ಕನ್ನಡಪ್ರಭ ವಾರ್ತೆ ಲೋಕಾಪುರ

ಜಗದ್ಗುರು ರೇಣುಕಾಚಾರ್ಯರು ಪರಶಿವನ ಅಪ್ಪಣೆಯ ಮೇರೆಗೆ ಜಗತ್ತನ್ನು ಉದ್ಧರಿಸಲು ಬಂದ ಮಹಾದೇವತಾವಾದಿ ಎಂದು ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಈಚೆಗೆ ಪಟ್ಟಣದ ಮೇನ್‌ ಬಜಾರದಲ್ಲಿರುವ ಹಿರೇಮಠದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಹಾಗೂ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡ ರೇಣುಕಾಚಾರ್ಯ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರೇಣುಕಾಚಾರ್ಯರು ಕೇವಲ ಧಾರ್ಮಿಕ ಕ್ರಾಂತಿಗೆ ಸೀಮಿತವಾಗಿರದೆ ಸಮಗ್ರ ಸಮಾಜ ಸುಧಾರಣೆಗೆ ಆವತರಿಸಿ ಬಂದವರು. ಸಮಾಜದಲ್ಲಿ ಸಾಮರಸ್ಯದ ಬದುಕು, ಅತ್ಯಂತ ಅಗತ್ಯ ಪರಸ್ಪರ ಗೌರ ಮತ್ತು ಸಹಕಾರದಿಂದ ಬದುಕಿದಾಗಲೇ ಶಾಂತಿ ಸಾಧ್ಯ ಎಂದು ತಿಳಿಸಿದರು.

ಗಣಿ ಉದ್ಯಮಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಎಸ್.ಎನ್. ಹಿರೇಮಠ ಮಾತನಾಡಿ, ಲಿಂಗಾಚಾರ, ಸದಾಚಾರ, ಗಣಾಚಾರ, ಶಿವಾಚಾರ ಹಾಗೂ ಭೃತ್ಯಾಚಾರ ಎಂಬ ಐದು ಆಚಾರಗಳು ವ್ಯಕ್ತಿಯ ಆಂತರಿಕ ಶುದ್ಧತೆಯ ಜೊತೆಗೆ ಸಾಮಾಜಿಕ ನೈತಿಕತೆ ಬಲಪಡಿಸುತ್ತವೆ ಎಂದು ಹೇಳಿದರು.

ಮುಖ್ಯ ಗುರು ಆರ್.ಜಿ. ಮುತ್ತಿನಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಕಲಗಳನ್ನು ಶ್ರೀ ರೇಣುಕಾಚಾರ್ಯರು ಸಮಾಜಕ್ಕೆ ಬೋಧಿಸಿದ ಅಮೂಲ್ಯವಾದ ತತ್ವಗಳಾಗಿವೆ. ಅವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.


ಈ ವೇಳೆ ಬಸಣ್ಣ ದುಗಾಣಿ, ನೀಲವ್ವ ವಸ್ತçದ, ಚನ್ನಯ್ಯಾ ಗಣಾಚಾರಿ, ಚನ್ನಬಸು ದಿವಾನ್, ಹೆಬ್ಬಾಳ ಗ್ರಾಮದ ಪೂಜ್ಯರಾದ ಕಲ್ಲಯ್ಯ ಹಿರೇಮಠ ಹಾಗೂ ಮಾಚಕನೂರಿನ ಹೊಳಬಸವೇಶ್ವರ ದೇವಸ್ಥಾನದ ಅರ್ಚಕ ಚಂದ್ರಶೇಖರ ಮಠಪತಿಯವನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಠದ ಹಿತೈಷಿಗಳಾದ ಶಿವಪ್ಪ ಚೌಧರಿ, ಸೊಲಬಣ್ಣಾ ತೇಲಿ, ಸದಾಶಿವ ನಾವ್ಹಿ, ಗೂಳಪ್ಪಾ ಚೌಧರಿ, ಬಸವರಾಜ ಮಠದ, ಸಂಕಪ್ಪ ಗಂಗಣ್ಣವರ, ಬಸವರಾಜ ಪಂಚಕಟ್ಟಿಮಠ, ಅಲ್ಲಾಸಾಬ ಯಾದವಾಡ, ಬಿ.ಸಿ.ವಿರಕ್ತಮಠ, ವಾಯ್.ಎಸ್.ಹಂಚಾಟೆ, ಮಂಜುನಾಥ ಗಣಾಚಾರಿ, ಶೇಖಣ್ಣ ಕಡಕೋಂಠ, ಮಲ್ಲಣ್ಣ ಕಡಕೋಳಮಠ, ಸಿದ್ದು ವಿರಕ್ತಮಠ, ನಿಂಗಯ್ಯ ಗಣಚಾರಿ, ಹಾಗೂ ಅಕ್ಕನ ಬಳಗದ ತಾಯಂದಿರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು. ಸುನೀಲ ವಸ್ತçದ ಹಾಗೂ ದುಂಡಯ್ಯ ಸಾಲಿಮಠ ಕಾರ್ಯಕ್ರಮ ನಿರೂಪಿಸಿ ಶಿಕ್ಷಕ ಆರ್.ಜಿ. ಮುತ್ತಿನಮಠ ಮಂಗಳಗೊಳಿಸಿದರು.

ಪ್ರಶಸ್ತಿ ಪ್ರದಾನ: ಗಣಿ ಉದ್ಯಮಿ ಹಾಗೂ ಸಮಾಜದ ಹಿರಿಯರಾದ ಆರ್.ಕೆ. ಮಠದ ಅವರಿಗೆ ವೀರಶೈವ ಸಮಾಜದಿಂದ ಕೊಡಮಾಡುವ ಶ್ರೀ ಜಗದ್ಗುರು ರೇಣುಕಾಚಾರ್ಯರ ಪ್ರಶಸ್ತಿ ಪ್ರದಾನ ಮಾಡಿ ಮಠದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.