ ಮೈ ಮನಸ್ಸಗಳನ್ನು ಸೂರೆಗೊಂಡವು.